ಗಲ್ಫ್

ಸಂಫೂರ್ಣ ಗುಣಮುಖರಾದ ಒಮಾನ್ ಸುಲ್ತಾನ್ ಖಾಬೂಸ್ ಬಿನ್ ಅಲ್ ಸೈಯೀದ್; ಒಮಾನ್ ನಲ್ಲಿ ಸಂಭ್ರಮಾಚರಣೆ

Pinterest LinkedIn Tumblr

oman-Apr 10_2015-003

ಒಮಾನ್ ರಾಷ್ಟ್ರದ ಸುಲ್ತಾನ್ ಖಾಬೂಸ್ ಬಿನ್ ಅಲ್ ಸೈಯೀದ್ ರವರು ಎಂಟು ತಿಂಗಳು ಜರ್ಮನಿಯಲ್ಲಿ ಧೀರ್ಘ ಕಾಲದ ಚಿಕಿತ್ಸೆ ಪಡೆದು ಸಂಫೂರ್ಣ ಗುಣಮುಖರಾಗಿ ಇತ್ತೀಚೆಗೆ ಮಸ್ಕತ್ ಗೆ ಹಿಂತಿರುಗಿದ್ದಾರೆ. ಅವರು ಹಿಂದಿರುಗಿ ಬಂದ ದಿನದಿಂದ ಸತತವಾಗಿ ಒಮಾನ್ ನ ಎಲ್ಲಡೆ ಸಂಭ್ರಮಾಚರಣೆ ನಡೆಯುತ್ತಿದೆ. ಸರಕಾರಿ ಕಛೇರಿಗಳು, ಖಾಸಗಿ ಕಂಪನಿಗಳು, ಶಾಲಾ ಕಾಲೇಜು ಗಳು, ಒಮಾನ್ ನ ವಿವಿಧ ಪಟ್ಟಣಗಳಲ್ಲೆಡೆ ಒಂದಲ್ಲ ಒಂದು ರೀತಿಯಲ್ಲಿ ಸಂಭ್ರಮ ವನ್ನು ಜನರು ಆಚರಿಸುತಿದ್ದಾರೆ.

oman-Apr 10_2015-001

ತಮ್ಮ ಸರಳ ವ್ಯಕ್ತಿತ್ವ, ನಡೆ ನುಡಿ ಯಿಂದ ಸುಲ್ತಾನ್ ಖಾಬೂಸ್ ಒಮಾನ್ ಪ್ರಜೆಗಳಲ್ಲದೆ, ಭಾರತೀಯರು, ಇಲ್ಲಿ ವಾಸಿಸುತ್ತಿರುವ ಬೇರೆ ವಿದೇಶಿಯರು ಮತ್ತು ಪಕ್ಕದ ಜಿ.ಸಿ.ಸಿ. ರಾಷ್ಟ್ರಗಳ ಜನರಿಗೆ ಅಚ್ಚುಮೆಚ್ಚು, ೧೯೭೦ ರಿಂದ ಒಮಾನ್ ಆಡಳಿತದ ಚುಕ್ಕಾಣಿ ಹಿಡಿದಿರುವ ೭೪ ವರ್ಷದ ಸುಲ್ತಾನ್ ರವರ ಆರೋಗ್ಯದ ಕುರಿತು ಒಮಾನಿ ಪ್ರಜೆಗಳಲ್ಲದೆ, ಅನಿವಾಸಿ ಪ್ರಜೆಗಳ ಸಹಿತ ಬಹುತೇಕ ಎಲ್ಲರು ಚಿಂತಿತರಾಗಿದ್ದರು. ಜನಾನುರಾಗಿ ಯಾಗಿ ಆಡಳಿತ ನಡೆಸುತ್ತಿರುವ ಸುಲ್ತಾನ್ ರವರು ಕೇವಲ ಒಮಾನ್ ಪ್ರಜೆಗಳಲ್ಲದೆ ಬೇರೆ ದೇಶಗಳಿಂದ ಇಲ್ಲಿಗೆ ಉದ್ಯೋಗಕ್ಕಾಗಿ ಬಂದಿರುವ ಪ್ರತಿಯೊಬ್ಬರಿಗೆ ಪ್ರೀತಿಪಾತ್ರರಾಗಿದ್ದಾರೆ. ಅವರ ನಾಯಕತ್ವದಲ್ಲಿ ಒಮಾನ್ ರಾಷ್ಟ್ರ ಸತತ ಅಭಿವೃದ್ದಿ ಕಾಣುತ್ತಿದೆ, ದೇಶ ಅನೇಕ ಕಠಿಣ ಸವಾಲು ಗಳನ್ನು ಎದುರಿಸಿ ಪ್ರಗತಿಯತ್ತ ಸಾಗಿದೆ. ಸಂಪೂರ್ಣ ಒಮಾನ್ ನ ವಿವಿಧ ಪ್ರಾಂತ್ಯದ ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

