ದುಬೈ, ಜ.24: ಯಕ್ಷಮಿತ್ರರು ದುಬೈ ಯುಎಇ ಸಂಘಟನೆ ಕಳೆದ ಹನ್ನೆರಡು ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಕಲಾ ಸೇವೆಯ ಮುಂದುವರಿಕೆಯಾಗಿ ತಮ್ಮ ಹನ್ನೆರಡನೆ ವಾರ್ಷಿಕ ಕಾರ್ಯಕ್ರಮವಾಗಿ ಇದೇ ಬರುವ 12-06-2015ನೆ ಶುಕ್ರವಾರದಂದು ದುಬೈ ಕರಮದ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಬಾರಿ ಪೌರಾಣಿಕ ಪುಣ್ಯ ಕಥಾನಕ, ಕನ್ನಡ ಯಕ್ಷಗಾನ ಪ್ರಸಂಗ, ‘ಮಣಿಕಂಠ ವಿಜಯ-ರತಿ ಕಲ್ಯಾಣ’ದ ಮುಹೂರ್ತ ಪೂಜೆ ಜನವರಿ 16ರಂದು ವುಡ್ಶೈನ್ ಕಾರ್ಪೆಂಟರ್ಸ್ ಕಚೇರಿಯಲ್ಲಿ ನೆರೆದ ಯಕ್ಷಗಾನ ಕಲಾಭಿಮಾನಿಗಳ ಸಮ್ಮುಖ ಅದ್ಭುತವಾಗಿ ನೆರವೇರಿತು.
ಎಂ.ವಾಸುದೇವ ಭಟ್ಟರ ನೇತೃತ್ವದಲ್ಲಿ ಶ್ರೀಯುತ ಪುತ್ತಿಗೆ ವೆಂಕಟೇಶ ಶಾಸ್ತ್ರಿ ಮತ್ತು ಶಿವರಾಜ್ ಭಟ್ ಮುಹೂರ್ತ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು. ಕಲಸ ಪ್ರತಿಷ್ಠಾಪನೆ, ಹಿರಿಯ ಸದಸ್ಯರಿಂದ ದೀಪ ಬೆಳಗಿಸುವಿಕೆ, ಭಜನೆಗಳ ಮೂಲಕ ಕ್ರಮಬದ್ಧವಾಗಿ ಸಾಗಿದ ಪೂಜಾ ವಿಧಿ, ಮಹಾಮಂಗಳಾರತಿಯ ನಂತರ ಸಾಂಕೇತಿಕವಾಗಿ ಜಾಗಟೆ, ಪ್ರಸಂಗ ಪುಸ್ತಕಗಳನ್ನು ಹಸ್ತಾಂತರಿಸಿ-ಕಲಾವಿದರೆಲ್ಲ ರಂಗ ಪ್ರವೇಶ ಮಾಡಿ, ಪ್ರಥಮ ದೃಶ್ಯದ ರಂದ ತಾಲೀಮು ಕೂಡಾ ನಡೆಸಲಾಯಿತು.
ಪ್ರಸಾದ ವಿತರಣೆ, ಅನ್ನಸಂತರ್ಪಣೆಯ ನಂತರ ನಡೆದ ಯಕ್ಷಮಿತ್ರರ ಕಲಾವಿದರು-ಅಭಿಮಾನಿಗಳ ಸಭೆಯಲ್ಲಿ ಕಥಾನಕದ ಸೂಕ್ಷ್ಮ ಪರಿಚಯ ಮಾಡಿ, ಜೂನ್ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲವನ್ನು, ದುಬೈಯ ಕಲಾರಸಿಕರಿಂದ, ಮಾಧ್ಯಮದವರಿಂದ ಯಾಚಿಸಲಾಯಿತು. ತಾಯ್ನಡಿನಿಂದ ಆಗಮಿಸಲಿರುವ ಅತಿಥಿ ಕಲಾವಿದರ ಅಂತಮ ಪಟ್ಟಿ-ಪರಿಚಯಗಳನ್ನು ಮುಂದಿನ ಪ್ರಕಟಣೆಯಲ್ಲಿ ತಿಳಿಸಲಾಗುವುದು ಎಂದು ನಿರ್ಧರಿಸಲಾಯಿತು. ವುಡ್ಶೈನ್ ಕಾರ್ಪೆಂಟರ್ಸ್ನವರು ಕಲಾವಿದರ ಸಹಕಾರದಿಂದ ನಿರ್ಮಿಸಿದ ರಂಗಸ್ಥಳ ಮಾದರಿಯ ವೇದಿಕೆ ಮತ್ತು ಬಣ್ಣದ ವೇಷಗಳ ಮಾದರಿಯಿಂದ ಸೃಂಗರಿಸಲ್ಪಟ್ಟ ಪೂಜಾ ಭವನ ಕಲಾಭಿಮಾನಿಗಳ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ನೂತನ ತರಗತಿಗಳಿಗೆ ಸೇರ್ಪಡೆಗೊಂಡ ವಿದ್ಯಾರ್ಥಿ ಕಲಾವಿದರು ಮತ್ತು ಹೊಸ ಕಲಾವಿದರನ್ನು ಯಕ್ಷಮಿತ್ರರ ತಂಡಕ್ಕೆ ಸ್ವಾಗತಿಸಲಾಯಿತು. 2015ರ ಯಕ್ಷಗಾನ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ, ಸಮಯದ ಮಿತಿಗೊಳಪಡಿಸಿ ಮತ್ತು ಪ್ರತಿ ವರ್ಷದಂತೆ ಸಮಯಕ್ಕೆ ಸರಿಯಾಗಿ ಆರಂಭಿಸಲು ನಿರ್ಧರಿಸಲಾಯಿತು. ಕೊನೆಯಲ್ಲಿ ಹಿರಿಯ ಸದಸ್ಯ ವಿಠಲ ಶೆಟ್ಟಿ ಧನ್ಯವಾದರ್ಪಣೆಗೈದರು.