ಕನ್ನಡ ವಾರ್ತೆಗಳು

ಉಳ್ಳಾಲ ದರ್ಗಾ ಆಡಳಿತ ಸಮಿತಿ ವಿವಾದ : ಇತ್ತಂಡಗಳಿಂದ ಮತ್ತೆ ಘರ್ಷಣೆ – ಇಬ್ಬರಿಗೆ ಗಾಯ – ವಾಹನ ಹಾಗೂ ಸೊತ್ತು ಹಾನಿ

Pinterest LinkedIn Tumblr

ಉಳ್ಳಾಲ: ಉಳ್ಳಾಲ ಸೈಯಿದ್ ಮದನಿ ದರ್ಗಾ ಆಡಳಿತ ಸಮಿತಿ ವಿಚಾರಕ್ಕೆ ಸಂಬಂಧಿಸಿದ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಾಡಿಸುತ್ತಿದ್ದು, ಸೋಮವಾರ ಮತ್ತೆ ಎರಡು ಬಣಗಳ ನಡುವೆ ಘರ್ಷಣೆ ಸಂಭವಿಸಿದೆ.

ಆಡಳಿತ ಸಮಿತಿ ವಿಚಾರಕ್ಕೆ ಸಂಬಂಧಿಸಿ ಎರಡು ಬಣಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಘಟನೆಯಲ್ಲಿ ಖಾಝಿ ಭವನದ ಬಾಗಿಲು, ದರ್ಗಾ ಆವರಣದಲ್ಲಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಉಳ್ಳಾಲ ಸೀರೋಡ್ ನಿವಾಸಿ ಅಬ್ದುಲ್ ರಹಿಮಾನ್ ಯಾನೆ ಅದ್ದ ಕೋಟೆಪುರ ಮತ್ತು ತೊಕ್ಕೊಟ್ಟು ಅಳೇಕಳ ನಿವಾಸಿ ಹುಸೇನ್ ಕುಂಞ ಮೋನು ಗಾಯಗೊಂಡಿದ್ದಾರೆ.

ಉಳ್ಳಾಲ ಸೈಯಿದ್ ಮದನಿ ದರ್ಗಾ ಆಡಳಿತ ಸಮಿತಿಯ ಈ ಹಿಂದಿನ ಅಧ್ಯಕ್ಷರಾಗಿ ಎಸ್ ಎಸ್ ಎಫ್ ಬಣದವರು ಕಾರ್ಯನಿರ್ವಹಿಸುತ್ತಿದ್ದರು, ಇದೀಗ ಅಧ್ಯಕ್ಷರ ಐದು ವರ್ಷಗಳ ಅವಧಿ ಮುಗಿದ ಹಿನ್ನೆಲೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಬಣದ ಅಬ್ದುಲ್ ರಶೀದ್ ಎಂಬವರು ಇತ್ತೀಚೆಗೆ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅಬ್ದುಲ್ ರಶೀದ್ ಅವರು ಆಡಳಿತ ಸಮಿತಿಯ ಬೈಲಾದಂತೆ ಆಯ್ಕೆಯಾಗಿಲ್ಲ ಎಂದು ಆರೋಪಿಸಿದ ಎಸ್ ಎಸ್ ಎಫ್ ಕಾರ್ಯಕರ್ತರು ಅವರ ಬಣದಿಂದ ಅಬ್ದುಲ್ ಬುಖಾರಿ ಎಂಬವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಎರಡು ಬಣಗಳ ನಡುವೆ ಅಗಾಗ ಗಲಾಟೆಗಳು ನಡೆದು ಹಲವರು ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಮತ್ತೆ ಎಸ್ ಎಸ್ ಎಫ್ ಕಾರ್ಯಕರ್ತರು ಅವರ ಬಣದ ಹಂಗಾಮಿ ಅಧ್ಯಕ್ಷರೆನಿಸಿಕೊಂಡ ಅಬ್ದುಲ್ ಬುಖಾರಿ ಜತೆಗೆ ಸೇರಿಕೊಂಡು ಖಾಝಿ ಭವನಕ್ಕೆ ನುಗ್ಗಿ ಹಂಗಾಮಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಗೂ ಅವರ ಬಣದವರು ದರ್ಗಾ ಸೊತ್ತುಗಳನ್ನು ದುರ್ಬಳಕೆ ನಡೆಸುತ್ತಿದ್ದು, ದರ್ಗಾದೊಳಗಿದ್ದ ಕಾಣಿಕೆ ಹುಂಡಿಯನ್ನು ಒಡೆದಿದ್ದಾರೆ ಎಂದು ಆರೋಪಿಸಿ ಖಾಝಿ ಭವನದ ಒಳಗೆ ಪ್ರತಿಭಟನೆ ನಡೆಸಿದ್ದರು.

ಬಳಿಕ ಅಲ್ಲಿ ಪ್ರಾರ್ಥನೆ ನಡೆಸುವ ಸಂದರ್ಭ ದರ್ಗಾ ಆವರಣದಲ್ಲಿ ಎಸ್ ಕೆ ಎಸ್ ಎಸ್ ಎಫ್ ಕಾರ್ಯಕರ್ತರು ಜಮಾಯಿಸಿದ್ದು, ಖಾಝಿ ಭವನದೊಳಗೆ ಇರುವ ಎಸ್ ಎಸ್ ಎಫ್ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದರ್ಗಾ ಆವರಣದಲ್ಲಿ ಸುಮಾರು 100 ಕ್ಕಿಂತಲೂ ಅಧಿಕವಾಗಿ ಎಸ್ ಕೆ ಎಸ್ ಎಸ್ ಎಫ್ ಜಮಾಯಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು.

ಉಳ್ಳಾಲ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ಕರೆಸಿ ಖಾಝಿ ಭವನದೊಳಗೆ ಬೀಗ ಒಡೆದು ಪ್ರವೇಶಿಸಿದ್ದ ಎಸ್ ಎಸ್ ಎಫ್ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಸಂದರ್ಭ ಹುಸೇನ್ ಕುಂಞ ಮೋನು ಅವರನ್ನು ಎಳೆದ ತಂಡ ಅವರಿಗೆ ಹಲ್ಲೆ ನಡೆಸಿತ್ತು. ಅಲ್ಲದೆ ಹೊರಗೆ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಹಾನಿ ನಡೆಸಿದೆ. ಇದೀಗ ಪ್ರಕರಣ ಬಗ್ಗೆ ಎರಡೂ ತಂಡಗಳಿಂದ ದೂರು ದಾಖಲಾಗಿದೆ.

Comments are closed.