ಅಬುಧಾಬಿ, ಜೂ.2: ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಭಾರತೀಯರನ್ನು ಕೆಲಸಕ್ಕಾಗಿ ನೇಮಿಸಿಕೊಳ್ಳಲು ಬಯಸುವ ಉದ್ಯೋಗದಾತರು ತನ್ನ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸುವುದನ್ನು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಕಡ್ಡಾಯಗೊಳಿಸಿದೆ.
ಉದ್ಯೋಗದಾತರು ಇಮೈಗ್ರೇಟ್ ಸಿಸ್ಟಮ್ (ಡಿಡಿಡಿ.ಛಿಞಜಿಜ್ಟಠಿಛಿ.ಜಟ.ಜ್ಞಿ) ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕಾಗಿದೆ ಹಾಗೂ ಆ ಬಳಿಕ ಅವರಿಗೆ ನೌಕರರನ್ನು ನೇರವಾಗಿ ಅಥವಾ ಅನುಮೋದಿತ ಏಜಂಟ್‌ಗಳ ಮೂಲಕ ನೇಮಿಸಿಕೊಳ್ಳಲು ಪರವಾನಿಗೆ ನೀಡಲಾಗುವುದು ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ರವಿವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ನೂತನ ವ್ಯವಸ್ಥೆಯನ್ನು ಹಂತಗಳಲ್ಲಿ ಜಾರಿಗೊಳಿಸಲಾಗುವುದು. 50ರಿಂದ 150 ಭಾರತೀಯ ನೌಕರರನ್ನು ನೇಮಿಸಿಕೊಳ್ಳುವ ಉದ್ಯೋಗದಾತರು ಜೂನ್ 30ರೊಳಗೆ ನೋಂದಾಯಿಸಿಕೊಳ್ಳಬೇಕಾಗಿದೆ; 20ರಿಂದ 50 ನೌಕರರನ್ನು ನೇಮಿಸಿಕೊಳ್ಳುವವರು ಜುಲೈ 31ರೊಳಗೆ ನೇಮಿಸಿಕೊಳ್ಳಬೇಕಾಗಿದೆ ಹಾಗೂ 20ಕ್ಕಿಂತ ಕಡಿಮೆ ಮಂದಿಯನ್ನು ನೇಮಿಸಿಕೊಳ್ಳುವವರು ಆಗಸ್ಟ್ 31ರೊಳಗೆ ನೋಂದಾಯಿಸಿಕೊಳ್ಳಬೇಕಾಗಿದೆ. 150ಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸುವ ಉದ್ಯೋಗದಾತರು ತಕ್ಷಣವೇ ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.