ಕನ್ನಡ ವಾರ್ತೆಗಳು

ಮೇ.22: ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ಮಂಗಳೂರಿನಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ”

Pinterest LinkedIn Tumblr

patla_fundton_meet_1

__ಸತೀಶ್ ಕಾಪಿಕಾಡ್

ಮಂಗಳೂರು,ಮೇ.19: ಯಕ್ಷಗಾನ ವೃತ್ತಿರಂಗದಲ್ಲಿ ಸೇವೆ ಸಲ್ಲಿಸುವ ಅಶಕ್ತ ಕಲಾವಿದರ ಸಮಗ್ರ ಕಲ್ಯಾಣದ ಸದುದ್ದೇಶವನ್ನಿಟ್ಟುಕೊಂಡು ಸಪ್ಟೆಂಬರ್ ತಿಂಗಳಲ್ಲಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ಉದ್ಘಾಟನೆಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಸೇವಾ ಸಂಸ್ಥೆಯ ವತಿಯಿಂದ ಮೇ 22ರ ಭಾನುವಾರದಂದು ಮಂಗಳೂರಿನ ಪುರಭವನದ ಕಲ್ಲಾಡಿ ವಿಠಲ ಶೆಟ್ಟಿ ವೇದಿಕೆಯಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ’ವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಶ್ರೀ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಿಗ್ಗೆ 9ರಿಂದ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಕಲಾವಿದರುಗಳಿಂದ ಯಕ್ಷಗಾನ ಪೂರ್ವರಂಗ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 9.45ಕ್ಕೆ ಗಣ್ಯಾಥಿ-ಗಣ್ಯರ ಸಮಕ್ಷಮದಲ್ಲಿ ಸಮಾರಂಭವು ಉದ್ಘಾಟನೆಗೊಳ್ಳಲಿದೆ. ಪೂರ್ವಾಹ್ನ 10ರಿಂದ ಟ್ರಸ್ಟ್‌ನ ಸದಸ್ಯರು ಹಾಗೂ ಯಕ್ಷಾಭಿಮಾನಿಗಳಿಂದ ರಕ್ತದಾನ ಶಿಬಿರ ಮತ್ತು ಯಕ್ಷಗಾನ ಕಲಾವಿದರಿಗೆ ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಔಷಧ ವಿತರಣೆ ಜರಗಲಿದೆ ಎಂದರು.

patla_fundton_meet_2

ಪೂರ್ವಾಹ್ನ 11ರಿಂದ 1ರ ವರೆಗೆ ಯಕ್ಷ ಸಪ್ತಸ್ವರ ಕಾರ್ಯಕ್ರಮ ನಡೆಯಲಿದ್ದು, ಕರಾವಳಿಯ ಪ್ರಸಿದ್ಧ ಏಳು ಭಾಗವತರಿಂದ ಭಾಗವತಿಕೆ ನಡೆಯಲಿದೆ. ಮಧ್ಯಾಹ್ನ 1.30ರಿಂದ ಅಪರಾಹ್ನ 2.30ರ ವರೆಗೆ ರಾಧಾ ವಿಲಾಸ ಯಕ್ಷಗಾನ ನಾಟ್ಯ ವೈಭವ, ಅಪರಾಹ್ನ 2.30ರಿಂದ ತುಳುನಾಡಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತುಳು ತಾಳಮದ್ದಳೆ ನಡೆಯಲಿದೆ.

ಸಂಜೆ 5ರಿಂದ ಸಭಾ ಕಾರ್‍ಯಕ್ರಮ ನಡೆಯಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ತೆಂಕುತಿಟ್ಟಿನ ಪ್ರಖ್ಯಾತ ಕಲಾವಿದರಾದ ಶ್ರೀ ಪೆರುವಾಯಿ ನಾರಾಯಣ ಶೆಟ್ಟರಿಗೆ 2016ನೇ ಸಾಲಿನ ಪಟ್ಲ ಪ್ರಶಸ್ತಿ ಪ್ರದಾನ, ಖ್ಯಾತ ಅರ್ಥಧಾರಿಗಳಾದ ಶ್ರೀ ಜಬ್ಬಾರ್ ಸಮೋ ಸಂಪಾಜೆ ಇವರಿಗೆ ಯಕ್ಷ ಗೌರವ ಮನ್ನಣೆ, ಯಕ್ಷಗಾನ ಕಲಾವಿದರಿಗೆ ಅಪಘಾತ ವಿಮಾ ಯೋಜನೆಗೆ ಚಾಲನೆ, ತೆಂಕು-ಬಡಗುತಿಟ್ಟಿನ 15 ಅಶಕ್ತ ಕಲಾವಿದರಿಗೆ ತಲಾ ೫೦ ಸಾವಿರ ರೂ. ಗಳ ಗೌರವ ಧನ ಸಹಾಯ ವಿತರಣೆ, ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಮೇಲ್ಪಟ್ಟು ಗರಿಷ್ಠ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ಚಿನ್ನದ ಪದಕ ಪ್ರದಾನ ಕಾರ್ಯಕ್ರಮಗಳು ಜರಗಲಿದೆ.

ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ-ನಟಿಯರುಗಳಾದ ದರ್ಶನ್, ತಾರಾ, ನಂದಿನಿ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 7.30ರಿಂದ ಹೊಸನಗರ ಮೇಳದ ಕಲಾವಿದರಿಂದ ಮಾನಿಷಾದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಸತೀಶ್ ಶೆಟ್ಟಿ ವಿವರಿಸಿದರು.

patla_fundton_meet_3

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಸ್ಥಾಪನೆ :

ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಗಂಧರ್ವ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ಇಂದು ಅಪಾರ ಸಂಖ್ಯೆಯ ಸದಸ್ಯರನ್ನು ಹೊಂದಿದೆ. ಪಟ್ಲ ಸತೀಶ್ ಶೆಟ್ಟಿ ಅವರು ತೆಂಕುತಿಟ್ಟಿನ ಯಕ್ಷಗಾನ ಇತಿಹಾಸದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದವರು. ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಯುವಜನತೆಯನ್ನು ತಂಡೋಪತಂಡವಾಗಿ ಸೆಳೆದವರು. ಹಸಿದು ಬಂದವರಿಗೆ ಅನ್ನವೀಯುವ ಹೃದಯವಂತನಾಗಿ, ಸ್ನೇಹಕ್ಕೆ ಹಂಬಲಿಸಿದವರಿಗೆ ಆಪ್ತ ಮಿತ್ರನಾಗಿ, ಸಹಾಯ ಬೇಡಿ ಬಂದವರಿಗೆ ಆಪ್ತ ರಕ್ಷಕನಾಗಿ, ಹಲವರಿಗೆ ಹಲವು ರೂಪದಲ್ಲಿ ಕಾಣ ಸಿಗುವ ಇವರ ವ್ಯಕ್ತಿತ್ವ ಒಂದು ಅನನ್ಯವಾದುದು.

patla_fundton_meet_4 patla_fundton_meet_5 patla_fundton_meet_6 patla_fundton_meet_7 patla_fundton_meet_8 patla_fundton_meet_9 patla_fundton_meet_10

ಯಕ್ಷಧ್ರುವ ಪಟ್ಲ ಫೌಂಡೇಶನ್ ಅನೇಕ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಈಗಾಗಲೇ ತೆಂಕು ಹಾಗೂ ಬಡಗುತಿಟ್ಟಿನ 11 ಮಂದಿ ಅಶಕ್ತ ಕಲಾವಿದರಿಗೆ ತಲಾ ರೂ. 50,000/-ಗಳ ಗೌರವ ಧನ ಹಾಗೂ ವಿಧಿವಶರಾದ ಐವರು ಕಲಾವಿದರ ಕುಟುಂಬಕ್ಕೆ ತಲಾ ರೂ. 50,000/-ಗಳ ಪರಿಹಾರ ಧನ, ಅಪಘಾತ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ 4 ಜನ ಕಲಾವಿದರಿಗೆ ತಲಾ ರೂ. 25,000/-ಗಳ ಚಿಕಿತ್ಸಾ ವೆಚ್ಚವನ್ನು ನೀಡಿ ಕಲಾವಿದರಲ್ಲಿ ಹಾಗೂ ಅವರ ಕುಟುಂಬದಲ್ಲಿ ಸ್ಥೈರ್ಯ ತುಂಬಿಸುವ ಕೆಲಸವನ್ನು ಮಾಡಲಾಗಿದೆ. ಟ್ರಸ್ಟಿನ ಇನ್ನಷ್ಟು ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ “ಯಕ್ಷಧ್ರುವ ಪಟ್ಲ ಸಂಭ್ರಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಗೌರವಾಧ್ಯಕ್ಷ ಕಲ್ಮಾಡಿ ದೇವಿ ಪ್ರಸಾದ ಶೆಟ್ಟಿ, ಉಪಾಧ್ಯಕ್ಷ ಸುಧೀರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ.ಭಂಡಾರಿ ಅಡ್ಯಾರು, ಪಧಾಧಿಕಾರಿಗಳಾದ ಜಗನ್ನಾಥ ಶೆಟ್ಟಿ ಬಾಳ, ಕದ್ರಿ ನವನೀತ ಶೆಟ್ಟಿ, ರಾಜೀವ ಪೂಜಾರಿ ಕೈಕಂಬ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Comments are closed.