ಕನ್ನಡ ವಾರ್ತೆಗಳು

ಬಾಸಬೈಲು: ಒಡೆದು ಹೋದ ವಾರಾಹಿ ಕಾಲುವೆ ದುರಸ್ತಿಗೆ ತಡೆಯೊಡ್ಡಿದ ದುಷ್ಕರ್ಮಿಗಳು; ನೀರಿನ ತಡೆ ದ್ವಂಸ ಮಾಡಿ ದುಷ್ಕೃತ್ಯ

Pinterest LinkedIn Tumblr

(ವರದಿ-ಯೋಗೀಶ್ ಕುಂಭಾಸಿ)

ಕುಂದಾಪುರ: ವಾರಾಹಿ ಕಾಲುವೆಯ 21ನೇ ಕಿಲೋ ಮೀಟರ್ ಪ್ರದೇಶದ ಬಾಸಬೈಲು ಮಠ ಎಂಬಲ್ಲಿ ವಾರಗಳ ಹಿಂದೆ ಆರಂಭಗೊಂಡ ರಿವಿಟ್‌ಮೆಂಟ್ ಕಾಮಗಾರಿ ಸಲುವಾಗಿ ಕಾಲುವೆಯಲ್ಲಿ ಹರಿಯುವ ವಾರಾಹಿ ನೀರನ್ನು ತಡೆಯಲು ನಾಲ್ಕು ಕಡೆಗಳಲ್ಲಿ ಹಾಕಿದ್ದ ನೀರಿನ ತಡೆಯ ಬಂಡುಗಳನ್ನು ಯಾವುದೋ ದುಷ್ಕರ್ಮಿಗಳು ಶನಿವಾರ ತಡರಾತ್ರಿ ಒಡೆದು ಕಾಮಗಾರಿ ಹಾಳುಗೈದಿದ್ದಾರೆ ಎನ್ನಲಾಗಿದೆ. ಕಾಮಗಾರಿಯನ್ನು ನಿಲ್ಲಿಸುವ ದುರುದ್ದೇಶದಿಂದಾಗಿ ಈ ಕೃತ್ಯ ನಡೆದಿದೆ ಎಂದು ಸ್ಥಳೀಯರು ಹಾಗೂ ಕಾಮಗಾರಿಗೆ ಸಂಬಂದಪಟ್ಟ ಗುತ್ತಿಗೆದಾರರು ಆರೋಪಿಸಿದ್ದಾರೆ.

Kundapura_Varahi_Problem (12) Kundapura_Varahi_Problem (9) Kundapura_Varahi_Problem (6) Kundapura_Varahi_Problem (2) Kundapura_Varahi_Problem (7) Kundapura_Varahi_Problem (5) Kundapura_Varahi_Problem (3) Kundapura_Varahi_Problem (4) Kundapura_Varahi_Problem (8) Kundapura_Varahi_Problem (13) Kundapura_Varahi_Problem (14) Kundapura_Varahi_Problem (15) Kundapura_Varahi_Problem (17) Kundapura_Varahi_Problem (10) Kundapura_Varahi_Problem (11) Kundapura_Varahi_Problem (16) Kundapura_Varahi_Problem (1)

