ಕನ್ನಡ ವಾರ್ತೆಗಳು

ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಬಗ್ಗೆ ಸ್ಪಷ್ಟವಾದ ಭಾವನೆ ಕೊಡುವಲ್ಲಿ ನಮ್ಮ ಶಿಕ್ಷಣ ಸೋತಿದೆ :ಆರ್.ಎಸ್.ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ

Pinterest LinkedIn Tumblr

Sangnikethn_photo_1

ಮಂಗಳೂರು,ಎ.29 : ರಾಷ್ಟ್ರ, ರಾಷ್ಟ್ರೀಯತೆಯ ಬಗ್ಗೆ ಹೊಸ ಪೀಳಿಗೆಗೆ ಮಾಹಿತಿ ನೀಡುವುದರಲ್ಲಿ ವಿಫಲತೆಯನ್ನು ಕಾಣುತ್ತಿದ್ದೇವೆ. ನಮ್ಮ ಶಿಕ್ಷಣ ಪದ್ಧತಿಯು ಇದರಲ್ಲಿ ಸೋತಿದೆ. ರಾಷ್ಟ್ರೀಯತೆಯ ಬಗ್ಗೆ ಯುವಪೀಳಿಗೆಗೆ ಮಾಹಿತಿಯನ್ನು ನೀಡುವಲ್ಲಿ ನಿರ್ಲಕ್ಷ ಧೋರಣೆಯ ಹಿಂದೆ ಒಂದು ರೀತಿಯ ಯೋಜನಾ ಬದ್ಧವಾದ ಷಡ್ಯಂತ್ರವೂ ಇದೆ. ಈ ಎಲ್ಲ ಕಾರಣದಿಂದ ಇಂದು ದೇಶದ ರಾಷ್ಟ್ರೀಯತೆ ಕುರಿತು ಪ್ರಶ್ನಿಸುವ ಮನೋಭಾವ ಎದುರಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸಹ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಸಿಟಿಜನ್ ಕೌನ್ಸಿಲ್‌‌ ಮಂಗಳೂರು ಚಾಪ್ಟರ್‌ನ ವತಿಯಿಂದ ಗುರುವಾರ ನಗರದ ಸಂಘನಿಕೇತನದಲ್ಲಿ ಹಮ್ಮಿಕೊಳ್ಳಲಾದ “ರಾಷ್ಟ್ರೀಯತೆ ಮತ್ತು ಅದರ ಸತ್ವ’ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರೀಯತೆ ಕುರಿತ ವಿಶೇಷ ಉಪನ್ಯಾಸ ನೀಡಿದರು.ಭಾರತದಲ್ಲಿ ರಾಷ್ಟ್ರೀಯತೆ ಎಂಬುದು ಒಂದು ಅನುಭೂತಿಯಾಗಿದೆಯೇ ಹೊರತು ಅದು ರಾಜಕೀಯ ಚಿಂತನಾ ಕ್ರಮ ಅಲ್ಲ. ಅದೊಂದು ಅನುಭೂತಿ. ಸಂಸ್ಕೃತಿ, ಜನತೆ ಮತ್ತು ಭೂಮಿ ಈ ಮೂರು ಸೇರಿದಾಗ ರಾಷ್ಟ್ರ ಎಂಬ ಅನುಭೂತಿ ಸೃಷ್ಟಿಯಾಗುತ್ತದೆ. ರಾಷ್ಟ್ರದ ಕುರಿತಂತೆ ಮತ್ತು ರಾಷ್ಟ್ರೀಯತೆ ಕುರಿತಂತೆ ಸ್ಪಷ್ಟವಾದ ಭಾವನೆ ಕೊಡುವಲ್ಲಿ ನಮ್ಮ ಶಿಕ್ಷಣ ಸೋತಿದೆ. ಆದ್ದರಿಂದ ರಾಷ್ಟ್ರೀಯತೆ ವಿವಾದದ ವಿಷಯವಾಗುತ್ತಿದೆ ಎಂದು ಹೇಳಿದರು.

