ಕನ್ನಡ ವಾರ್ತೆಗಳು

ರಾಜಧಾನಿ ಜ್ಯುವೆಲರ್ಸ್ ಶೂಟೌಟ್ ಪ್ರಕರಣ : ಖಾಲಿಯಾ ರಫೀಕ್‌ಗೆ 8 ದಿನಗಳ ಪೊಲೀಸ್ ಕಸ್ಟಡಿ

Pinterest LinkedIn Tumblr

 

Kalia_rafiq_policecustdy

ಪುತ್ತೂರು, ಏ.30:  ನಗರದ ರಾಜಧಾನಿ ಜ್ಯುವೆಲರ್ಸ್ ಶೂಟೌಟ್ ಪ್ರಕರಣದ ಪ್ರಧಾನ ಸೂತ್ರಧಾರಿ ಮತ್ತು ವಿದೇಶದಲ್ಲಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರ ಖಾಲಿಯಾ ರಫೀಕ್‌ಗೆ ಪುತ್ತೂರು ನ್ಯಾಯಾಲಯ 8 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿ ಆದೇಶಿಸಿದೆ.

ಖಾಲಿಯಾ ರಫೀಕ್‌ನನ್ನು ತ್ರಿಶೂರ್ ಪೊಲೀಸರು ಶುಕ್ರವಾರ ಬೆಳಗ್ಗೆ ಪುತ್ತೂರು ನ್ಯಾಯಾಲಯಕ್ಕೆ ತಂದು ಹಾಜರುಪಡಿಸಿದ್ದರು. ರಫೀಕ್‌ನ್ನು ತನಿಖೆಗಾಗಿ ತಮ್ಮ ವಶಕ್ಕೆ ಒಪ್ಪಿಸುವಂತೆ ನಗರ ಪೊಲೀಸರು ಬಾಡಿ ವಾರಂಟ್ ಸಲ್ಲಿಸಿದ್ದರು. ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ಖಾಲಿಯಾ ರಫೀಕ್ ಕೇರಳದ ತ್ರಿಶೂರ್ ಜೈಲ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದನು.

ಪುತ್ತೂರು ನಗರ ಪೊಲೀಸರು ಕಾಸರಗೋಡು ನ್ಯಾಯಾಲಯಕ್ಕೆ ಬಾಡಿ ವಾರಂಟ್ ಸಲ್ಲಿಸಿದ್ದರು. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಳದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಖಾಲಿಯಾ ರಫೀಕ್‌ಗೆ ಕಾಸರಗೋಡು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.

2015 ಅಕ್ಟೋಬರ್ 6 ರಂದು ಈ ಶೂಟೌಟ್ ಪ್ರಕರಣ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಅಬ್ದುಲ್ ಆಸಿರ್ ಮತ್ತು ಮಹಮ್ಮದ್ ಅನ್ವರ್‌ನನ್ನು ಈಗಾಗಲೇ ಬಂದಿಸಿದ್ದಾರೆ. ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಈ ಕೃತ್ಯ ನಡೆಸಲು ಖಾಲಿಯಾ ರಫೀಕ್ 2ರಿವಾಲ್ವರ್ ಮತ್ತು 50 ಸಾವಿರ ರೂ.ಗಳನ್ನು ಬಂಧಿತ ಆರೋಪಿಗಳಿಗೆ ನೀಡಿದ್ದನು. ಈ ಪ್ರಕರಣದಲ್ಲಿ ಬಳಸಲಾದ ರಿವಾಲ್ವರ್‌ಗಳ ವಶ ಮತ್ತು ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸಲು ಖಾಲಿಯಾ ರಫೀಕ್‌ನನ್ನು ಪುತ್ತೂರು ನಗರ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಪುತ್ತೂರು ನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಬ್ದುಲ್ ಖಾದರ್ ಮತ್ತು ಸಿಬಂದಿ ಖಾಲಿಯಾ ರಫೀಕ್‌ನನ್ನು ಪುತ್ತೂರು ನ್ಯಾಯಾಲಯದಿಂದ ತಮ್ಮ ವಶಕ್ಕೆ ತೆಗೆದುಕೊಂಡು ಆತನ ವೈದ್ಯಕೀಯ ಪರೀಕ್ಷೆ ನಡೆಸಿ ಪೊಲೀಸ್ ಠಾಣೆಗೆ ಕರೆದೊಯ್ದರು.

Write A Comment