ಕನ್ನಡ ವಾರ್ತೆಗಳು

ಲಾರಿ ಮಾಲಕರ ಸಮಸ್ಯೆ ಪರಿಹಾರಕ್ಕೆ ಆಗ್ರಹ – ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಠಾವಧಿ ಮುಷ್ಕರ : ಎಚ್ಚರಿಕೆ

Pinterest LinkedIn Tumblr

Lorry_tax_prblm_1

ಮಂಗಳೂರು, ಮೇ.6 : ಲಾರಿ ಮಾಲಕರು ಟೋಲ್‌ಗೇಟ್ ಸುಂಕ, ಬಾಡಿಗೆ ದರ ಪರಿಷ್ಕರಣೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಿಂದಾಗಿ ಲಾರಿ ಮಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣವೇ ರಾಜ್ಯ ಸರ್ಕಾರ ಮಧ್ಯ ಪ್ರವಶಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕರಾವಳಿ ಕರ್ನಾಟಕ ಲಾರಿ ಮಾಲಕರ ಸಂಘ ಆಗ್ರಹಿಸಿದೆ.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕರಾವಳಿ ಕರ್ನಾಟಕ ಲಾರಿ ಮಾಲಕರ ಸಂಘದ ಅಧ್ಯಕ್ಷ ವಸಂತ ಬಂಗೇರ ಹೊಸಬೆಟ್ಟು ಅವರು ಮಾತನಾಡಿ, ಒಂದೆಡೆ ಟೋಲ್‌ಗೇಟ್ ಸುಂಕ ಲಾರಿ ಮಾಲಕರಿಗೆ ಹೊರೆಯಾಗುತ್ತಿದೆ, ಇನ್ನೊಂದೆಡೆ ಲಾರಿ ಮಾಲಕರು ಇತ್ತೀಚಿನ ದಿನಗಳಲ್ಲಿ ಹಳೆಯ ಬಾಡಿಗೆ ದರದಲ್ಲಿಯೇ ಸರಕು ಸಾಗಾಟ ಮಾಡುತ್ತಿರುವುದರಿಂದ ಲಾರಿ ಮಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಸರಕು ಸಾಗಾಟ ಲಾರಿಗಳ ಬಾಡಿಗೆ ದರವನ್ನು ಪುನರ್ ಪರಿಶೀಲನೆ ಮಾಡಬೇಕು ಹಾಗೂ ನಿಯಮ ಮೀರಿ 60 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಟೋಲ್‌ಗೇಟ್ ರದ್ದು ಮಾಡಬೇಕು ಹಾಗೂ ಲಾರಿಗಳಿಗೆ ಕನಿಷ್ಠ ಮಿತಿಯೊಳಗೆ ಸುಂಕ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಡೀಸೆಲ್ ಬೆಲೆ ಕಡಿಮೆಯಾದಾಗ ಟ್ರಾನ್ಸ್‌ಪೋರ್ಟ್ ಏಜೆನ್ಸಿಗಳು ಬಾಡಿಗೆ ಕಡಿಮೆ ಮಾಡುತ್ತಾರೆ. ಆದರೆ ಡೀಸೆಲ್ ಅಥವಾ ಇತರ ವಾಹನ ಉಪಯೋಗಿ ವಸ್ತುಗಳ ಬೆಲೆ ಏರಿಕೆಯಾದಾಗ ಬಾಡಿಗೆ ದರ ಏರಿಸುವುದಿಲ್ಲ. ಸರಕಾರ ಈ ಬಗ್ಗೆ ಗಮನ ಹರಿಸಿ ಪರಿಷ್ಕೃತ ದರ ನಿಗದಿಗೆ ನ್ಯಾಯ ಸಮಿತಿ ರಚಿಸಬೇಕು ಎಂದವರು ಹೇಳಿದರು.

