ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆ ವಿರುದ್ಧ ಮೇ 19ರಂದು ದ.ಕ. ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಬಂದ್‌ : ಮೇ 6ರೊಳಗೆ ಸರ್ವಧರ್ಮ, ಸಂಘಟನೆಗಳ ಪ್ರಮುಖರ ಸಭೆ

Pinterest LinkedIn Tumblr

Vijaya_kumar_Press_1

ಮಂಗಳೂರು, ಎ. 29: ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ವತಿಯಿಂದ ನಗರ ಆರ್ಯ ಸಮಾಜದಲ್ಲಿ ಬುಧವಾರ ನಡೆದ ಸಭೆಯಲ್ಲಿ ಎತ್ತಿನಹೊಳೆ ಯೋಜನೆ ನಿಲ್ಲಿಸಲು ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮೇ 19ರಂದು ದ.ಕ. ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಬಂದ್‌ ಆಚರಿಸುವ ನಿರ್ಣಯ ಕೈಗೊಂಡಿರುವ ಜತೆಯಲ್ಲೇ, ಮೇ 6ರೊಳಗೆ ಎಲ್ಲಾ ತಾಲೂಕುಗಳಲ್ಲೂ ಸರ್ವಧರ್ಮ, ಸಂಘಟನೆಗಳ ಪ್ರಮುಖರ ಸಭೆ ನಡೆಸಲಾಗುವುದು ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ತಿಳಿಸಿದೆ.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಅವರು, ಎತ್ತಿನಹೊಳೆ ಯೋಜನೆ ವಿರೋಧಿಸಿ ಸ್ವಯಂಪ್ರೇರಿತ ಬಂದ್ ಆಚರಣೆ ಕುರಿತಂತೆ ಕಳೆದ ಬುಧವಾರ ಜಿಲ್ಲೆಯ ವಿವಿಧ ಧರ್ಮಗಳ ನೇತಾರರು, ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ ಆಯಾ ತಾಲೂಕುಗಳಲ್ಲಿಯೂ ಪ್ರತಿಭಟನೆ ನಡೆಸುವ ಕುರಿತಂತೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.

Vijaya_kumar_Press_2 Vijaya_kumar_Press_3

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರು ವೌನವಾಗಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳ ನಿಲುವು ಕೂಡಾ ಬೇಸರ ತಂದಿದೆ. ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಬರಿದು ಮಾಡುವ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವಲ್ಲಿ ರಾಜಕೀಯ ಬೇಡ ಎಂದು ಅವರು ಹೇಳಿದರು.

ಯೋಜನೆಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿ ನೇತ್ರಾವತಿ ಪರ ಹೋರಾಟಗಾರರು ನಡೆಸುತ್ತಿರುವ ಹೋರಾಟವನ್ನು ಸರಕಾರ ನಿರ್ಲಕ್ಷಿಸುತ್ತಿದೆ. ನೇತ್ರಾವತಿ ನದಿಯ ಸಂರಕ್ಷಣೆಗಾಗಿ ಹೋರಾಡುತ್ತಿರುವ ವಿವಿಧ ಸಂಘಟನೆಗಳ ಪ್ರತಿ ನಿಧಿಗಳನ್ನೊಳಗೊಂಡ ಸಮಿತಿಯ ಮೂಲಕ ಸರ ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮಾತುಕತೆಗೂ ಕರೆದಿಲ್ಲ. ಈ ಎಲ್ಲಾ ಕಾರಣಗಳಿಂದ ಜಿಲ್ಲಾ ಬಂದ್ ರೀತಿಯ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದ ನೆತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ ವಿಜಯಕುಮಾರ್‌ ಶೆಟ್ಟಿ ಅವರು, ಜಿಲ್ಲೆಯಲ್ಲಿರುವ ಎಲ್ಲಾ ಪ್ರತಿನಿಧಿಗಳಿಂದ ಎತ್ತಿನಹೊಳೆ ವಿರೋಧಿಸುವ ನಿಟ್ಟಿನಲ್ಲಿ ಬೆಂಬಲ ದೊರೆಯಲಿಲ್ಲ. ನಮ್ಮ ಕೂಗು ಸರಕಾರಕ್ಕೆ ಇನ್ನೂ ತಲುಪಿಲ್ಲ.ಆದರೆ ಜಿಲ್ಲೆಯ ಜನರಿಂದ ಜಾತಿ, ಮತ, ಭೇದವಿಲ್ಲದೆ ಬೆಂಬಲ ದೊರೆಯುತ್ತಿದೆ ಎಂದು ತಿಳಿಸಿದರು.