oman-Apr 10_2015-002

ಇಡೀ ಮಧ್ಯ ಪ್ರಾಚ್ಯದಲ್ಲಿ ಕೆಲ ರಾಷ್ಟ್ರಗಳ ಸರ್ವಾಧಿಕಾರಿ ಧೋರಣೆ ಖಂಡಿಸಿ ಒಂದಲ್ಲ ಒಂದು ಕಡೆ ದಂಗೆ ಗಳು, ಯುದ್ಧಗಳು, ಸರ್ಕಾರ ಮತ್ತು ಬಂಡುಕೋರರ ಯುದ್ಧ ಭೀತಿ ವಾತಾವರಣ ನಿರ್ಮಾಣವಾಗಿರುವ ಸನ್ನಿವೇಶದಲ್ಲೂ ಸಹ ಒಮಾನ್ ದೇಶದಲ್ಲಿ ಅಂತಹ ಚಟುವಟಿಕೆ ಗಳಿಗೆ ಆಸ್ಪದ ಕೊಡದೆ ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಜನ ಮನ್ನಣೆ ಗಳಿಸಿದ್ದಾರೆ.

oman-Apr 10_2015-004

೩ ಲಕ್ಷ ಚದರ ಕಿಮಿ ವಿಸ್ತೀರ್ಣ ದ ಒಮಾನ್ ರಾಷ್ಟ್ರದಾದ್ಯಂತ ಅಂತರಾಷ್ಟ್ರೀಯ ದರ್ಜೆಯ ರಸ್ತೆ ಮತ್ತು ಹೆದ್ದಾರಿಗಳ ನಿರ್ಮಾಣ ಗಳು ಪ್ರಪಂಚದ ಅತ್ಯುತ್ತಮ ೧೦ ರಾಷ್ಟ್ರಗಳ ಪಟ್ಟಿಯಲ್ಲಿ ಒಮಾನ್ ಗೆ ಸ್ಥಾನ ಸಿಗುವಂತೆ ಮಾಡಿದೆ. ಪ್ರಜೆಗಳಿಗೆ ಮೂಲ ಭೂತ ಸೌಕರ್ಯ ಗಳಾದ, ವಸತಿ, ರಸ್ತೆ, ನೀರು, ವಿದ್ಯುತ್, ಶಾಲಾ ಕಾಲೇಜುಗಳು, ಆಸ್ಪತ್ರೆ ಇನ್ನು ಮುಂತಾದವುಗಳನ್ನು ಒಮಾನ್ ರಾಷ್ಟ್ರದ ಎಲ್ಲೆಡೆ ದೊರಕುವಂತೆ ಮಾಡಿದ್ದಾರೆ. ಬೇರೆ ರಾಷ್ಟ್ರಗಳಲ್ಲಿ ದೊರಕುವಂತೆ, ಇಲ್ಲಿ ಅನಿಲ ಮತ್ತು ಪೆಟ್ರೋಲ್ ಉತ್ಪನ್ನ ಸಂಪನ್ಮೂಲ ಗಳು ಇಲ್ಲಿ ಕಡಿಮೆ. ಆದರೂ ಅದರಲ್ಲಿ ಬರುವ ಆದಾಯ ದಿಂದ ಒಮಾನ್ ಆದ್ಯಂತ ಹಲವಾರು ಯೋಜನೆ ಗಳನ್ನು ರೂಪಿಸಿ ಸಂಫೂರ್ಣ ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

