ಕನ್ನಡ ವಾರ್ತೆಗಳು

ತುಂಬೆ ಅಣೆಕಟ್ಟಿನಲ್ಲಿ ಒಂದು ವಾರಕ್ಕೆ ಸಾಕಾಗುವಷ್ಟು ಮಾತ್ರ ನೀರು :ಮಳೆಗಾಗಿ ಪ್ರಾರ್ಥಿಸಲು ಮೇಯರ್ ಮನವಿ

Pinterest LinkedIn Tumblr

Mcc_Meet_waterPro_1

ಮಂಗಳೂರು,ಎ.30: ನಗರಕ್ಕೆ ನೀರು ಸರಬರಾಜು ಆಗುತ್ತಿರುವ ತುಂಬೆ ಅಣೆಕಟ್ಟಿನಲ್ಲಿ ಮುಂದಿನ ಒಂದು ವಾರಕ್ಕೆ ಸಾಕಾಗುವಷ್ಟು ಮಾತ್ರವೇ ನೀರು ಲಭ್ಯವಿದ್ದು, ಸಾರ್ವಜನಿಕರು ಮಂದಿರ, ಚರ್ಚ್, ಮಸೀದಿಗಳಲ್ಲಿ ಮಳೆಗಾಗಿ ಪ್ರಾರ್ಥನೆ ಮಾಡಬೇಕೆಂದು ಮೇಯರ್ ಹರಿನಾಥ್ ಹರಿನಾಥ್ ಬೊಂದೇಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯಕ್ಕೆ ತುಂಬೆ ಅಣೆಕಟ್ಟಿನಿಂದ ಮಂಗಳೂರು ಮಹಾನಗರ ಪಾಲಿಕೆಗೆ ಪ್ರಸ್ತುತ ಎರಡು ದಿನಗಳಿಗೊಮ್ಮೆ ಪೂರೈಕೆ ಮಾಡಲಾಗುತ್ತಿದ್ದು, ಜೀವನದಿ ನೇತ್ರಾವತಿಯಿಂದ ಮಂಗಳೂರಿಗೆ ಪೂರೈಕೆಯಾಗುವ ನೀರಿನ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಜನರು ಕಷ್ಟ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Mcc_Meet_waterPro_2

ಕಳೆದ ವರ್ಷ ಪ್ರಕೃತಿ ನಿಯಮದಲ್ಲಿ ಉಂಟಾದ ಏರುಪೇರಿನಿಂದಾಗಿ ರಾಜ್ಯದಲ್ಲೇ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಉಡುಪಿ, ಮಡಿಕೇರಿ ಹಾಗೂ ಮಂಗಳೂರಿನಲ್ಲೂ ನೀರಿನ ಕೊರತೆ ಎದುರಿಸುವಂತಾಗಿದೆ. ಪ್ರತಿ ವರ್ಷ ಎಪ್ರಿಲ್‌ನಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿತ್ತು. ಈ ಬಾರಿ ಅದೂ ಆಗಿಲ್ಲದ ಕಾರಣ ದೇವರಿಗೆ ಮೊರೆ ಹೋಗಬೇಕಾಗಿದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲು ನೀರು ನಿರ್ವಹಣೆಯಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಕಾರಣ. ಎಎಂಆರ್ ಅಣೆಕಟ್ಟು ಹಾಗೂ ತುಂಬೆ ಅಣೆಕಟ್ಟಿನಲ್ಲಿರುವ ನೀರಿನ ಪ್ರಮಾಣದ ಬಗ್ಗೆ ಅಧಿಕಾರಿಗಳು, ಸಚಿವರು ಹಾಗೂ ಮನಪಾ ಆಡಳಿತದ ಹೇಳಿಕೆ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಕ್ಕೆ ಸೃಷ್ಟಿಸಿದೆ ಎಂದು ಸಭೆಯಲ್ಲಿ ಆರೋಪ ವ್ಯಕ್ತವಾಯಿತು.

Mcc_Meet_waterPro_3

ಎರಡು ದಿನಗಳಿಗೊಮ್ಮೆ ಪೂರೈಕೆಯಾಗುವ ನೀರು ಕೆಲವು ವಾರ್ಡ್‌ಗಳ ಶೇ. 40ರಷ್ಟು ಭಾಗವನ್ನು ತಲುಪುತ್ತಿಲ್ಲ. ನೀರಿಗಾಗಿ ಕೈಗೊಂಡ ಪರ್ಯಾಯ ವ್ಯವಸ್ಥೆಗಳು ಅನುಷ್ಠಾನವಾಗಿಲ್ಲ. ಟ್ಯಾಂಕರ್ ನೀರು ಪೂರೈಕೆಯಾಗುತ್ತಿಲ್ಲ. ನಗರದಲ್ಲಿ ಟ್ಯಾಂಕರ್ ಮಾಫಿಯಾ ಕೂಡಾ ನಡೆಯುತ್ತಿದೆ ಎಂಬ ಆರೋಪಗಳು ಸದಸ್ಯರಿಂದ ವ್ಯಕ್ತವಾಯಿತು.

ಎಪ್ರಿಲ್ 20ರಿಂದ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುವ ಬಗ್ಗೆ ಹಾಗೂಕೈಗಾರಿಕೆಗಳಿಗೆ ಸ್ಥಗಿತಗೊಳಿಸುವಂತೆ ಕೋರಿದಾಗ, ಆಗ ಶೇ. 50ರಷ್ಟು ಮಾತ್ರ ಕಡಿತಕ್ಕೆ ಆದೇಶಿಸಲಾಯಿತು. ಪ್ರಸ್ತುತ ತುಂಬೆ ಅಣೆಕಟ್ಟಿನಲ್ಲಿ 6 .6 ಅಡಿಗಳಷ್ಟು ನೀರಿದ್ದು, ನೀರು ಪೂರೈಕೆಯಾಗದ ಭಾಗಗಳಿಗೆ 18 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಯಾಗುತ್ತಿದೆ ಎಂದು ಮನಪಾ ಆಯುಕ್ತ ಡಾ. ಎಚ್. ಎನ್. ಗೋಪಾಲ ಕೃಷ್ಣ ಸಭೆಗೆ ಮಾಹಿತಿ ನೀಡಿದರು.

ಆಯುಕ್ತರ ಹೇಳಿಕೆಯಲ್ಲಿ ಗೊಂದಲವಿದೆ, ನಗರದಲ್ಲಿ 22 ಟ್ಯಾಂಕರ್‌ಗಳಿಂದ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ ಆಯುಕ್ತರು 18 ಟ್ಯಾಂಕರ್‌ಗಳಲ್ಲಿ ಎಂದು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲೋಟ್ ಪಿಂಟೋ, ಬೆಂದೂರ್‌ವೆಲ್‌ನ ನೀರು ಶುದ್ಧೀಕರಣ ಘಟಕದಿಂದ 13 ಟ್ಯಾಂಕರ್‌ಗಳು, ಕರಾವಳಿ ಪಂಪ್‌ಹೌಸ್‌ನಿಂದ 3 ಹಾಗೂ ಸುರತ್ಕಲ್‌ನಲ್ಲಿ 6 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಗೊಂದಲಕ್ಕೆ ತೆರೆ ಎಳೆದರು.

Mcc_Meet_waterPro_4

ಎಸ್‌ಇಝೆಡ್, ಎಂಆರ್‌ಪಿಎಲ್‌ಗೆ ನೀರು..!  ಆರೋಪ

ನಗರದಲ್ಲಿ ನೀರಿನ ಸಮಸ್ಯೆ ಏರ್ಪಟ್ಟ ಬಳಿಕವೂ ಎಸ್‌ಇಝೆಡ್, ಎಂಆರ್‌ಪಿಎಲ್‌ನವರು ದಿನದ 24 ಗಂಟೆಯೂ ನೀರು ಪೂರೈಕೆ ಮಾಡಿದ್ದರಿಂದಲೇ ಎಎಂಆರ್ ಡ್ಯಾಂ ಬರಿದಾಗಿದೆ. ಹೈಡ್ರೋ ಪ್ರಾಜೆಕ್ಟ್ ಡಿಸೆಂಬರ್‌ಗೆ ನಿಲ್ಲಿಸಬೇಕೆಂಬ ನಿಯಮವಿದೆ. ಹಾಗಿದ್ದರೂ ಫೆಬ್ರವರಿ ವರೆಗೂ ಎಎಂಆರ್‌ನವರು ವಿದ್ಯುತ್ ಉತ್ಪಾದನೆಗೆ ನೀರು ಬಳಕೆ ಮಾಡುತ್ತಿದ್ದರು ಎಂದು ಮಾಜಿ ಮೇಯರ್ ಮಹಾಬಲ ಮಾರ್ಲ ಆರೋಪಿಸಿದರು.

ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ ಅವರು ಮಾತನಾಡಿ, ತುಂಬೆ ಅಣೆಕಟ್ಟಿನಲ್ಲಿ ನೀರು ಬರಿದಾದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಾರ್ಡ್‌ಗೆ ಒಂದರಂತೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲು ಸಿದ್ಧತೆ ನಡೆಸಲಾಗಿದೆ. ನೀರಿನ ಮೂಲಗಳನ್ನು ಪತ್ತೆ ಮಾಡಿ ನೀರಿನ ಪರಿಶುದ್ಧತೆಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಎಎಂಆರ್ ಅಣೆಕಟ್ಟಿನ 11 ಕಿ.ಮೀ. ವ್ಯಾಪ್ತಿಯಲ್ಲಿ ರೈತರು ಅನಧಿಕೃತವಾಗಿ ಪಂಪ್ ಹಾಕಿ ಬಳಸುತ್ತಿದ್ದುದನ್ನು ತೆರವುಗೊಳಿಸಲಾಗಿದೆ. ಗುಂಡ್ಯ, ಕೆಂಪು ಹೊಳೆಯಿಂದ ದಿಶಾ ಪವರ್ ಪ್ರಾಜೆಕ್ಟ್‌ನಲ್ಲಿ 2 ಎಂಸಿಎಂ ನೀರು ಲಭ್ಯವಿದ್ದು, ಪರಿಸ್ಥಿತಿ ಕೈಮೀರಿದಲ್ಲಿ ಆ ನೀರು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತುಂಬೆ ಅಣೆಕಟ್ಟಿನಲ್ಲಿ ಗುರುವಾರ 6.8 ಅಡಿ ನೀರಿದ್ದರೆ, ಇಂದು 6.6 ಅಡಿ ನೀರು ಲಭ್ಯವಿದೆ ಇಂದು ಎಂದು ತಿಳಿಸಿದರು.

ಸಭೆಯಲ್ಲಿ ಉಪ ಮೇಯರ್ ಸುಮಿತ್ರ ಕರಿಯ, ಸ್ಥಾಯಿ ಸಮಿತಿ ಬಶೀರ್ ಅಹಮ್ಮದ್, ಅಪ್ಪಿಲತಾ ಉಪಸ್ಥಿತರಿದ್ದರು.

Write A Comment