ಕಳೆದ ವರ್ಷದ ಕರಾಳ ನೆನಪು:
ಕಳೆದ ವರ್ಷದ ಮಳೆಗಾಲದಲ್ಲಿ ವಾರಾಹಿ ಕಾಲುವೆಯ ಬಾಸಬೈಲ್ ಪ್ರದೇಶದಲ್ಲಿ ಸುಮಾರು 125 ಮೀಟರ್ ದೂರದವರೆಗೆ ಕಾಲುವೆಗೆ ರಿವಿಟ್‌ಮೆಂಟ್ ಕಟ್ಟದೇ ಇರುವುದರಿಂದ ಮೇಲಿಂದ ಶೇಡಿ ಮಣ್ಣು ಕುಸಿದ ಪರಿಣಾಮ ಕಾಲುವೆ ಒಡೆದು ಕೆಳಗಿನ ಸುಮಾರು ಎಂಭತ್ತು ಎಕ್ರೆಗೂ ಹೆಚ್ಚು ಅಡಿಕೆ ಹಾಗೂ ಭತ್ತದ ಗದ್ಧೆಗಳೂ ಹಾನಿಗೀಡಾಗಿದ್ದವು. ತೋಟದ ಮಧ್ಯದಲ್ಲಿದ್ದ ಕೆರ ಹಾಗೂ ಬಾವಿಗಳು ಪಂಪ್‌ಸೆಟ್ ಸಮೇತ ಶೇಡಿ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದವು. ಆದರೆ ಇದರುವೆರೆಗೆ ಕಂದಾಯ ಇಲಾಖೆ ಎಕ್ರೆಗೆ 2 ಸಾವಿರ ರೂಪಾಯಿಗಳ ಪರಿಹಾರ ಧನದಂತೆ ಭತ್ತದ ಗದ್ದೆಗೆ ನೀಡಿದ್ದು ಬಿಟ್ಟರೆ ಒಂದು ಪೈಸೆಯ ಪರಿಹಾರವೂ ರೈತರನ್ನು ತಲುಪಿಲ್ಲ. ಅಡಿಕೆ ಹಾನಿಯ ಬಗ್ಗೆ ಇಲಾಖೆಯಾಗಲಿ ವಾರಾಹಿ ಅಧಿಕಾರಿಗಳಲ್ಲಿ ಕೇವಲ ಭರವಸೆ ನೀಡಿದ್ದು ಬಿಟ್ಟರೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ ನಡೆದ ಮೇಲೆ ಯಾವ ಅಧಿಕಾರಿಗಳೂ ಇತ್ತ ಕಡೆ ತಲೆ ಹಾಕಿ ಮಲಗಿಲ್ಲ.

ಅಂತೂ..ಇಂತೂ… ಶುರುವಾದ ಕಾಮಗಾರಿ
ವರ್ಷಗಳಿಂದಲೂ ಯಾವುದೋ ಕಾರಣಾಂತರಗಳಿಂದ ಈ ರಿವಿಟ್‌ಮೆಂಟ್ ಕಾಮಗಾರಿ ಆರಂಭಿಸಲು ಕೊಂಚ ಹಿನ್ನಡೆ ತೋರಿಸಿದ್ದ ವಾರಾಹಿ ಇಲಾಖೆ ಕೊನೆಗೂ ಸ್ಥಳೀಯರ ಹಾಗೂ ರೈತರ ಸಮಸ್ಯೆಗೆ ಸ್ಪಂದಿಸಿ ಕಳೆದ ಒಂದು ವಾರಗಳ ಹಿಂದೆ ಕಾಮಗಾರಿ ಆರಂಭಿಸಲು ಸಂಬಂದಪಟ್ಟ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿತ್ತು. ಅವರ ಸೂಚನೆಯಂತೆ ಕಳೆದ ವರ್ಷ ವಾರಾಹಿ 21ನೇ ಕಿಲೋಮೀಟರ್‌ನಲ್ಲಿ ಗುಡ್ಡ ಕುಸಿತದ ಮಣ್ಣನ್ನು ಮೇಲಕ್ಕೆತ್ತುವ ಕೆಲಸಕ್ಕೆ ಚಾಲನೆ ಹಾಗೂ ಕಾಲುವೆಗೆ ರಿವಿಟ್‌ಮೆಂಟ್ ಕೆಲಸ ಈ ಸಮಯ ಆರಂಭಿಸಲಾಗಿತ್ತು. ಕಾಲುವೆಯ ಕಾಮಗಾರಿ ಪರಿಣಾಮ ಕಳೆದ ಒಂದೆರಡು ವಾರಗಳ ಹಿಂದೆಯೇ ಕಾಲುವೆಯಲ್ಲಿ ಹರಿಯುವ ವಾರಾಹಿ ನೀರಿಗೆ ತಡೆಯೊಡ್ಡಲು ಮೂರು ಕಡೆಗಳಲ್ಲಿ ಮಣ್ಣು ಹಾಗೂ ಮರಳು ಮಿಶ್ರಿತ ಚೀಲಗಳನ್ನು ಕಾಲುವೆಗೆ ಅಡ್ಡಕ್ಕಿಡುವುದಲ್ಲದೇ, ಇನ್ನೊಂಡು ಕಡೆಯಲ್ಲಿ ಮಣ್ಣಿನ ತಡೆ ಹಾಕಿ ಕಾಲುವೆಯನ್ನು ಮುಚ್ಚಲಾಗಿತ್ತು. ಈ ಎಲ್ಲಾ ಕಾಮಗಾರಿಯ ಪೂರ್ವಭಾವಿ ಕೆಲಸಕ್ಕೆ ಮೂವತ್ತಕ್ಕು ಅಧಿಕ ಕಾರ್ಮಿಕರ ಶ್ರಮದಲ್ಲಿ ಹತ್ತು ದಿನಗಳ ಕೆಲಸ ನಡೆದಿತ್ತು. ತದನಂತರದಲ್ಲಿ ರಿವಿಟ್‌ಮೆಂಟ್ ಕಾಮಗಾರಿ ಆರಂಭಿಸಿ ಬಹುತೇಕ ಕೆಲಸವನ್ನು ನಡೆಸಲಾಗಿತ್ತು. ಇನ್ನು ನಾಲ್ಕೈದು ದಿನಗಳ ಕೆಲಸ ನಡೆದಿದ್ದರೇ ಸಂಪೂರ್ಣ ಕಾಮಗಾರಿಯೂ ಮುಗಿದು ಈ ಭಾಗದ ಜನರು ನಿಶ್ಚಿಂತೆಯಿಂದಿರುವ ಹಾಗಾಗುತ್ತಿತ್ತು. ಆದರೇ ನಡೆದಿದ್ದೇ ಬೇರೆ..