oman-Apr 10_2015-005

೨೦೧೧ ರಲ್ಲಿ ಹಲವು ದೇಶಗಳಲ್ಲಿ ನಡೆದ ಬಂಡುಕೋರರ ದಂಗೆ ಗಳಿಂದ ಪ್ರೇರಿತರಾದ ಕೆಲವರು ಸರ್ಕಾರಕ್ಕೆ ಹಲವು ಸವಾಲು ಗಳನ್ನು ಒಡ್ಡಿದರು. ಅವೆಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಆಡಳಿತದಲ್ಲಿ ಬಹುತೇಕ ಬದಲಾವಣೆ ಯನ್ನು ತಂದು, ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ, ಕನಿಷ್ಟ ವೇತನ, ಉಚಿತ ವೈದ್ಯಕೀಯ ಸೌಲಭ್ಯ, ಉಚಿತ ಶಿಕ್ಷಣ ಇನ್ನು ಮುಂತಾದ ಕಾಯ್ದೆ ಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.

oman-Apr 10_2015-006

ತಮ್ಮ ಆಡಳಿತ ವೈಖರಿ ಯಿಂದ ಸದಾ ಜನಾನುರಾಗಿಯಾಗಿರುವ ಸುಲ್ತಾನ್ ರವರು ದೇಶ ವಿದೇಶಗಳಲ್ಲಿ ಹೆಸರು ಪಡೆದಿದ್ದು ಅಲ್ಲದೆ ನೆರೆ ರಾಷ್ಟ್ರಗಳೊಂದಿಗೆ ಅತ್ಯುತ್ತಮ ಸಂಭಂದ ವನ್ನು ಹೊಂದಿ ಈ ಮಟ್ಟದ ಹೆಸರು ಗಳಿಸುವುದಕ್ಕೆ ಈ ಕೆಳಗಿನವು ಅತ್ಯಂತ ಪ್ರಮುಖ ಕಾರಣಗಳು.

ಸದಾ ಜನರ ಏಳಿಗೆಗೆ ಚಿಂತಿಸುವ ಪ್ರವೃತ್ತಿ.
ದೇಶದ ಪ್ರಜೆಗಳಿಗಾಗಿ ವಿಶಾಲವಾಗಿ ಯೋಚಿಸುವ ಹಾಗೂ ದೂರ ದೃಷ್ಟಿ ಯನ್ನು ಹೊಂದಿರುವ ನಾಯಕತ್ವದ ಗುಣ.
ದೇಶದ ಹಿತಾಸಕ್ತಿಗೆ ತಮ್ಮ ಮೊದಲ ಗಮನ.
ದೇಶದ ಪ್ರಜೆಗಳಿಗಾಗಿ ಮತ್ತು ಅನಿವಾಸಿ ಪ್ರಜೆಗಳಿಗಾಗಿ ಒಂದೇ ಕಾನೂನು.
ರಾಷ್ಟ್ರಾಭಿವೃದ್ದಿಗೆ ವೈಯುಕ್ತಿಕವಾಗಿ ತೊಡಗಿಕೊಂಡಿರುವುದು. ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿ.
ಧರ್ಮ ಸಹಿಷ್ಣುತೆ, ಸಮಾನತೆ, ಶಾಂತಿ ಮತ್ತು ಮಾನವೀಯತೆಯ ಪ್ರತೀಕ.
ಕೂಲಂಕುಶ ವಾಗಿ ಯೋಚಿಸದೆ, ಚಿಂತಿಸದೆ, ಯಾವುದೇ ಜಾಗತಿಕ ನಾಯಕರನ್ನು ಹಿಂಬಾಲಿಸುವುದು ಮತ್ತು ಓಲೈಸಿ ಕೊಳ್ಳುವ ಗೊಡವೆಗೆ ಹೋಗದೆ ಇರುವ ಅವರ ಗುಣ.
ಗಲ್ಫ್ ರಾಷ್ಟ್ರಗಳಲ್ಲಿ (ಜಿಸಿಸಿ) ಸಣ್ಣ ಪುಟ್ಟ ಭಿನ್ನಬಿಪ್ರಾಯ ಅಥವ ಯಾವುದಾದರು ಸಮಸ್ಯೆ ಉಧ್ಬವಿಸಿದಾಗ ಮುಂದಾಳತ್ವ ವಹಿಸಿ ಎಲ್ಲವನ್ನು ಬಗೆಹರಿಸಿ ಎಲ್ಲರನ್ನು ಒಂದು ಮಾಡಿ ಒಟ್ಟಿಗೆ ಕರೆದೊಯ್ಯುವ ನಾಯಕತ್ವದ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರ ವಾಗಿದೆ.
ಪ್ರಾಮಾಣಿಕತೆಗೆ ಮತ್ತು ಬದ್ದತೆ ಗೆ ಹೆಸರುವಾಸಿ.
ಜಾತಿ ಧರ್ಮ, ಬಡವ ಶ್ರೀಮಂತ, ಮೇಲು ಕೀಳು ಎನ್ನದೆ ಎಲ್ಲ ಪ್ರಜೆಗಳಲ್ಲಿ ಸಮಾನತೆ ತರುವಲ್ಲಿ ಪ್ರಮುಖ ಪಾತ್ರ.
ಪ್ರತಿಯೊಬ್ಬರಿಗೂ ಸುರಕ್ಷತೆ ನೀಡುವಲ್ಲಿ ಯಶಸ್ವಿ.
ಮೂಲಭೂತ ಸೌಕರ್ಯ ಗಳಾದ, ವಸತಿ, ರಸ್ತೆ, ನೀರು, ವಿದ್ಯುತ್, ಶಾಲಾ ಕಾಲೇಜುಗಳು, ಆಸ್ಪತ್ರೆ ಇನ್ನು ಮುಂತಾದವುಗಳನ್ನು ಒಮಾನ್ ರಾಷ್ಟ್ರದ ಎಲ್ಲೆಡೆ ದೊರಕುವಂತೆ ಮಾಡಿದ್ದಾರೆ.
ಎಲ್ಲ ರಾಷ್ಟ್ರಗಳೊಂದಿಗೆ ಉತ್ತಮ ಭಾಂದವ್ಯ.