Sangnikethn_photo_2 Sangnikethn_photo_3 Sangnikethn_photo_4 Sangnikethn_photo_5

ಭಾರತದಲ್ಲಿ ರಾಷ್ಟ್ರ ಎಂಬ ಬಗ್ಗೆ ಪರಿಕಲ್ಪನೆ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಇದನ್ನು ಯುಎಸ್‌ಎಸ್‌ಆರ್‌ ಅಥವಾ ಯುಎಸ್‌ಎಗೆ ತುಲನೆ ಮಾಡಲು ಸಾಧ್ಯವಿಲ್ಲ. ಅಧ್ಯಾತ್ಮ ಭಾರತದ ರಾಷ್ಟ್ರೀಯತೆ ಆತ್ಮ. ಈ ದೇಶದ ರಾಷ್ಟ್ರೀಯತೆಯನ್ನು ಅಭಿವ್ಯಕ್ತಿಗೊಳಿಸುವುದೇ ಸಂಸ್ಕೃತಿ. ಸಂಸ್ಕೃತಿಯನ್ನು ಬಿಟ್ಟು ಈ ದೇಶದ ರಾಷ್ಟ್ರೀಯತೆ ಇಲ್ಲ. ಇದನ್ನು ವಿದೇಶಿ ದಾರ್ಶನಿಕರು ಸೇರಿದಂತೆ ಬಹಳಷ್ಟು ಮಂದಿ ಹೇಳಿದ್ದಾರೆ ಎಂದ ಅವರು ಸಂವಿಧಾನ ಆಧಾರದಲ್ಲಿ ಈ ರಾಷ್ಟ್ರ ನಿರ್ಮಾಣವಾಗಿಲ್ಲ. ರಾಷ್ಟ್ರ ಇದೆ ಎನ್ನುವುದರ ಮೇಲೆ ಸಂವಿಧಾನ ನಿರ್ಮಾಣವಾಗಿದೆ ಎಂದು ಹೊಸಬಾಳೆ ತಿಳಿಸಿದರು.

ಭಾರತ ಒಂದು ರಾಷ್ಟ್ರವೇ ಆಗಿರಲಿಲ್ಲ ಎಂಬ ವಾದವನ್ನು ಮಂಡಿಸಲಾಗುತ್ತಿದೆ. ಈ ಮಂದಿ ನಮ್ಮ ದೇಶದ ಇತಿ ಹಾಸವನ್ನು ಅರಿತುಕೊಳ್ಳಬೇಕಾಗಿದೆ ಎಂದ ಅವರು ರಾಷ್ಟ್ರ ಎಂಬುದು ಇಲ್ಲವಾದರೆ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಹೇಗೆ ಹುಟ್ಟಿಕೊಂಡಿತು. ಬಂಗಾಲಿ ಭಾಷೆಯ ಬಂಕಿಂಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ ಗೀತೆಯನ್ನು ಇಡೀ ದೇಶ ಹೇಗೆ ಒಪ್ಪಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಇದನ್ನು ಧ್ಯೇಯಗೀತೆಯಾಗಿ ಬಳಸಿಕೊಂಡಿತು ಎಂದು ಪ್ರಶ್ನಿಸಿದರು. ಈ ರಾಷ್ಟ್ರಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಭಗತ್‌ಸಿಂಗ್‌, ರಾಜಗುರು ಮತ್ತು ಸುಖದೇವ್‌ ಮುಂತಾದವರ ತ್ಯಾಗದ ಬಗ್ಗೆ ಅವರು ಏನು ಹೇಳುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಮಾಧವ ಜೋಗಿತ್ತಾಯ ವಹಿಸಿದ್ದರು. ವೇದಿಕೆಯಲ್ಲಿ ಸಿಟಿಜನ್‌ ಕೌನ್ಸಿಲ್‌ ಮಂಗಳೂರು ಚಾಪ್ಟರ್‌ ಅಧ್ಯಕ್ಷ ಸುನೀಲ್‌ ಆಚಾರ್‌ ಉಪಸ್ಥಿತರಿದ್ದರು.

Write A Comment