ಕನ್ನಡ ವಾರ್ತೆಗಳು

ನಗರದಲ್ಲಿ ಹೆಚ್ಚುತ್ತಿರುವ ಮಲೇರಿಯಾ : ನಾಗರೀಕರಲ್ಲಿ ಆತಂಕ

Pinterest LinkedIn Tumblr

malaria_mosquito

ಮಂಗಳೂರು, ಮೇ.21:  ಮಂಗಳೂರಿನಲ್ಲಿ ಮಲೇರಿಯಾದ ಆತಂಕ ದೂರವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗ ತಡೆಗಟ್ಟಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಗ್ರಾಮೀಣ ಭಾಗದಲ್ಲಿ ರೋಗ ನಿಯಂತ್ರಣಕ್ಕೆ ಬಂದಿದೆ. ಆದರೆ, ನಗರ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ನಗರವಾಸಿಗಳು ಆತಂಕಪಡುವಂತಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 2015ರ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಗರಗಳಲ್ಲಿ 86,938ಜನರ ರಕ್ತ ಸಂಗ್ರಹ ಮಾಡಲಾಗಿತ್ತು. ಇವುಗಳಲ್ಲಿ 5,977 ಮಲೇರಿಯಾ ಪ್ರಕರಣ ದೃಢಪಟ್ಟಿತ್ತು, ಅವುಗಳಲ್ಲಿ 512 ಗಂಭೀರ ಪ್ರಕರಣಗಳಾಗಿದ್ದವು. 2016ರ ಸಾಲಿನ 4 ತಿಂಗಳಿನಲ್ಲಿ ಒಟ್ಟು 97,811 ಮಂದಿಯ ರಕ್ತಸಂಗ್ರಹ ಮಾಡಲಾಗಿದ್ದು, 1,497 ಮಲೇರಿಯಾ ಪ್ರಕರಣ ದಾಖಲಾಗಿವೆ.

ಉಡುಪಿ ಜಿಲ್ಲೆಯಲ್ಲಿ 2015ರ ಸಾಲಿನಲ್ಲಿ 2,25,332 ಮಂದಿಯ ರಕ್ತಪರೀಕ್ಷೆ ನಡೆಸಲಾಗಿತ್ತು. ಇವರಲ್ಲಿ 1,366 ಮಂದಿ ಮಲೇರಿಯಾದಿಂದ ಬಳಲುತ್ತಿರುವುದು ತಿಳಿದುಬಂದಿತ್ತು. ಪ್ರಸ್ತುತ ಸಾಲಿನಲ್ಲಿ ಈಗಾಗಲೇ 63,370 ಮಂದಿಯ ಪರೀಕ್ಷೆ ನಡೆಸಲಾಗಿದ್ದು, 251 ಮಂದಿ ಮಲೇರಿಯಾದಿಂದ ಬಳಲುತ್ತಿರುವುದು ತಿಳಿದುಬಂದಿದೆ.

ನಗರದಲ್ಲಿಯೇ ಹೆಚ್ಚು:

2015ನೇ ಸಾಲಿನಲ್ಲಿ ಜನವರಿಯಲ್ಲಿ 30, ಫೆಬ್ರವರಿಯಲ್ಲಿ 29, ಮಾರ್ಚ್‌ನಲ್ಲಿ 23 ಹಾಗೂ ಏಪ್ರಿಲ್‌ನಲ್ಲಿ 21 ಮಲೇರಿಯಾ ಗಂಭೀರ ಪ್ರಕರಣಗಳು ನಗರ ವ್ಯಾಪ್ತಿಯಲ್ಲಿ ದಾಖಲಾಗಿದ್ದವು. ಆದರೆ ಈ ನಾಲ್ಕು ತಿಂಗಳನ್ನು 2016ರ ಸಾಲಿಗೆ ಹೋಲಿಕೆ ಮಾಡಿದಾಗ ಒಟ್ಟು 1,420 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು, ಇವುಗಳ ಪೈಕಿ ಜನವರಿ ತಿಂಗಳಲ್ಲಿ 85, ಫೆಬ್ರವರಿಯಲ್ಲಿ 36, ಮಾರ್ಚ್‌ನಲ್ಲಿ 27 ಹಾಗೂ ಏಪ್ರಿಲ್‌ನಲ್ಲಿ 49 ಪ್ರಕರಣಗಳು ದಾಖಲಾಗಿವೆ.

ಗ್ರಾಮೀಣ ಭಾಗದಲ್ಲಿ ಇಳಿಮುಖ:

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 2015ಕ್ಕೆ ಹೋಲಿಕೆ ಮಾಡಿದರೆ 2016ರಲ್ಲಿ ರೋಗ ಹತೋಟಿಗೆ ಬಂದಿದೆ. 2015ರಲ್ಲಿ ಗ್ರಾಮೀಣ ಭಾಗದಲ್ಲಿ ದಾಖಲಾದ ಪ್ರಕರಣಗಳು 503. ಪ್ರಸ್ತುತ ಸಾಲಿನಲ್ಲಿ ಇದುವರೆಗೆ 77 ಪ್ರಕರಣಗಳು ಮಾತ್ರ ದೃಢಪಟ್ಟಿದೆ.

ವರದಿ ಕೃಪೆ : ಸಂ.ವಾ.

Comments are closed.