oman-Apr 10_2015-007

ಮೇಲಿನವು ಕೆಲವೇ ಕಾರಣಗಳಿರಬಹುದು, ಸ್ಥಳೀಯ ಜನರಲ್ಲದೆ ಇತರೆ ದೇಶದ ಪ್ರಜೆಗಳು ಸಹ ವೈಯುಕ್ತಿಕವಾಗಿ ಗೌರವಿಸಲ್ಪಡುವ ಕೆಲವೇ ಕೆಲವು ಜಾಗತಿಕ ನಾಯಕರಲ್ಲಿ ಸುಲ್ತಾನ್ ರವರೊಬ್ಬರು ಎನ್ನುವುದು ಉತ್ಪ್ರೇಕ್ಷೇ ಯಾಗಲಾರದು.

oman-Apr 10_2015-008

ಸುಲ್ತಾನ್ ಖಾಬೂಸ್ ರವರು ಒಮಾನ್‌ನ ಸಲಾಲದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಮಾಧ್ಯಮಿಕ ಶಿಕ್ಷಣ ಪಡೆದಿರುವುದು ಪೂನಾದಲ್ಲಿ. ಅವರು ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಶಿಷ್ಯ ರಾಗಿದ್ದರು ಎನ್ನುವುದಕ್ಕೆ ಭಾರತೀಯರಿಗೆ ಹೆಮ್ಮೆ ಯಿದೆ. ಒಮಾನ್ ರಾಷ್ಟ್ರ ಧರ್ಮ ಸಹಿಷ್ಣುತೆಗೆ ಹೆಸರುವಾಸಿ, ಇಲ್ಲಿ ಮಸೀದಿಗಳಲ್ಲದೆ, ಚರ್ಚ್ ಮತ್ತು ದೇವಾಲಯಗಳು ಸಹ ಇವೆ. ಅದಾಜು ೪೦ ಲಕ್ಷ ಜನಸಂಖ್ಯೆ ಯಿದ್ದು ಅದರಲ್ಲಿ ೧೭ ಲಕ್ಷ ಅನಿವಾಸಿ ಉದ್ಯೋಗಿಗಳಿದ್ದಾರೆ. ಅವರಲ್ಲಿ ೪೦% ಭಾರತೀಯರಿದ್ದು ಹೆಚ್ಚಿನವರು ಕೇರಳ ಕ್ಕೆ ಸೇರಿದವರಿದ್ದಾರೆ. ಉಳಿದಂತೆ, ತಮಿಳುನಾಡು, ಆಂಧ್ರ, ಕರ್ನಾಟಕ, ಗುಜರಾತ್, ಮತ್ತಿತರ ರಾಜ್ಯದವರಿದ್ದಾರೆ.