ಕಾಮಗಾರಿಗೂ ತಡೆ, ಅಪಾರ ನಷ್ಟ…
ಶನಿವಾರ ಎಂದಿನಂತೆ ಕೆಲಸ ಸಂಜೆಯವರೆಗೂ ನಡೆದಿತ್ತು. ಆದರೇ ಭಾನುವಾರ ಬೆಳಿಗ್ಗೆ ನೋಡುವಾಗ ಕಾಮಗಾರಿ ನಡೆದ ಪ್ರದೇಶವೆಲ್ಲಾ ನೀರಿನಿಂದ ಆವೃತವಾಗಿತ್ತು. ಕಾಮಗಾರಿಯ ಸಲಕರಣೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು. ಇನ್ನಷ್ಟು ನೀರಿನಲ್ಲಿ ಮುಳುಗಿದ್ದವು. ಕಾಮಗಾರಿಗೆ ಬಳಸಲಾಗುವ ರಾಡುಗಳು, ಫ್ಲೈವುಡ್‌ನ 20 ಶೀಟ್‌ಗಳು, 2 ವೈಬ್ರೇಟರ್, ಮರದ ರನ್ನರ್‌ಗಳು, ಹಲಗೆಗಳು ನೀರಿನಲ್ಲಿ ಕೊಚ್ಚಿಹೋಗಿದೆ. ಅಲ್ಲದೇ ಹಿಟಾಚಿ ಹಾಗೂ ಇಂಜಿನ್ ಒಳಗೂ ನೀರು ಹೊಕ್ಕಿದ್ದು ಲಕ್ಷಾಂತರ ರೂಪಾಯಿ ನಷ್ಟಸಂಭವಿಸಿದೆ. ತಡರಾತ್ರಿ ಯಾವುದೋ ದುಷ್ಕರ್ಮಿಗಳು ನಾಲ್ಕು ಕಡೆಯ ನೀರಿನ ತಡೆಗಳನ್ನು ಒಡೆದು ಕಾಲುವೆಯಲ್ಲಿ ನೀರು ಹರಿಯಲು ಅವಕಾಶ ನೀಡಿದ್ದೇ ಈ ಅವಾಂತರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವ್ಯವಸ್ಥಿತ ಸಂಚು ನಡೆಸಿ ಕೃತ್ಯ:
ಒಂದೊಮ್ಮೆ ಕಾಲುವೆಯಲ್ಲಿ ನೀರಿನ ಹರಿವು ಜಾಸ್ಥಿಯಾಗಿ ಕಾಲುವೆಗೆ ಹಾಕಿದ್ದ ತಡೆ ಒಡೆದಿದ್ದೇ ಆದರೇ ನೀರು ಅಡ್ಡಾದಿಡ್ಡಿ ಹರಿದು ತಡೆಗಳು ಚೆಲ್ಲಾಪಿಲ್ಲಿಯಾಗಬೇಕಿತ್ತು. ಅಥವಾ ಮಳೆ ಬಂದಿದ್ದರೇ ತಡೆ ಹಾಳಾಗಬೇಕಿತ್ತು. ಇದ್ಯಾವುದೂ ಇಲ್ಲದೇ ನೀಡಿನ ಬಂಡುಗಳು ತೆರೆದುಕೊಂಡು ನೀರು ಹರಿದಿದೆ. ಈ ಪ್ರದೇಶದ ಮೂರು ತಡೆಗಳು ವ್ಯವಸ್ಥಿತವಾಗಿ ತೆರೆದ ಸ್ಥಿತಿಯಲ್ಲಿದ್ದು ಸಂಚು ರೂಪಿಸಿ ಈ ಕೃತ್ಯವನ್ನು ರಾತ್ರೋರಾತ್ರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

