ಗಲ್ಫ್

ಶಾರ್ಜಾ ಅಪಾರ್ಟ್ ಮೆಂಟ್ ನ ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡ 250 ಕ್ಕೂ ಹೆಚ್ಚು ಕುಟುಂಬ ! ಆಸ್ತಿಪಾಸ್ತಿ ಬೆಂಕಿಗಾಹುತಿ

Pinterest LinkedIn Tumblr

sha

ಶಾರ್ಜಾಹ್ : ಕಿಂಗ್ ಫೈಝಲ್ ರಸ್ತೆಯಲ್ಲಿರುವ ವಸತಿ ಸಮುಚ್ಚಯ ಅಲ್-ನಾಸೆರ್ ಟವರ್ ನಲ್ಲಿ ಬೆಂಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿದ್ದ 250 ಹೆಚ್ಚು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದು, ಹಲವಾರು ಆಸ್ತಿಪಾಸ್ತಿಗಳು ಬೆಂಕಿಗಾಹುತಿಯಾಗಿರುವ ಘಟನೆ ಗುರುವಾರ ನಡೆದಿದೆ.

36 ಮಹಡಿ, 24 ನಿವಾಸ ಹಾಗೂ 6 ಪಾರ್ಕಿಂಗ್ ವ್ಯವಸ್ಥೆಗಳನ್ನು ಹೊಂದಿರುವ ಈ ಕಟ್ಟದ ಮೊದಲ ಮಹಡಿಯಲ್ಲಿ ನಿನ್ನೆ ಮಧ್ಯಾಹ್ನ ಸುಮಾರು 2.15 ಗಂಟೆಗೆ ಬೆಂಕಿ ಕಾಣಸಿಕೊಂಡಿದೆ. ಸಮಯ ಕಳೆಯುತ್ತಿದ್ದಂತೆ ಬೆಂಕಿ ಕೆನ್ನಾಲಿಗೆ ಮೇಲಿನ ಮಹಿಡಿಗೂ ಹರಡಿದೆ. ಹೀಗೆಯೇ ಇಡೀ ಆಪಾರ್ಟ್ ಮೆಂಟಿಗೆ ಬೆಂಕಿ ತಲುಪಿದೆ. ಇದರ ಪರಿಣಾಮ ಅಪಾರ್ಟ್ ಮೆಂಟ್ ನಲ್ಲಿದ್ದ ಜನರು ತಮ್ಮ ಹಣ ವಸ್ತುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಸುಮಾರು 250ಕ್ಕೂ ಹೆಚ್ಚು ಕುಟುಂಬದ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದು ಮಹತ್ವದ ದಾಖಲೆಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಕಿ ಅವಘಡದಲ್ಲಿ ಈವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ಘಟನೆ ವೇಳೆ ಉಸಿರಾಟ ಸಮಸ್ಯೆ ಎದುರಾದ್ದರಿಂದ ಸುಮಾರು 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟು ಯಶಸ್ವಿಯಾದರು. ಅಸ್ವಸ್ಥಗೊಂಡ ಜನರನ್ನು 5 ಆ್ಯಂಬುಲೆನ್ಸ್ ಮೂಲಕ ಶಾರ್ಜಾದ ಅಲ್-ಖಾಸಿಮಿ ಹಾಗೂ ಅಲ್-ಕುವೈಟಿ ಆಸ್ಪತ್ರೆಗೆ ದಾಖಲಿಸಿದರು.

“ನಾನು ಮತ್ತು ನನ್ನ ಪತ್ನಿ ಇಬ್ಬರು ಕೆಲಸಕ್ಕೆ ಹೋಗಿದ್ದೆವು. ಈ ವೇಳೆ ಫೋನ್ ಮೂಲಕ ನಮಗೆ ಸುದ್ಧಿ ತಿಳಿಯಿತು. ಕೂಡಲೇ ಅಪಾರ್ಟ್ ಮೆಂಟ್ ಬಳಿ ಬಂದ ನಮ್ಮನ್ನು ಪೊಲೀಸರು ಒಳಹೋಗಲು ಬಿಡಲಿಲ್ಲ. ರೂಮಿನಲ್ಲಿ ದಾಖಲೆಗಳಿದ್ದು, ಅವುಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಕೇಳಿಕೊಂಡರು ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ನಮ್ಮ ಎಲ್ಲಾ ದಾಖಲೆಗಳು ಇದೀಗ ಬೆಂಕಿಗಾಹುತಿಯಾಗಿದೆ. ಜೀವನ ನಡೆಸಲು ಇದೀಗ ನಮ್ಮ ಬಳಿ ಹಣವೂ ಇಲ್ಲ. ಏನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ” ಎಂದು ಅಪಾರ್ಟ್ ಮೆಂಟ್ ನಿವಾಸಿ ಸಫ್ವಾನ್ ಅಬ್ದುಲ್ ಕರೀಮ್ ಎಂಬುವವರು ಖಾಸಗಿ ಮಾಧ್ಯಮವೊಂದರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Write A Comment