oman-Apr 10_2015-009

ಪಕ್ಕದ ದುಬೈ, ಅಭುದಾಭಿ, ಕತಾರ್, ಬಹರೈನ್, ಕುವೈತ್ ಗಳಲ್ಲಿ ಸಾವಿರಾರು ಕಿಲೋ ಮೀಟರ್ ಗಳ ವಿಸ್ತೀರ್ಣದಲ್ಲಿ ಮಾನವ ನಿರ್ಮಿತ ಆಕಾಶ ಮುಖಿ ಬಹುಮಹಡಿ ಕಟ್ಟಡಗಳು , ಪ್ರವಾಸಿ ತಾಣಗಳಿಗೆ ಕೊರತೆಯಿಲ್ಲ. ಆದರೆ ಒಮಾನ್ ನಲ್ಲಿ ನಿಸರ್ಗ ನಿರ್ಮಿತ ಪ್ರವಾಸಿ ತಾಣಗಳಿಗೆ ಕೊರತೆ ಯಿಲ್ಲ, ಅವುಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿ, ಹಲವು ದೇಶಗಳಲ್ಲಿ ಒಮಾನ್ ಪ್ರವಾಸದ ಬಗ್ಗೆ ಸತತ ಪ್ರಚಾರ ನೀಡುತಿದ್ದು, ಅದರ ಫಲವಾಗಿ ಅಕ್ಟೋಬರ್ ನಿಂದ ಮಾರ್ಚ್ ನವರೆಗೆ ಲಕ್ಷಾಂತರ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಮರಳುಗಾಡಿನ ಮಲೆನಾಡು ಎಂದೇ ಪ್ರಸಿದ್ದವಾಗಿರುವ ದೋಫಾರ್ ಪ್ರಾಂತ್ಯದ ಸಲಾಲ ಕ್ಕೆ ಜೂನ್ ಮಧ್ಯ ಭಾಗದಿಂದ ಸೆಪ್ಟ್ಂಬರ್ ರವರೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸೋಧ್ಯಮ ಅಭಿವೃದ್ದಿ ಯಿಂದ ಸ್ಥಳೀಯರಿಗೆ ವಿವಿಧರೀತಿಯಲ್ಲಿ ಲಾಭಗಳಾಗಿವೆ.

oman-Apr 10_2015-010

ಸುಲ್ತಾನ್ ರವರ ಆರೋಗ್ಯದ ಕುರಿತು ಕೇವಲ ಒಮಾನಿಗಳಲ್ಲದೆ ಇಲ್ಲಿ ವಾಸಿಸುತ್ತಿರುವ ಎಲ್ಲ ದೇಶಗಳ ಪ್ರಜೆಗಳಲ್ಲಿ ಸಹ ಆತಂಕಕ್ಕೆ ಕಾರಣವಾಗಿತ್ತು. ಹಲವು ಕಡೆ ಸತತ ಪ್ರಾರ್ಥನೆ ಗಳು ನಡೆಯುತಿದ್ದವು. ನಮ್ಮ ಕರ್ನಾಟಕದ ಉಧ್ಯಮಿ ಅನಿವಾಸಿ ಭಾರತೀಯರಾಗಿರುವ ಕೊಡ್ಯಡ್ಕ ಜಯರಾಂ ಹೆಗ್ಡೆ ಅವರು ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಸುಲ್ತಾನ್ ರವರ ಆರೋಗ್ಯ ಸುಧಾರಣೆಗಾಗಿ ನೂರಾರು ಭಕ್ತರ ಸಮ್ಮುಖದಲ್ಲಿ ಚಂಡಿಕಾ ಮಹಾಯಾಗ ಮತ್ತು ಸಾಮೂಹಿಕ ಪ್ರಾರ್ಥನಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದರು.

