ಕನ್ನಡ ವಾರ್ತೆಗಳು

ಬಾಳಿಗ ಮರ್ಡರ್ ಕೇಸ್ : ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

Pinterest LinkedIn Tumblr

Baliga_murder_naresh

ಮಂಗಳೂರು, ಏ.29: ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಪಿ. ಬಾಳಿಗ ಹತ್ಯೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ಶಂಕಿತ ಆರೋಪಿ ಯುವ ಬ್ರಿಗೇಡ್ ನ ನರೇಶ್ ಶೆಣೈ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ.

ಎಪ್ರಿಲ್ 25ರಂದು ನರೇಶ್ ಶೆಣೈ ಪರ ವಕೀಲರು ವಾದ ಮಂಡಿಸಿದ್ದು, ಎಪ್ರಿಲ್ 26ರಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ರವರ ಸಮ್ಮುಖದಲ್ಲಿ ಎಪ್ರಿಲ್ 26ರಂದು ನಡೆದ ಪ್ರಕರಣದ ವಿಚಾರಣೆಯ ವೇಳೆ ಸರ್ಕಾರಿ ಅಭಿಯೋಜಕರಾದ ಶೇಖರ ಶೆಟ್ಟಿಯವರು ನಿರೀಕ್ಷಣಾ ಜಾಮೀನು ಅರ್ಜಿಗೆ ತ್ರೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈಗಾಗಲೇ ಜಾಮೀನು ಅರ್ಜಿ ವಿಚಾರಣೆ ಮುಗಿದಿದ್ದು, ಏ. 29ಕ್ಕೆ ಅಂತಿಮ ತೀರ್ಪು ಹೊರಬರುವ ಬಗ್ಗೆ ಪ್ರಕಟವಾಗಿತ್ತು. ಇದೀಗ ಅಂತಿಮ ತೀರ್ಪು ಹೊರಬಿದ್ದಿದ್ದು, ನರೇಶ್ ಶೆಣೈ ಪರ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.

ಮಾ.21ರಂದು ಮರ್ಡರ್ : ನರೇಶ್ ಶೆಣೈ ನಾಪತ್ತೆ

ಮಾ.21ರಂದು ಮುಂಜಾನೆ 5.30ರ ಸುಮಾರಿಗೆ ಪಿವಿಎಸ್ ಕಲಾಕುಂಜಾದ ಬಳಿಯ ತಮ್ಮ ನಿವಾಸದಿಂದ ದೇವಸ್ಥಾನಕ್ಕೆ ಹೊರಡುತ್ತಿದ್ದ ವೇಳೆ ಮನೆಯ ಸಮೀಪದಲ್ಲೇ ಬಾಳಿಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ಬಾಳಿಗ ಹತ್ಯೆ ಪ್ರಕರಣದಲ್ಲಿ ನರೇಶ್ ಶೆಣೈ ಅವರನ್ನು ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ ಹತ್ಯೆ ನಡೆದ ಬಳಿಕ ನರೇಶ್ ಶೆಣೈ ತಲೆಮರೆಸಿಕೊಂಡಿರುವುದರಿಂದ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಈ ಮಧ್ಯೆ ಹೈಕೋರ್ಟ್ ವಕೀಲರ ಸೂಚನೆಯ ಮೇರೆಗೆ ನರೇಶ್ ಶೆಣೈ ಪರ ವಕೀಲರು ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿ ನರೇಶ್ ಶೆಣೈ ಜೊತೆ ಇವರ ಸ್ನೇಹಿತರಾದ ಶ್ರೀಕಾಂತ್ ಹಾಗೂ ವಿಘ್ನೇಶ್ ಕೂಡಾ ತಲೆ ಮರೆಸಿಕೊಂಡಿದ್ದಾರೆ. ಶ್ರೀಕಾಂತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ನರೇಶ್ ಶೆಣೈ ಹಾಗೂ ಶ್ರೀಕಾಂತ್ ವಿರುದ್ಧ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಈ ನಡುವೆ ಪೊಲೀಸರಿಗೆ ಸವಾಲಾಗಿರುವ ಈ ಪ್ರಕರಣದ ಉಳಿದ ಆರೋಪಿಗಳ ಶೋಧ ಮುಂದುವರಿದಿದೆ.