‘ನಮಗಿನ್ನು ಸಾಯುವುದೇ ದಾರಿ’….
ಕಳೆದ ವರ್ಷ ಬಾಸಬೈಲು ಮಠ ಪ್ರದೇಶಲ್ಲಿ ಎಕ್ರೆಗಟ್ಟಲೇ ಕೃಷಿಭೂಮಿ ಹಾಳಾಗಿದ್ದು ಈವರೆಗೂ ಅದಕ್ಕೆ ಸೂಕ್ತ ಪರಿಹಾರ ದೊರಕಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಸನ್ನಿಹಿತವಾಗುತ್ತಿದೆ. ಮಳೆಗಾಲ ಬಂತೆಂದರೇ ನಮಗೆ ಇಲ್ಲಿ ಬದುಕು ಬೇಡವೆನಿಸುತ್ತಿದೆ. ಸತತ ಪ್ರಯತ್ನ ಮಾಡಿ ಕಾಮಗಾರಿ ಆರಂಭವಾಗುವಂತೆ ಮಾಡಿದ್ದು ನಾಲ್ಕೈದು ದಿನಗಳಾದರೇ ಕಾಮಗಾರಿ ಮುಗಿಯುವ ಹಂತದಲ್ಲಿತ್ತು. ಆದರೇ ಯಾರೋ ಶನಿವಾರ ರಾತ್ರಿ ಮಾಡಿದ ದುರ್ವರ್ತನೆಗೆ ಕಾಮಗಾರಿ ಹಾಳಾಗಿದೆ. ಕೆಲಸ ಮಾಡುವ ಗುತ್ತಿಗೆದಾರರಿಗೆ ಈ ರೀತಿ ಸಮಸ್ಯೆ ನೀಡಿದರೇ ಕಾಮಗಾರಿ ನಡೆಯುವುದಾದರೂ ಹೇಗೆ? ಕೆಲಸ ಮಾಡಲು ಬಿಡದೇ ಅವರು ಕೆಲಸ ಮಾಡುವುದಾದರೂ ಹೇಗೆ? ಕೆಲಸ ನಡೆಯದೇ ಇದ್ದಲ್ಲಿ ಈ ಬಾರಿಯೂ ಕಳೆದ ವರ್ಷದ ಸ್ಥಿತಿ ಮರುಕಳಿಸುತ್ತದೆ. ಹಾಗದರೇ ಇಲ್ಲಿ ನಾವು ಬದುಕುವುದು ಬೇಡವೇ? ನಮಗಿನ್ನು ಸಾಯುವುದೇ ಉಳಿದಿರುವ ಮಾರ್ಗ ಎನ್ನುತ್ತಾ ತಮ್ಮ ಅಳಲು ತೋಡಿಕೊಳ್ಳುತ್ತಾರೆ ಬಾಸಬೈಲು ಕೃಷಿಕ ವಿರುಪಾಕ್ಷ.

ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ: ಜಗದೀಶ್
ಬಾಸಬೈಲು ಮಠದ ಸಮೀಪ ಕಳೆದ ವರ್ಷ ಹಾನಿಯಾಗಿತ್ತು. ಈ ವರ್ಷವೂ ಮರುಕಳಿಸಬಾರದು ಎನ್ನುವ ಕಾರಣಕ್ಕೆ ವಾರಗಳ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ಆದರೇ ನೀರಿನ ಹರಿವಿಗೆ ಅಡ್ಡಲಾಗಿ ಹಾಕಿದ್ದ ತಡೆಯನ್ನು ಯಾರೋ ರಾತ್ರಿ ಕಿತ್ತುಹಾಕಿದ್ದಾರೆ. ಈಗಾಗಲೇ ಪರಿಶೀಲನೆ ನಡೆಸಿದ್ದೇವೆ. ಉದ್ಧೇಶಿತ ಕಾಮಗಾರಿ ಪ್ರದೇಶ ಸೇರಿದಂತೆ ಕಾಮಗಾರಿ ಸಲಕರಣೆಗಳು ನೀರಿನಲ್ಲಿ ಮುಳುಗಡೆಯಾಗಿದೆ. ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ವಾರಾಹಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಗದೀಶ್ ಮಾಧ್ಯಮಕ್ಕೆ ತಿಳಿಸಿದರು.

ಯಾವುದೋ ದ್ವೇಷವೋ, ವೃತ್ತಿ ವೈಷಮ್ಯದ ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಕಾಮಗಾರಿ ಗುತ್ತಿಗೆದಾರು ಹೇಳುತ್ತಿದ್ದಾರೆ. ಈ ಬಗ್ಗೆ ಸಂಬಂದಪಟ್ಟವರಿ‌ಊ ದೂರು ನೀಡಿದ್ದು ಮಾತ್ರವಲ್ಲದೇ ಪೊಲಿಸರಿಗೂ ದೂರು ನೀಡಿದ್ದಾರೆ.

ಇತ್ತ ಯಾರದ್ದೋ ತಪ್ಪಿಗೆ ರೈತರು ಹಾಗೂ ಕೃಷಿಕರು ಸಮಸ್ಯೆ ಅನುಭವಿಸುವಂತಾಗಿದೆ. ಕಳೆದ ವರ್ಷದ ನೋವು ಇನ್ನು ಹಸಿಯಾಗಿರುವ ಬೆನ್ನಲ್ಲೇ ಮತ್ತದೇ ಸಮಸ್ಯೆಯ ಭಯ ಜನರನ್ನು ಕಾಡುತ್ತಿದೆ. ಮಳೆಗಾಲದ ಒಳಗೆ ಕಾಮಗಾರಿ ಮುಗಿಯುತ್ತದೆ ಎಂದು ನಿಟ್ಟುಸಿರು ಬಿಟ್ಟ ಜನರು ಮತ್ತೆ ಮರುಕಪಡುವಂತಾಗಿದೆ. ಈ ಬಗ್ಗೆ ವಾರಾಹಿ ವಿಚಾರದ ಬಗ್ಗೆ ಹೋರಾಟ ಮಾಡುವ ರೈತ ಸಂಘಟನೆಗಳು, ಸಂಬಂದಪಟ್ಟ ಜನಪ್ರತಿನಿಧಿಗಳು ಗಮನಹರಿಸಲೇಬೇಕಾದ ಅನಿವಾರ್ಯತೆ ಇದೆ.

Write A Comment