oman-Apr 10_2015-011

ನಂತರ ಬರ್ಕಾದ ಫಾರ್ಮ್ ಹೌಸ್ ಒಂದರಲ್ಲಿ ನ.೭ ರಿಂದ ೯ ರವರೆಗೆ ಸುಲ್ತಾನ್ ರವರ ಆರೋಗ್ಯ ವೃದ್ಧಿಗಾಗಿ ಬೆಂಗಳೂರಿನ ಅಂತಾರಾಷ್ಟ್ರೀಯ ವಾಸ್ತು ತಜ್ಞರು, ಆಧ್ಯಾತ್ಮಿಕ ಚಿಂತಕರು, ವೈಜ್ಞಾನಿಕ ಜ್ಯೋತಿಷ್ಯರಾಗಿರುವ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ನೇತೃತ್ವದಲ್ಲಿ ಮಹಾಧನ್ವಂತರಿ ಯಾಗ, ಪೂರ್ಣ ನವಗ್ರಹ ಶಾಂತಿ, ಮಹಾಮೃತ್ಯುಂಜಯಯಾಗ, ಮಹಾವಿಷ್ಣುಯಾಗ ನಡೆಸಿದ್ದರು.

ಒಮಾನ್ ನಲ್ಲಿ ಸಂತೋಷ ಮರುಕಳಿಸಿದೆ, ಸುಲ್ತಾನ್ ರವರ ಆರೋಗ್ಯ ದಲ್ಲಿ ಚೇತರಿಕೆ ಕಂಡಿದೆ. ಎಂದಿನಂತೆ ಆಡಳಿತ ಕಡೆ ಗಮನ ವಹಿಸಿದ್ದಾರೆ. ನಿನ್ನೆ ಬೈತ್ ಅಲ್ ಬರ್ಕಾ ಪ್ಯಾಲೇಸ್ ನಲ್ಲಿ ಆಡಳಿತ ವರ್ಗದ ಎಲ್ಲ ಮಂತ್ರಿ ಗಳು ಪ್ರಮುಖರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಅಲ್ಲಾಹು ರವರ ಕೃಪೆಯಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಬಗ್ಗೆ ಅತೀವ ಸಂತಸ ವನ್ನು ವ್ಯಕ್ತ ಪಡಿಸಿ, ತಮ್ಮ ಆರೋಗ್ಯದ ಕುರಿತು ಕಾಳಜಿವಹಿಸಿದ, ಪ್ರಾರ್ಥನೆಗಳನ್ನು ಸಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದರು. ತಮ್ಮ ಅನುಪಸ್ಥಿತಿಯಲ್ಲಿ ದೇಶದ ಪ್ರಗತಿ ಯಲ್ಲಿ ಕುಂಠಿತವಾಗದಂತೆ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲರಿಗು ಧನ್ಯವಾದಗಳನ್ನು ಹೇಳಿದರು. ಕಳೆದ ೮ ತಿಂಗಳಲ್ಲಿ ನಡೆದ ಅಭಿವೃದ್ದಿ ಯ ಕುರಿತು ಮಾಹಿತಿಯನ್ನು ಪಡೆದರು. ಮಧ್ಯ ಪ್ರಾಚ್ಯ ದಲ್ಲಿನ ಆಗುಹೋಗು ಗಳ ಬಗ್ಗೆ ಚರ್ಚೆಯನ್ನು ನಡೆಸಿದರು.

oman-Apr 10_2015-012

ಜನರ ಒಳಿತಿಗಾಗಿ ಚಿಂತಿಸುವ, ಇಂತಹ ಶಾಂತಿಪ್ರಿಯ ಮಹಾನ್ ನಾಯಕರಿಗೆ ದೇವರು ನೂರಾರು ವರ್ಷಗಳ ಆಯಸ್ಸು ಆರೋಗ್ಯಗಳನ್ನು ದಯಪಾಲಿಸಲಿ ಜನರೆಲ್ಲ ಪ್ರಾರ್ಥಿಸುತಿದ್ದಾರೆ, ಇನ್ನು ಮುಂದೆ ಯಾವುದೇ ತೊಂದರೆಗಳು ಬಾರದಂತೆ ಸುಲ್ತಾನ್ ರವರಿಗೆ ಒಳ್ಳೆಯದಾಗಲಿ ಎಂದು ನಾವೆಲ್ಲ ಆಶಿಸೋಣ.

ವರದಿ: ಪಿ.ಎಸ್.ರಂಗನಾಥ

Photo courtesy: Internet

Write A Comment