ಮೇ 2ರಂದು ಪ್ರತಿಭಟನಾ ಮೆರವಣಿಗೆ :

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಗೀಡಾಗಿ ಒಂದು ತಿಂಗಳು ಕಳೆದರೂ ಪ್ರಕರಣವನ್ನು ಪೊಲೀಸರು ಸಮರ್ಪಕವಾಗಿ ಭೇದಿಸಿಲ್ಲ. ಇದರ ಹಿಂದಿರುವ ಪ್ರಮುಖ ಆರೋಪಿಗಳ ವಿರುದ್ಧ ಕಠಿಣ ಕ್ರಮ ಆಗಿಲ್ಲ. ಆಡಳಿತದ ರಾಜಕೀಯ ಪಕ್ಷದ ಪ್ರತಿನಿಧಿಗಳು, ಮುಖ್ಯವಾಹಿನಿಯಲ್ಲಿರುವ ಪಕ್ಷ ಗಳ ಮುಖಂಡರು ಈ ಬಗ್ಗೆ ವೌನವಹಿಸಿದ್ದಾರೆ. ಬಾಳಿಗಾರ ಕುಟುಂಬಕ್ಕೆ ಇನ್ನೂ ನ್ಯಾಯ ದೊರೆಯದಿರುವುದರಿಂದ ಮೇ 2ರಂದು ಬಾಳಿಗಾರ ನಿವಾಸದ ಬಳಿಯಿಂದ ಪೊಲೀಸ್ ಕಮಿಷನರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಚಾರವಾದಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ನರೇಂದ್ರ ನಾಯಕ್ ಪ್ರಕಟಿಸಿದ್ದಾರೆ.

ಮಾಹಿತಿ ಹಕ್ಕು ಆಯೋಗಕ್ಕೆ ವರದಿ : ಸೂಚನೆ

ಇದೇ ಸಂದರ್ಭದಲ್ಲಿ ಆರ್‌ಟಿಎ ಕಾರ್ಯಕರ್ತ ವಿನಾಯಕ ಪಿ.ಬಾಳಿಗ ಅವರ ಕೊಲೆಯ ಹಿಂದಿರುವವರನ್ನು ಕಂಡುಹಿಡಿದು ಕಾನೂನು ರೀತಿಯಲ್ಲಿ ಶೀಘ್ರ ಕ್ರಮ ವಹಿಸಿ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ವರದಿ ನೀಡುವಂತೆ ಆಯೋಗದ ಆಯುಕ್ತ ಎಲ್.ಕೃಷ್ಣಮೂರ್ತಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರಿಗೆ ಸೂಚಿಸಿದ್ದರು.

ಅನಿರೀಕ್ಷಿತ ಬೆಳವಣೆಗೆ:ಬಾಳಿಗರ ತಂದೆ ಹೆಸರಿನಲ್ಲಿ ಅಫಿದಾವಿತ್

ಈ ನಡುವೆ ನಡೆದ ಅನಿರೀಕ್ಷಿತ ಬೆಳವಣೆಗೆಯೊಂದರಲ್ಲಿ ಮಂಗಳೂರಿನ ಇನ್ನೋರ್ವ ಯುವ ನ್ಯಾಯಾವಾದಿ ಸಚಿನ್ ದೇವೇಂದ್ರ ಕೊಲೆಗೀಡಾದ ವಿನಾಯಕ ಬಾಳಿಗಾರವರ ತಂದೆ ಹೆಸರಿನಲ್ಲಿ ಅಫಿದಾವಿತ್ ಒಂದನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನರೇಶ್ ಶೆಣೈ ಜಾಮೀನು ಅರ್ಜಿ ವಿರೋಧಿಸಿ ಸರಕಾರಿ ಅಭಿಯೋಜಕರು ಮಂಡಿಸುವ ವಾದದಲ್ಲಿ ಸಹಕಾರ ನೀಡುವಲ್ಲಿ ಈ ಅಫಿದಾವಿರರನ್ನು ಪರಿಗಣಿಸಬೇಕೆಂದು ಅವರು ಕೋರೀದ್ದಾರೆ.ಸಿಆರ್‌ಪಿಸಿ ಸೆಕ್ಷನ್ 24/8ರ ಅನ್ವಯ ತಾನು ಈ ಅಫಿದಾವಿತ್ ಸಲ್ಲಿಸಿರುವುದಾಗಿ ಸಚಿನ್ ದೇವೇಂದ್ರ ತಿಳಿಸಿದ್ದಾರೆ.

ನರೇಶ್ ಶೆಣೈ ಪರ ವಕೀಲ ಶಂಭು ಶರ್ಮ 2013ರ ಕೆಪಿಸಿಆರ್ ತೀರ್ಪೊಂದರ ಅನ್ವಯ ಈ ಅಫಿದಾವಿತ್ ಸಲ್ಲಿಕೆಗೆ ತನ್ನ ಅಕ್ಷೇಪ ವ್ಯಕ್ತಪಡಿಸಿದರೂ ಅಂತಿಮವಾಗಿ ನ್ಯಾಯಾಧೀಶರು ಸಚಿನ್ ದೇವೇಂದ್ರ ಸಲ್ಲಿಸಿದ ಅಫಿದಾವಿತನ್ನು ಪರಿಗಣಿಸುವಂತೆ ಸೂಚಿಸಿದ್ದಾರೆ.

