ಕನ್ನಡ ವಾರ್ತೆಗಳು

ಮನೆಗೆ ಕನ್ನ : 3.90 ಲ.ರೂ.ಮೌಲ್ಯದ ಚಿನ್ನಾಭರಣ ಕಳವು

Pinterest LinkedIn Tumblr

puttur_house_theft

ಪುತ್ತೂರು, ಮೇ 2: ಬೀಗ ಹಾಕಿದ್ದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ಕ್ಯಾಮರಾ ಸೇರಿದಂತೆ ಒಟ್ಟೂ 3.90 ಲ.ರೂ. ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾದ ಘಟನೆ ನಗರದ ದರ್ಬೆಯಲ್ಲಿ ನಡೆದಿದೆ.

ದರ್ಬೆ ನಾಲ್ಕನೇ ಬ್ಲಾಕ್ ನಿವಾಸಿ ಕೆ.ಪ್ರಭಾಕರ ಶೆಣೈಯವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕೇರಳದ ಕೋಯಿಕ್ಕೋಡ್ ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಮಾರಂಭವೊಂದು ನ‌ಡೆದಿದ್ದು, ಪ್ರಭಾಕರ ಶೆಣೈಯವರು ಶನಿವಾರ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಹಿತ ಅಲ್ಲಿಗೆ ತೆರಳಿದ್ದರು. ಈ ಸಂದರ್ಭ ಸಾಧಿಸಿದ ಕಳ್ಳರು ಎದುರು ಬಾಗಿಲಿನ ಬೀಗವನ್ನು ಮುರಿದು ಕೋಣೆಯಲ್ಲಿ ಕಪಾಟಿನಲ್ಲಿರಿಸಿದ್ದ ವಜ್ರ ಮತ್ತು ಮುತ್ತಿನ ಬೆಂಡೋಲೆಗಳು, ಚಿನ್ನದ ಎರಡು ಸರಗಳು, ಚಿನ್ನದ ಬಳೆಗಳು ಮತ್ತು ಸೋನಿ ಕ್ಯಾಮರಾವನ್ನು ಹೊತ್ತೊಯ್ದಿದ್ದಾರೆ. ಇವುಗಳ ಮೌಲ್ಯ 3.90 ಲ.ರೂ. ಗಳೆಂದು ಹೇಳಲಾಗಿದೆ.

ನಿನ್ನೆ ಬೆಳಿಗ್ಗೆ ಹಾಲು ಹಾಕಲು ಮನೆಗೆ ಬಂದಿದ್ದ ವ್ಯಕ್ತಿ ಬಾಗಿಲಿನ ಬೀಗ ಮುರಿದಿದುವುದನ್ನು ಕಂಡು ಪಕ್ಕದಲ್ಲಿಯೇ ಇರುವ ಪ್ರಭಾಕರ ಶೆಣೈಯವರ ಅಣ್ಣನಿಗೆ ಮಾಹಿತಿ ನೀಡಿದ್ದ. ಅವರು ತಮ್ಮನಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿದ್ದು, ಪ್ರಭಾಕರ ಶೆಣೈ ಸಂಜೆ ಊರಿಗೆ ವಾಪಸಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment