ಕನ್ನಡ ವಾರ್ತೆಗಳು

ಡಿ ದೇವರಾಜ ಅರಸು ಅವರ ಹಿರಿಯ ಪುತ್ರಿ ಮಾಜಿ ಸಚಿವೆ ಚಂದ್ರಪ್ರಭಾ ಅರಸು ವಿಧಿವಶ.

Pinterest LinkedIn Tumblr

Chamdra_prabha_died

ಮೈಸೂರು,ಮೇ.04: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರ ಹಿರಿಯ ಪುತ್ರಿ, ಮಾಜಿ ಸಚಿವೆ ಚಂದ್ರಪ್ರಭಾ ಅರಸು (71) ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಮಂಗಳವಾರ (ಮೇ 3) ನಿಧನರಾಗಿದ್ದಾರೆ.

ಕಳೆದ ಕೆಲದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಂದ್ರಪ್ರಭಾ ಅವರು ಅಪೋಲೊ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ 5.30ರ ಸುಮಾರಿನಲ್ಲಿ ವಿಧಿವಶರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಅರಸು ಕಲ್ಲಹಳ್ಳಿಯಲ್ಲಿರುವ ದೇವರಾಜ ಅರಸು ಅವರ ಸಮಾಧಿ ಪಕ್ಕದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ನೆರವೇರಲಿದೆ. ಅದಕ್ಕೂ ಮುನ್ನ ಮೈಸೂರಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.

ನಂತರ ಹುಣಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿ ಅನಂತರ ಮೃತದೇಹವನ್ನು ಅರಸು ಕಲ್ಲಹಳ್ಳಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಚಂದ್ರಪ್ರಭಾ ಅವರು 1991ರಲ್ಲಿ ಸಂಸದೆಯಾಗಿ, ಕಾಂಗ್ರೆಸ್ ಸರ್ಕಾರದಲ್ಲಿ ಅಬಕಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.

ಕೆಲ ವರ್ಷಗಳ ಹಿಂದೆ ನಡೆದ ಅಪಘಾತದಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದ ಅನಾರೋಗ್ಯದಿಂದ ಚಂದ್ರಪ್ರಭಾ ಅರಸು ಮಾನಸಿಕವಾಗಿ ಕುಸಿದು ಹೋಗಿದ್ದರು. ಚಂದ್ರಪ್ರಭಾ ಅವರಿಗೆ ಮೂವರು ಮಕ್ಕಳಿದ್ದು ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದ್ದು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Write A Comment