ನರೇಶ್ ಶೆಣೈ ಪರ ವಾದ ಮಂಡಿಸಿದ ಶಂಭು ಶರ್ಮ, ಕಕ್ಷಿದಾರ ನರೇಶ್ ಶೆಣೈಗೂ ಕೊಲೆಗೀಡಾದ ವಿನಾಯಕ ಬಾಳಿಗಾರವರಿಗೂ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ . ಪ್ರದಾನಿ ನರೇಂದ್ರ ಮೋದಿ ಪರವಾಗಿರುವ ನಮೋ ಬ್ರೀಗೇಡ್ ಸಂಸ್ಥಾಪಕರಾಗಿರುವ ನರೇಶ್ ಶೆಣೈಯವರನ್ನು ರಾಜಕೀಯವಾಗಿ ಪಿತೂರಿ ನಡೆಸಿ ಈ ಕೊಲೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರ ಸಾಮಾಜಿಕ ಕಳಕಳಿ ಮತ್ತು ಏಳಿಗೆಯನ್ನು ಸಹಿಸದ ಶಕ್ತಿಗಳು ಒಂದಾಗಿ ರೂಪಿಸಿರುವ ಷಡ್ಯಂತ್ರಕ್ಕೆ ನರೇಶ್ ಶೆಣೈ ಬಲಿಪಶುವಾಗಿದ್ದಾರೆಂದು ವಾದ ಮಂಡಿಸಿದ್ದರು.

ಮೊದಲ ಹೈಪ್ರೊಫೈಲ್ ಆರ್ ಟಿ ಐ ಕಾರ್ಯಕರ್ತರ ಹತ್ಯೆ:

ಪ್ರಕರಣದ ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ದೈನಂದಿನ ವಿದ್ಯಮಾನ ಪರಿಶೀಲಿಸಲಾಗುತ್ತಿದೆ. ಮಂಗಳೂರಿನ ಮೊದಲ ಹೈಪ್ರೊಫೈಲ್ ಆರ್ ಟಿ ಐ ಕಾರ್ಯಕರ್ತರ ಹತ್ಯೆ ಇದಾಗಿದ್ದು, ಈ ಪ್ರಕರಣದಲ್ಲಿ ಪ್ರಭಾವಿ ಉದ್ಯಮಿಗಳು ಹಾಗೂ ಉನ್ನತ ಮಟ್ಟದ ರಾಜಕಾರಣಿಗಳ ಕೈವಾಡ ಇರುವ ಬಗ್ಗೆ ಗುಮಾನಿ ವ್ಯಕ್ತವಾಗಿದೆ.

ಜಿಲ್ಲಾಧಿಕಾರಿ ಮಧ್ಯಪ್ರವೇಶ :

ಈ ಮಧ್ಯೆ ಜಿಲ್ಲಾಧಿಕಾರಿ ಇಬ್ರಾಹಿಂ ಮಧ್ಯಪ್ರವೇಶ ಮಾಡಿದ್ದು, ವಿನಾಯಕ ಬಾಳಿಗ ಸಲ್ಲಿಸಿದ ಎಲ್ಲ 92 ಆರ್ ಟಿ ಐ ಅರ್ಜಿಗಳ ಮಾಹಿತಿ ನೀಡುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಆರು ಸರ್ಕಾರಿ ಕಚೇರಿಗಳಿಗೆ 38 ಅರ್ಜಿ ಸಲ್ಲಿಸಿದ್ದು, ಇದರಲ್ಲಿ 13 ಮೂಡ, 11 ಮಂಗಳೂರು ಮಹಾನಗರ ಪಾಲಿಕೆಗೆ ಅರ್ಜಿ ಹಾಕಲಾಗಿದೆ. ಡಿಸಿ ಕಚೇರಿಗೆ ಒಂಭತ್ತು, ಮುಜರಾಯಿ ಕಚೇರಿಗೆ ನಾಲ್ಕು ಹಾಗೂ ಮಂಗಳೂರು ತಹಶೀಲ್ದಾರ್ ಕಚೇರಿಗೆ ಒಂದು ಅರ್ಜಿ ಸಲ್ಲಿಸಿದ್ದರು.

ಇನ್ನೊಂದೆಡೆ ಬಾಳಿಗ ಹತ್ಯೆ ತನಿಖೆ ಸಮರ್ಪಕವಾಗಿ ನಡೆಯಬೇಕು. ನಿಷ್ಪಕ್ಷಪಾತ ತನಿಖೆ ನಡೆಸುತ್ತಿರುವ ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಬಾರದು ಎಂದು ಆಗ್ರಹಿಸಿ ಪ್ರೊ. ನರೇಂದ್ರ ನಾಯಕ್ ನೇತೃತ್ವದಲ್ಲಿ ಸಮಾನ ಮನಸ್ಕ ವಿಚಾರವಾದಿಗಳ ಸಂಘಟನೆಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದವು.

 

Write A Comment