ಮನೋರಂಜನೆ

ಇರ್ಫಾನ್ ಪಠಾಣ್‌ನ್ನು ಪುಣೆ ತಂಡದ ನಾಯಕ ಧೋನಿ ನಿರ್ಲಕ್ಷಿಸುತ್ತಿರುವುದಕ್ಕೆ ವ್ಯಕ್ತವಾಗಿದೆ ಆಕ್ರೋಶ ! ಅಶ್ವಿನ್, ಆರ್ ಪಿ, ಇಶಾಂತ್, ಭಾಟಿಯಾ, ಡಿಂಡಾ ಪರಾಜಯಗೊಳ್ಳುತ್ತಿದ್ದರೂ ಪಠಾಣ್‌ ಗೆ ಅವಕಾಶನೆ ಇಲ್ಲ…

Pinterest LinkedIn Tumblr

Pathan

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಐಪಿಎಲ್ ಪಂದ್ಯಗಳಲ್ಲಿ ಸೋಲುತ್ತಲೇ ಇದ್ದರೂ ಧೋನಿಗೆ ಇರ್ಫಾನ್ ಪಠಾಣ್‌ನ್ನು ಟೀಂಗೆ ಸೇರಿಸಿಕೊಳ್ಳಲು ಮನಸ್ಸಾಗಿಲ್ಲ. ಪುಣೆ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಪದೇ ಪದೇ ಎಡವುತ್ತಿದ್ದರೂ ಇರ್ಫಾನ್ ಪಠಾಣ್‌ಗೆ ತಂಡದಲ್ಲಿ ಸ್ಥಾನ ನೀಡಬೇಕೆಂಬ ಯೋಚನೆ ಧೋನಿ ಮಾಡಿಲ್ಲ. ಒಂದೇ ಒಂದು ಪಂದ್ಯದಲ್ಲಿ ಆಡಲು ಪಠಾಣ್‌ಗೆ ಅವಕಾಶ ಕಲ್ಪಿಸಿದ್ದರು ಧೋನಿ. ಅದರಲ್ಲಿಯೂ ಒಂದೇ ಒಂದು ಓವರ್ ಪಠಾಣ್‌ಗೆ ನೀಡಲಾಗಿತ್ತು. ಆ ಓವರ್‌ನಲ್ಲಿ ಏಳು ರನ್ಸ್ ನೀಡಿದ್ದ ಪಠಾಣ್‌ಗೆ ಮುಂದೆ ಓವರ್ ಮಾತ್ರ ಅಲ್ಲ, ಮುಂದಿನ ಪಂದ್ಯಗಳನ್ನಾಡಲೂ ಅವಕಾಶ ನೀಡಲಿಲ್ಲ.

ಈ ವರ್ಷ ಜನವರಿಯಲ್ಲಿ ನಡೆದ ಸಯ್ಯಿದ್ ಮುಶ್ತಾಕ್ ಅಲಿ ಟ್ರೋಫಿಯಲ್ಲಿ 10 ಪಂದ್ಯಗಳಲ್ಲಿ 200 ರನ್‌ಗಳನ್ನು ಮತ್ತು 17 ವಿಕೆಟ್‌ಗಳನ್ನು ಬರೋಡಾ ಬೌಲರ್ ಇರ್ಫಾನ್ ಪಠಾಣ್ ಕಬಳಿಸಿದ್ದರು. ಇಷ್ಟೊಂದು ಉತ್ತಮ ಪ್ರದರ್ಶನ ನೀಡಿದ್ದರೂ ಇರ್ಫಾನ್ ಪಠಾಣ್‌ಗೆ ಅವಕಾಶ ಯಾಕೆ ನೀಡುತ್ತಿಲ್ಲ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇರ್ಫಾನ್ ಪಾದಾರ್ಪಣೆ ಮಾಡಿದ್ದರು. ಕಪಿಲ್ ದೇವ್ ನಂತರ ಭಾರತ ನೋಡಿದ ಉತ್ತಮ ಆಲ್ ರೌಂಡರ್ ಎಂದು ಪಠಾಣ್‌ನ್ನು ಹೊಗಳಿದ್ದ ಕಾಲವೊಂದಿತ್ತು. 2006ರಲ್ಲಿ ಪಾಕಿಸ್ತಾನ್ ವಿರುದ್ಧ ಟೆಸ್ಟ್ ಪಂದ್ಯವಾಡಿದಾಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಮೊದಲ ಓವರ್ ನಲ್ಲೇ ಹ್ಯಾಟ್ರಕ್ ಗಳಿಸಿದ ಬೌಲರ್ ಇರ್ಫಾನ್ ಆಗಿದ್ದರು.

