ಕನ್ನಡ ವಾರ್ತೆಗಳು

ಉಳ್ಳಾಲದಲ್ಲಿ ಇತ್ತೀಚಿಗೆ ನಡೆದ ನಾಲ್ಕು ಪ್ರಕರಣಗಳ ಪ್ರಮುಖ ಆರೋಪಿಗಳ ಬಂಧನ

Pinterest LinkedIn Tumblr

Police_Press_arest

ಮಂಗಳೂರು, ಮೇ.2 : ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾದ 3 ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಎಸ್.ಚಂದ್ರಶೇಖರ್ ಪ್ರಕಟಿಸಿದ್ದಾರೆ.

ಬಂಧಿತರನ್ನು ಉಳ್ಳಾಲ ಮೊಗವೀರ ಪಟ್ಣ ನಿವಾಸಿ ಮೀನುಗಾರಿಕೆ ಉದ್ಯೋಗ ನಡೆಸುತ್ತಿರುವ ರಾಹುಲ್ ಪೂಜಾರಿ (22),ಅಂಬ್ಲಮೊಗರು ಎಲಿಯಾರ್ ಪದವು ನಿವಾಸಿ ರಿಕ್ಷಾ ಚಾಲಕ ಪ್ರಜ್ವಲ್ @ ಹೇಮಚಂದ್ರ (21) ಹಾಗೂ ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಫಾಬ್ರಿಕೇಶನ್ ಉದ್ಯೋಗದಲ್ಲಿರುವ ವಿನೀತ್ (22) ಎಂದು ಹೆಸರಿಸಲಾಗಿದೆ.

ಸೋಮವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಮಿಷನರ್, ದಿನಾಂಕ: 14-04-2016 ರಂದು ಬೆಳಿಗ್ಗೆ 4-20 ಗಂಟೆ ಸುಮಾರಿಗೆ ಲತೀಫ್ ಮತ್ತು ಸಲೀಂ ಎಂಬವರು ಬೈಕ್ ನಲ್ಲಿ ಮಂಗಳೂರು ಮೀನು ಧಕ್ಕೆಗೆ ಹೋಗುತ್ತಿದ್ದ ಸಮಯ ಕೋಡಿ ರಸ್ತೆಯ ಬಳಿಯಲ್ಲಿ ಕೆಲವು ಜನರು ಲತೀಫ್ ರವರ ಬೈಕ್ ನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಲು ಪ್ರಯತ್ನಿಸಿದ ಪ್ರಕರಣ.  ದಿನಾಂಕ: 25-04-2016 ರಂದು ಬೆಳಿಗ್ಗೆ 4-45 ಗಂಟೆ ಸುಮಾರಿಗೆ ಇಬ್ರಾಹೀಂ ನಸ್ವಾನ್ ಎಂಬವರು ತನ್ನ ಬೈಕ್ ನಲ್ಲಿ ಬೆಳಿಗ್ಗಿನ ಜಾವ 4-45 ಗಂಟೆಗೆ ಮೊಗವೀರ ಪಟ್ಣ ಕೋಡಿ ರಸ್ತೆಯಲ್ಲಿ ಹೋಗುತ್ತಿದ್ದ ಸಮಯ ಕೆಲವು ಯುವಕರು ಇಬ್ರಾಹೀಂ ನಸ್ವಾನ್ ರವರ ಬೈಕ್ ನ್ನು ಅಡ್ಡಗಟ್ಟಿ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಕರಣ.  ದಿನಾಂಕ: 26-04-2016 ರಂದು ಮಧ್ಯರಾತ್ರಿ 00-50 ಗಂಟೆ ಸುಮಾರಿಗೆ ತೊಕ್ಕೊಟ್ಟು ಒಳ ಪೇಟೆ ಬಳಿ ಸೈಫಾನ್ ಸಲೀಂ, ನಿಝಾಮ್ ರವರ ಮೇಲೆ ಕೊಲೆಗೆ ಯತ್ನಿಸಿದ ಪ್ರಕರಣ ಮತ್ತು ದಿನಾಂಕ: 26-04-2016 ರಂದು ಮದ್ಯಾಹ್ನ 3-20 ಗಂಟೆಗೆ ಕಲ್ಲಾಪು ಪಟ್ನ ನಿವಾಸಿ ಸಫ್ವಾನ್ ಹಸನ್ ರವರ ಕೊಲೆಗೆ ಯತ್ನಿಸಿದ ಪ್ರಕರಣ. ಈ 4 ಪ್ರಕರಣಗಳ ಪ್ರಮುಖ ರೂವಾರಿ ಹಾಗೂ ಇತರರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ್ದಾರೆ ಎನ್ನಲಾದ ಮೂವರು ಆರೋಪಿಗಳನ್ನು ವಾಮಂಜೂರು ಪಚ್ಚನಾಡಿ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಆರೋಪಿಗಳ ಪೈಕಿ ರಾಹುಲ್ ಪೂಜಾರಿ ಎಂಬಾತನು ಮೇಲ್ಕಂಡ 4 ಅಹಿತಕರ ಘಟನೆಯ ಪ್ರಮುಖ ರೂವಾರಿಯಾಗಿರುತ್ತಾನೆ. ಈತನ ವಿರುದ್ಧ ಈ ಹಿಂದೆ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 3 ಕೊಲೆ ಯತ್ನ ಹಾಗೂ ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣಗಳು ದಾಖಲಾಗಿರುತ್ತದೆ.

ಪ್ರಜ್ವಲ್ ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಹಾಗೂ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣಗಳು ದಾಖಲಾಗಿರುತ್ತದೆ. ಬಂಧಿತ ಆರೋಪಿಗಳ ಪೈಕಿ ಪ್ರಜ್ವಲ್ ಮತ್ತು ವಿನಿತ್ ರವರು ಕಲ್ಲಾಪುವಿನ ಪಟ್ನ ರಸ್ತೆಯಲ್ಲಿ ದಿನಾಂಕ: 26-04-2016 ರಂದು ಸಫ್ವಾನ್ ಹಸನ್ ಎಂಬವರ ಕೊಲೆ ಯತ್ನ ಪ್ರಕರಣದಲ್ಲಿನ ಆರೋಪಿಯಾಗಿರುತ್ತಾರೆ. ಈ ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ 5 ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದವರು ತಿಳಿಸಿದರು.

ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ಕಮಿಷನರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಮ್ ಶಾಂತರಾಜು ( ಕಾನೂನು ಮತ್ತು ಸುವವ್ಯಸ್ಥೆ) ಹಾಗೂ ಡಾ. ಸಂಜೀವ ಎಮ್. ಪಾಟೀಲ್ ( ಅಪರಾಧ ಮತ್ತು ಸಂಚಾರಿ ವಿಭಾಗ) ಉಪಸ್ಥಿತರಿದ್ದರು.

Write A Comment