Vijaya_kumar_Press_4

ನೇತ್ರಾವತಿ ನದಿ ತಿರುವಿಗೆ ಬದಲಾಗಿ ಎತ್ತಿನ ಹೊಳೆ ಯೋಜನೆಯನ್ನು ಸರಕಾರ ಜಾರಿ ಮಾಡಲು ಹೊರಟಿದೆ. ಇದರಿಂದ ಜಿಲ್ಲೆಯಲ್ಲಿ ಇನ್ನಷ್ಟು ನೀರಿನ ಸಮಸ್ಯೆ ಉದ್ಭವವಾಗುತ್ತಿದ್ದು, ಎತ್ತಿನಹೊಳೆ ಯೋಜನೆಯನ್ನು ಸ್ಥಗಿತಗೊಳಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ಸರಕಾರ ನಿರ್ಲಕ್ಷಿಸುತ್ತಿದೆ. ಈ ನಿಟ್ಟಿನಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸುವ ನಿಟ್ಟಿನಲ್ಲಿ ಮೇ 19ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸ್ವಯಂಪ್ರೇರಿತ ಬಂದ್ ನಡೆಸಲು ಸಾರ್ವಜನಿಕರ ಸಹಕಾರ ಕೋರಲು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಆರ್ಯ ಸಮಾಜದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತು.

ಮೇ 19ರ ಬಂದ್‌ಗೆ ಪೂರ್ವಭಾವಿಯಾಗಿ ಮೇ 16ರಂದು ಜಿಲ್ಲೆಯ ಸಾವಿರಾರು ಜನರು ಮಧ್ಯಾಹ್ನ 3 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದ ಬಳಿ (ಜ್ಯೋತಿ ಸರ್ಕಲ್) ಒಟ್ಟು ಸೇರಿ ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಲಾಗುವುದು. ಬಳಿಕ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಜಿಲ್ಲೆಯ ಜನರ ಒಕ್ಕೊರಳಿನ ಆಗ್ರಹವನ್ನು ಮನವಿ ಮೂಲಕ ಸಲ್ಲಿಸಲಾಗುವುದು ಎಂದು ವಿಜಯ ಕಮಾರ್ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾರ್ಗದರ್ಶನ ಮಂಡಳಿಯ ಎಸ್. ಜಯರಾಮ ಸಾಂತ,ರಾಜೀವ್ ಕಾಂಚನ್, ಸಂಚಾಲಕರಾದ ಸತ್ಯಜಿತ್ ಸುರತ್ಕಲ್, ಶಶಿರಾಜ್ ಶೆಟ್ಟಿ ಕೊಳಂಬೆ, ಹನೀಫ್ ಖಾನ್ ಕೋಡಾಜೆ, ದಿನಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಮೀರ್ ಅಹಮ್ಮದ್ ತುಂಬೆ, ಉಪಾಧ್ಯಕ್ಷರಾದ ಡೆನ್ನಿಸ್ ಡಿಸಿಲ್ವಾ, ಯಶೋಧರ ಚೌಟ, ನಾಗರಾಜ್ ಆಚಾರ್, ಹರಿಕೃಷ್ಣ ಬಂಟ್ವಾಳ್ ಮುಂತಾದವರು ಉಪಸ್ಥಿತರಿದ್ದರು.

Write A Comment