ಆದರೆ 2007ರಲ್ಲಿ ಬೌಲಿಂಗ್‌ನಲ್ಲಿ ಫಾರ್ಮ್ ನಷ್ಟವಾದಾಗ ಅವರನ್ನು ಟೀಂ ನಿಂದ ಹೊರಗಿಡಲಾಯಿತು. ಆ ಹೊತ್ತಲ್ಲಿ ಪಠಾಣ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.

ಇದಾದನಂತರ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟ್ವೆಂಟಿ 20 ವಿಶ್ವಕಪ್‌ನಲ್ಲಿ ಪಠಾಣ್ ಮರಳಿ ಬಂದರು. ಆ ಬಾರಿ ಭಾರತ ವಿಶ್ವಕಪ್ ಕಿರೀಟ ಧರಿಸುವಂತೆ ಮಾಡಿದವರಲ್ಲಿ ಪಠಾಣ್ ಪಾತ್ರ ಮಹತ್ವದ್ದಾಗಿತ್ತು. ಫೈನಲ್ ಪಂದ್ಯದಲ್ಲಿ 4 ಓವರ್‌ನಲ್ಲಿ 16 ರನ್‌ಗಳನ್ನು ಮಾತ್ರ ಕೊಟ್ಟು ಮೂರು ವಿಕೆಟ್ ಕಬಳಿಸಿದ ಪಠಾಣ್ ಅಂದು ಮ್ಯಾನ್ ಆಫ್ ದ ಮ್ಯಾಚ್ ಆಗಿದ್ದರು. ಒಂದು ವರ್ಷಗಳ ಕಾಲ ಟೀಂ ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಈತನಿಗೆ 2007ರ ಅಂತ್ಯದಲ್ಲಿ ಟೆಸ್ಟ್ ಟೀಂಗೆ ಸೇರುವಂತೆ ಬುಲಾವ್ ಬಂತು. ಅಲ್ಲಿ ಅರ್ಧ ಶತಕ ಬಾರಿಸುವ ಮೂಲಕ ಪಠಾಣ್ ಮಿಂಚಿದ್ದರೂ, ಅಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಗಾಯ ಮತ್ತು ಫಾರ್ಮ್ ನಷ್ಟವಾಗುವ ಮೂಲಕ ಟೆಸ್ಟ್ ಟೀಂ ನಿಂದಲೂ ಈತ ಹೊರಗುಳಿಯಬೇಕಾಯಿತು. 2008 ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ 24 ನೇ ವಯಸ್ಸಿನಲ್ಲಿ ಪಠಾಣ್ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನಾಡಿದ್ದರು. ಈ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ 2011ರಲ್ಲಿ ಮತ್ತೆ ಈತನನ್ನು ಏಕದಿನ ತಂಡಕ್ಕೆ ಕರೆಯಲಾಯಿತು.

