ಕನ್ನಡ ವಾರ್ತೆಗಳು

ಎನ್‌ಪಿಎ ಪ್ರಮಾಣ ಏರಿಕೆಯಿಂದ ಕಾರ್ಪೊರೇಶನ್ ಬ್ಯಾಂಕ್‌ಗೆ 506 ಕೋಟಿ ರೂ. ನಷ್ಟ : ಜೈಕುಮಾರ್ ಗರ್ಗ್

Pinterest LinkedIn Tumblr

Corp_Bank_Press_1

ಕಾರ್ಪೊರೇಶನ್ ಬ್ಯಾಂಕ್ ರೂ.3,45,493 ಕೋಟಿ ಆರ್ಥಿಕ ವಹಿವಾಟು

ಮಂಗಳೂರು, ಮೆ 19: ಕಾರ್ಪೊರೇಶನ್ ಬ್ಯಾಂಕ್ ಕಳೆದ ಮಾರ್ಚ್ 2016ರ ಅಂತ್ಯದಲ್ಲಿ 3,45,493 ಕೋಟಿ ರೂ. ಆರ್ಥಿಕ ವಹಿವಾಟು ನಡೆಸಿದೆ. ಈ ಬಾರಿ ಎನ್‌ಪಿಎ ಪ್ರಮಾಣ ಏರಿಕೆಯಾಗಿದ್ದು, ಬ್ಯಾಂಕ್‌ಗೆ 506 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೈಕುಮಾರ್ ಗರ್ಗ್ ತಿಳಿಸಿದ್ದಾರೆ.

ಬುಧವಾರ ಮಂಗಳುರಿನ ಪ್ರಧಾನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆರ್‌ಬಿಐ ನಿರ್ದೇಶದನ್ವಯ ಅನುತ್ಪಾದಕ ಆಸ್ತಿ (ಎನ್‌ಪಿಎ)ಗೆ ಸಂಬಂಧಿಸಿದಂತೆ ಮೀಸಲು ನಿಧಿ ಇರಿಸಬೇಕಾದ್ದರಿಂದ ಬ್ಯಾಂಕ್ ನಷ್ಟ ಅನುಭವಿಸಬೇಕಾಯಿತು. ಕಾರ್ಪ್ ಬ್ಯಾಂಕ್ 2015ರ ಆರ್ಥಿಕ ವರ್ಷದಲ್ಲಿ 584 ಕೋಟಿ ರೂ.ನಿವ್ವಳ ಲಾಭ ಗಳಿಸಿತ್ತು. ಈ ಸಂದರ್ಭದಲ್ಲಿ ನಿವ್ವಳ ಎನ್‌ಪಿಎ ಪ್ರಮಾಣವೂ ಶೇ 3.08ರಷ್ಟಿತ್ತು. ಈ ಬಾರಿ ಪ್ರಮಾಣ 6.53ಕ್ಕೆ ಏರಿಕೆಯಾಗಿದೆ. ಸಾಲ ವಸೂಲಾತಿಯಿಂದಾಗಿರುವ ಹಿನ್ನಡೆಯಿಂದ ಮತ್ತು ಲಾಭಗಳಿಕೆಯಲ್ಲಿ ಇಳಿಮುಖವಾಗಲು ಒಂದು ಕಾರಣವಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಸಾಧನೆ ಉತ್ತಮಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Corp_Bank_Press_2

Corp_Bank_Press_3

ಮೂಲ ಸೌಕರ್ಯ, ಉಕ್ಕು, ಇಂಧನ ವಲಯಗಳಲ್ಲಿ ಪ್ರಗತಿ ಕುಂಠಿತವಾಗಿದ್ದು, ಆ ಖಾತೆಗಳಲ್ಲಿ ತೊಂದರೆ ಕಾಣಿಸಿದೆ. ಸಾಲಗಾರರು 90 ದಿನದೊಳಗೆ ಬಡ್ಡಿ ಮತ್ತು ಸಾಲದ ಕಂತು ಪಾವತಿಸಲು ವಿಫಲವಾದರೆ ಆ ಖಾತೆ ಅನುತ್ಪಾದಕ ಆಸ್ತಿ ಖಾತೆಯಾಗುತ್ತದೆ. ಒಮ್ಮೆ ಈ ಕ್ಷೇತ್ರದಲ್ಲಿ ಪ್ರಗತಿ ಕಾಣಿಸಿಕೊಂಡರೆ ಅಸಲು ಮತ್ತು ಬಡ್ಡಿ ಬ್ಯಾಂಕ್‌ಗೆ ಜಮಾ ಆಗುವುದರಿಂದ ಲಾಭ ಗಳಿಸುವುದು ಸಾಧ್ಯ ಎಂದು ಹೇಳಿದರು.

ಕಾರ್ಪ್ ಬ್ಯಾಂಕ್ 2016ರ ವಿತ್ತೀಯ ವರ್ಷದಲ್ಲಿ ಠೇವಣಿ ಸಂಗ್ರಹದಲ್ಲಿ ಶೇ 2.92 ಹೆಚ್ಚಳವಾಗಿದ್ದು 2,05,171 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. 1,40,322 ಕೋಟಿ ರೂ. ಸಾಲ ನೀಡಲಾಗಿದೆ. ಪ್ರಧಾನ ಮಂತ್ರಿ ಬಿಮಾ ಯೊಜನೆಯ ಪ್ರಕಾರ 12,20,522 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆಯ ಪ್ರಕಾರ 5,58,484 ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. ಅಟಲ್ ಪೆನ್‌ಷನ್ ಯೋಜನೆಯ ಪ್ರಕಾರ 17,822 ಮಂದಿಯನ್ನು ಸೇರ್ಪಡೆಗೊಳಿ ಸಲಾಗಿದೆ. ಪ್ರಧಾನ ಮಂತ್ರಿ ಜನಧನ್ ಯೋಜನೆಯ ಪ್ರಕಾರ 25.94 ಲಕ್ಷ ರೂ. ಖಾತೆ ಆರಂಭಿಸಿ 741.46 ಕೋಟಿ ರೂ.ಸಂಗ್ರಹಿಸಲಾಗಿದೆ. ಬ್ಯಾಂಕ್‌ನ ಮೂಲಕ ಶೇ. 98 ಖಾತೆದಾರರಿಗೆ ರೂಪೆ ಡೆಬಿಟ್ ಕಾರ್ಡ್ ನೀಡಲಾಗಿದೆ ಅವರು ವಿವರಿಸಿದರು.

ಸ್ವಯಂಚಾಲಿತ ನಗದು ಕಟ್ಟೆಗಳಲ್ಲಿ ಸ್ಥಳಾವಕಾಶ ಲಭ್ಯವಿರುವಲ್ಲಿ ಅವುಗಳನ್ನು ಚೆಕ್ ಜಮಾವಣೆ ಯಂತ್ರ, ನಗದು ಜಮಾವಣೆ ಯಂತ್ರಗಳೊಂದಿಗೆ ಇ-ಲಾಬಿಯಾಗಿ ಪರಿವರ್ತಿಸುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ ಎಂದು ಜೈ ಕುಮಾರ್ ಗಾರ್ಗ್ ತಿಳಿಸಿದರು.

ಬ್ಯಾಂಕ್‌ನ ಜಿ.ಎಂ.ಆರ್.ನಾಗರಾಜನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.