ಕನ್ನಡ ವಾರ್ತೆಗಳು

ಉಳ್ಳಾಲದಲ್ಲಿ ದುಷ್ಕರ್ಮಿಗಳ ತಲವಾರು ದಾಳಿಯಲ್ಲಿ ಗಾಯಗೊಂಡಿದ್ದ ಮುಹಮ್ಮದ್ ಸೈಫಾನ್ ಮೃತ್ಯು

Pinterest LinkedIn Tumblr

Ullala_attack_paswan

ಮಂಗಳೂರು, ಎ.30: ಉಳ್ಳಾಲದಲ್ಲಿ ನಾಲ್ಕು ದಿನಗಳ ಹಿಂದೆ ದುಷ್ಕರ್ಮಿಗಳು ನಡೆಸಿದ ತಲವಾರು ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮುಹಮ್ಮದ್ ಸೈಫಾನ್(20) ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.

ಎ.26 ರಂದು ರಾತ್ರಿ ತೊಕ್ಕೊಟ್ಟು ಮೇಲ್ಸೇತುವೆಯ ಬಳಿ ಮುಹಮ್ಮದ್ ಸೈಫಾನ್ ಅವರಿಗೆ ದುಷ್ಕರ್ಮಿಗಳು ತಲವಾರಿನಿಂದ ಗಂಭೀರವಾಗಿ ಗಾಯಗೊಳಿಸಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ರಾತ್ರಿಯಿಂದ ತೀವ್ರವಾಗಿ ಅಸ್ವಸ್ಥರಾಗಿದ್ದರು.

ಎಪ್ರಿಲ್ 26ರಂದು ತಡರಾತ್ರಿ ವೇಳೆ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಬೈಕಿನಲ್ಲಿ ಹಿಂತಿರುಗುತ್ತಿದ್ದ ಮೂರು ಮಂದಿಯ ಮೇಲೆ ತಲವಾರು ದಾಳಿ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದರು.. ಈ ದಾಳಿಯಲ್ಲಿ ಪಿಲಾರು ನಿವಾಸಿ ಮುಹಮ್ಮದ್ ಸೈಫಾನ್ ಗಂಭೀರ ಗಾಯಗೊಂಡ್ಡಿದ್ದರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಜತೆಗಿದ್ದ ಅದೇ ಊರಿನವರೇ ಆದ ನಿಝಾಮ್ (19), ಸಲೀಂ(24) ಅವರಿಗೂ ಸ್ವಲ್ಪ ಪ್ರಮಾಣದ ಗಾಯವಾಗಿದ್ದು, ಇವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮದಕ ಸಮೀಪ ಮದುವೆ ಸಮಾರಂಭದಲ್ಲಿ ಕ್ಯಾಟರಿಂಗ್ ಕೆಲಸದಲ್ಲಿ ಪಾಲ್ಗೊಂಡಿದ್ದ ಸಫ್ವಾನ್, ನಿಝಾಮ್ ಮತ್ತು ಸಲೀಂ ಅವರು ಕ್ಯಾಟರಿಂಗ್ ವಾಹನವನ್ನು ತೊಕ್ಕೊಟ್ಟು ಟಿ.ಸಿ.ರೋಡಿನಲ್ಲಿ ನಿಲ್ಲಿಸಲು ತಡರಾತ್ರಿ ವೇಳೆ ಆಗಮಿಸಿದ್ದರು. ಅಲ್ಲಿ ವಾಹನ ನಿಲ್ಲಿಸಿ ಬೈಕಿನಲ್ಲಿ ಮೂರು ಮಂದಿಯೂ ಜತೆಯಾಗಿ ತೆರಳುವ ತೊಕ್ಕೊಟ್ಟು ಒಳಪೇಟೆಯ ಓವರ್ ಬ್ರಿಡ್ಜ್ ಸಮೀಪ ಅಡಗಿ ಕುಳಿತ ಸುಮಾರು ಐದು ಮಂದಿ ದುಷ್ಕರ್ಮಿಗಳ ತಂಡ ಚಲಿಸುತ್ತಿದ್ದ ಬೈಕಿನತ್ತ ತಲವಾರು ಬೀಸಿ ಹತ್ಯೆಗೆ ಯತ್ನಿಸಿದ್ದ ಬಗ್ಗೆ ದೂರು ದಾಖಲಾಗಿತ್ತು.

ಈ ವೇಳೆ ಬೈಕ್ ಚಲಾಯಿಸುತ್ತಿದ್ದ ನಿಝಾಮ್ ಹಾಗೂ ಹಿಂಬದಿ ಕುಳಿತಿದ್ದ ಸಲೀಂ ಇಬ್ಬರೂ ದಾಳಿಯಿಂದ ತಪ್ಪಿಸಿಕೊಂಡರೆ ನಡುವೆ ಕುಳಿತಿದ್ದ ಸಫ್ವಾನ್ ಮೇಲೆ ತಂಡ ತಲವಾರಿನಿಂದ ಹೊಟ್ಟೆ ಭಾಗಕ್ಕೆ ಏಟಾಗಿದ್ದು, ಆದರೂ ತಿವಿದ ಹೊಟ್ಟೆಯ ಭಾಗವನ್ನು ಕೈಯಲ್ಲೇ ಹಿಡಿದುಕೊಂಡ ಸಫ್ವಾನ್ ಒಂದು ಕಿ.ಮೀ. ದೂರದ ಕಾಪಿಕಾಡು ವರೆಗೂ ಓಡಿ ತಪ್ಪಿಸಿಕೊಂಡು, ಅಲ್ಲಿಂದ ಗೆಳೆಯರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ತಡರಾತ್ರಿಯಾದರೂ ಗೆಳೆಯನ ಕರೆಗೆ ಸ್ಪಂಧಿಸಿದ ಸಮದ್ ಮತ್ತು ನಝ್ರತ್ ಎಂಬವರು ಕೂಡಲೇ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೆರ್ಮನ್ನೂರು ಗ್ರಾಮದ ಪಿಲಾರು ಚೆಂಬುಗುಡ್ಡೆ ಬಳಿಯ ಮದನಿ ಜುಮಾ ಮಸೀದಿ ಸಮೀಪದ ನಿವಾಸಿಯಾಗಿದ್ದ ಮುಹಮ್ಮದ್ ಸೈಫಾನ್ ತೀರಾ ಬಡ ಕುಟುಂಬದಿಂದ ಬಂದಿದ್ದು ಹಗಲಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸಿ ಕುಟುಂಬ ನಿರ್ವಹಣೆಗಾಗಿ ರಾತ್ರಿ ಕ್ಯಾಟರಿಂಗ್ ಮತ್ತಿತರ ಕೆಲಸಗಳನ್ನು ಮಾಡುತ್ತಿದ್ದರು.

ಮೃತರು ತಾಯಿ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮುಹಮ್ಮದ್ ಸೈಫಾನ್ ಕುಟುಂಬಕ್ಕೆ ಜಿಲ್ಲಾಡಳಿತ ನೆರವನ್ನು ನೀಡಬೇಕೆಂದು ಸೈಫಾನ್ ಆಪ್ತರು ಆಗ್ರಹಿಸಿದ್ದಾರೆ.

Write A Comment