ಹೀಗೆ ಮರಳಿ ಬಂದ ಪಠಾಣ್ ಉತ್ತಮ ಪ್ರದರ್ಶನ ನೀಡಿದರು. 2012ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಪಠಾಣ್ ಫಾರ್ಮ್‌ಗೆ ಮರಳಿದರು. ಆದರೆ ಮತ್ತೆ ಗಾಯಗೊಂಡು ಟೀಂನಿಂದ ಹೊರಗುಳಿಯಬೇಕಾಗಿ ಬಂತು. 2014ರ ಐಪಿಎಲ್‌ನಿಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಮೂಲಕ ಮರಳಿ ಬಂದರು. 2016ರಲ್ಲಿ ನ ಡೆದ ಸಯ್ಯದ್ ಮುಶ್ತಾಕ್ ಅಲಿ ಟ್ರೋಫಿಯಲ್ಲಿ ಆತನ ಪ್ರದರ್ಶನ ನೋಡಿಯಾದರೂ ಮತ್ತೆ ಈತನನ್ನು ಟೀಂ ಇಂಡಿಯಾಗೆ ಕರೆಯುತ್ತಾರೆ ಎಂಬು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಪಠಾಣ್ ಗೆ ಅವಕಾಶ ಸಿಗಲಿಲ್ಲ.

2016ರ ಐಪಿಎಲ್ ಹರಾಜಿನಲ್ಲಿ ರು. 1 ಕೋಟಿ ಮೂಲಬೆಲೆ ನೀಡಿ ಪುಣೆ ತಂಡ ಪಠಾಣ್ ನ್ನು ಖರೀದಿಸಿದ್ದರೂ, ಇಲ್ಲಿಯವರೆಗೆ ಪಠಾಣ್ ಆಡಿದ್ದು ಒಂದೇ ಒಂದು ಪಂದ್ಯ ಮಾತ್ರ.

ಏತನ್ಮಧ್ಯೆ, ಪಠಾಣ್ ಅವರನ್ನು ಪುಣೆ ತಂಡ ಬಳಸಿಕೊಂಡಿಲ್ಲ. ಇನ್ಯಾವುದೇ ತಂಡವಾಗಿದ್ದರೆ ಆತನಿಗೆ ಅವಕಾಶ ನೀಡುತ್ತಿತ್ತು ಎಂದು ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದರು.

ಪುಣೆ ತಂಡದ ಬೌಲರ್ ಗಳಾದ ಅಶ್ವಿನ್, ಆರ್ ಪಿ ಸಿಂಗ್, ಇಶಾಂತ್ ಶರ್ಮಾ, ರಜತ್ ಭಾಟಿಯಾ, ಅಶೋಕ್ ಡಿಂಡಾ ಮೊದಲಾದವರು ಪರಾಜಯಗೊಳ್ಳುತ್ತಿದ್ದರೂ, ಇರ್ಫಾನ್ ಪಠಾಣ್‌ನ್ನು ಧೋನಿ ಕಣಕ್ಕಿಳಿಸದೇ ಇರುವುದು ಯಾಕೆ ಎಂಬುದು ಅಭಿಮಾನಿಗಳ ಪ್ರಶ್ನೆ.

ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು, ಅತೀ ವೇಗದಲ್ಲಿ 100 ವಿಕೆಟ್‌ಗಳನ್ನು ಪಡೆದಿರುವ ದಾಖಲೆ ಇರ್ಫಾನ್ ಪಠಾಣ್ ಹೆಸರಲ್ಲಿರುವಾಗ ಐಪಿಎಲ್‌ನಲ್ಲಿ ಅವರನ್ನು ಕಣಕ್ಕಿಳಿಸಲು ಧೋನಿ ನಿರ್ಲಕ್ಷ್ಯವಹಿಸುವುದು ಯಾಕೆ? ಉತ್ತಮ ಬೌಲರ್ ಒಬ್ಬನ ವೃತ್ತಿ ಜೀವನ ಈ ನಿರ್ಲಕ್ಷ್ಯದಿಂದಾಗಿ ಕೊನೆಗೊಳ್ಳುವುದೇ? ಇವೆಲ್ಲವೂ ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿದುಕೊಂಡಿವೆ.

Write A Comment