Lorry_tax_prblm_2 Lorry_tax_prblm_3 Lorry_tax_prblm_4

ಸರ್ಕಾರದ ನಿಯಮದಂತೆಯೇ ರಾಜ್ಯದೊಳಗಿನ ಕಂಪನಿಯ ಸರಕು ಸಾಗಾಟಕ್ಕೆ ರಾಜ್ಯದ ಲಾರಿಗಳನ್ನೇ ಬಳಸಬೇಕು. ಇದಕ್ಕೆ ವಿರುದ್ಧವಾಗಿ ಟ್ರಾನ್ಸ್ ಪೋರ್ಟ್ ಏಜೆನ್ಸಿಯವರು ಡುಪ್ಲಿಕೇಟ್ ಬಿಲ್ ಮಾಡಿ ಹೊರ ರಾಜ್ಯದ ಲಾರಿಗಳನ್ನು ರಾಜ್ಯದೊಳಗಿನ ಪ್ರದೇಶಗಳಿಗೆ ಸಾಗಾಟ ಮಾಡುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವರುಣ್ ಚೌಟಾ ಅವರು ಮಾತನಾಡಿ, ಪಣಂಬೂರು ಬಂದರಿನಲ್ಲಿ ಈ ಮೊದಲು 24 ಗಂಟೆ ಲೋಡಿಂಗ್, ಅನ್‌ಲೋಡಿಂಗ್ ಸೇವೆ ಇತ್ತು. ಸದ್ಯ ಇದಲ್ಲದೇ ಮಧ್ಯಾಹ್ನ 3.30ರ ನಂತರ ಲಾರಿಗಳನ್ನು ಬಂದರಿನ ಒಳಗಡೆ ಪ್ರವೇಶಿಸದಂತೆ ತಡೆಯುತ್ತಾರೆ. ಇದರಿಂದ ತುಂಬಿದ ಲಾರಿ ಮರುದಿನದವರೆಗೆ ಕಾಯಬೇಕು. ರಜಾ ದಿನಗಳಲ್ಲಿ ಲೋಡಿಂಗ್ ವಿಳಂಬವಾಗುತ್ತದೆ. ಇದರಿಂದ ನಷ್ಟವಾಗುತ್ತಿದ್ದು, ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಮಂಗಳೂರು ಬಂದರಿನಲ್ಲಿ ಕೆಲವು ಟ್ರಾನ್ಸ್‌ಪೋರ್ಟ್ ಏಜೆನ್ಸಿಯವರು ಬಂದರಿನ ಹೊರಗೆ ತೂಕ ಮಾಡಿಸಿ ಅಕ್ರಮವಾಗಿ ಬಂದರಿನ ಬಿಲ್ಲು ಪಡೆಯುತ್ತಾರೆ. ನಿಯಮಾನುಸಾರ ಬಂದರಿನೊಳಗೆ ಲಾರಿ ಹಾಗೂ ಸರಕನ್ನು ತೂಕ ಮಾಡುವುದು ಕಡ್ಡಾಯವಾಗಬೇಕು. ಪ್ರತಿ ಏಜೆನ್ಸಿಯವರು ಲಾರಿ ಮಾಲಕರಲ್ಲಿ ಪಾನ್ ಕಾರ್ಡ್ ಪ್ರತಿ ಪಡೆಯುತ್ತಾರೆ. ಆದರೆ ಲಾರಿ ಮಾಲಕರು ಸರಕಾರಕ್ಕೆ ಕಟ್ಟುವ ತೆರಿಗೆ ವಿನಾಯಿತಿಗೆ ಟಿಡಿಎಸ್ ಸರ್ಟಿಫಿಕೇಟ್ ನೀಡದೆ ವಂಚಿಸುತ್ತಾರೆ ಎಂದು ವರುಣ್ ಚೌಟ ಆರೋಪಿಸಿದರು

ಈ ಎಲ್ಲಾ ಬೇಡಿಕೆಗಳನ್ನು ಸರಕಾರ ಗಮನ ಹರಿಸಿ ಪರಿಹರಿಸಬೇಕು. ಒಂದು ವೇಳೆ ರಾಜ್ಯ ಸರ್ಕಾರ ಸಮಸ್ಯೆಗೆ ಸ್ಪಂದಿಸದಿದ್ದರೆ, ಉಗ್ರ ಪ್ರತಿಭಟನೆ ಅನಿವಾರ್ಯವಾಗಿದ್ದು, ರಾಜ್ಯಾದ್ಯಂತ ಅನಿರ್ದಿಷ್ಟ ಕಾಲ ಲಾರಿ ಮುಷ್ಕರ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ, ಕೆ.ಬಿ.ಸುಜನ್, ಉಪಾಧ್ಯಕ್ಷ ಓಬೈ ಅಬ್ರಹಾಂ, ಕಾರ್ಯದರ್ಶಿ ಸಚಿನ್ ಕುಳಾಯಿ, ಕೋಶಾಧಿಕಾರಿ ಧನ್ವನ್ ರಿತಿಕ್ ಮತ್ತಿತರು ಉಪಸ್ಥಿತರಿದ್ದರು.

Write A Comment