ಕನ್ನಡ ವಾರ್ತೆಗಳು

ನೀರಿನ ಜಲಕ್ಷಾಮ : ಲಕ್ಯಾ ಜಲಾಶಯದಿಂದ ನೀರಿನ ಪೊರೈಕೆಗೆ ಮ.ನ.ಪಾ ನಿರ್ಧಾರ.

Pinterest LinkedIn Tumblr

lakya_dam_kuduremuka

ಮಂಗಳೂರು,ಮೇ.10 : ಕುದುರೆಮುಖದ ಲಕ್ಯಾ ಜಲಾಶಯದಿಂದ ಮಂಗಳೂರಿನ ಜನತೆಗಾಗಿ ನೀರು ಪೊರೈಸಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

ಸೋಮವಾರ ಲಕ್ಯಾ ಜಲಾಶಯಕ್ಕೆ ಮನಪಾ ಮೇಯರ್‌ ಹರಿನಾಥ್‌ ನೇತೃತ್ವದಲ್ಲಿ ಕಾರ್ಪೊರೇಟರ್‌ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಸೇರಿರುವ ಲಕ್ಯಾ ಜಲಾಶಯದಲ್ಲಿ ಯಥೇತ್ಛ ನೀರಿನ ಸಂಗ್ರಹವಿದೆ. ಪ್ರಸ್ತುತ ಕಂಪೆನಿಯ ಮಂಗಳೂರು ಸ್ಥಾವರಕ್ಕೆ ದಿನಂಪ್ರತಿ 2ಎಂಜಿಡಿ ನೀರು ಗುರುತ್ವಾಕರ್ಷಣ  ಶಕ್ತಿ ಮೂಲಕ ಸರಬರಾಜು ಆಗುತ್ತಿದೆ ಎಂದು ಮೇಯರ್‌ ತಿಳಿಸಿದರು.

6 ಎಂಜಿಡಿ ನೀರಿಗೆ ಅವಕಾಶ
ಜಿಲ್ಲೆಯಲ್ಲಿ ತೀವ್ರ ಬರದ ಹಿನ್ನೆಲೆಯಲ್ಲಿ ಲಕ್ಯಾದಿಂದ ಕುಡಿಯುವ ಉದ್ದೇಶಕ್ಕಾಗಿ ನೀರು ತರಲು ಅವಕಾಶವಿದೆ. ಪಂಪ್‌ ಬಳಸಿದರೆ ದಿನವೊಂದಕ್ಕೆ ಸುಮಾರು 6 ಎಂಜಿಡಿ ನೀರು ಸರಬರಾಜಿಗೆ ಅವಕಾಶವಿದೆ. ಇದು ಪಣಂಬೂರು ಹಾಗೂ ಸುರತ್ಕಲ್‌ ಭಾಗದ ಜನರ ಕುಡಿಯುವ ನೀರು ಆವಶ್ಯಕತೆಯನ್ನು ಪೂರೈಸಲು ಸಾಕಾಗಲಿದೆ ಎಂದರು.

ಲಕ್ಯಾದಿಂದ ಪಣಂಬೂರಿಗೆ ತಂದು ಅಲ್ಲಿಂದ ನೀರು ಸಂಗ್ರಹ ಸ್ಥಾವರಕ್ಕೆ ವರ್ಗಾಯಿಸಿ ಪಣಂಬೂರು, ಸುರತ್ಕಲ್‌ಗೆ ನೀರು ನೀಡಲು ಉದ್ದೇಶಿಸಲಾಗಿದೆ ಎಂದು ತಂಡದಲ್ಲಿದ್ದ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ತಿಳಿಸಿದ್ದಾರೆ.

ಮನಪಾ ನಗರ ಯೋಜನಾ ಸ್ಥಾಯೀ ಸಮಿತಿ ಅಧ್ಯಕ್ಷ ಲ್ಯಾನ್ಸ್‌ಲಾಟ್‌ ಪಿಂಟೋ, ಕಾರ್ಪೊರೇಟರ್‌ ಮಹಮ್ಮದ್‌, ಮನಪಾ ಆಯುಕ್ತ ಡಾ| ಎಚ್‌.ಎನ್‌. ಗೋಪಾಲಕೃಷ್ಣ, ಕುದುರೆಮುಖ ಕಂಪೆನಿಯ ಅಧಿಕಾರಿ ವಾದಿರಾಜ ರಾವ್‌, ಮನಪಾ ಅಧೀಕ್ಷಕ ಎಂಜಿನಿಯರ್‌ ಶಿವಸ್ವಾಮಿ, ಕಾರ್ಯನಿರ್ವಾಹಕ ಎಂಜಿನಿಯರ್‌ ಗಣೇಶ್‌ ತಂಡದಲ್ಲಿದ್ದರು.

Write A Comment