ಕನ್ನಡ ವಾರ್ತೆಗಳು

ಎತ್ತಿನ ಹೊಳೆ ಯೋಜನೆಗೆ ತೀವ್ರ ವಿರೋಧ : ಮೇ 19ರಂದು ದ.ಕ. ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಬಂದ್‌

Pinterest LinkedIn Tumblr

yettina_hole_project

ಮಂಗಳೂರು,ಎ.28: ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ವತಿಯಿಂದ ನಗರ ಆರ್ಯ ಸಮಾಜದಲ್ಲಿ ಬುಧವಾರ ನಡೆದ ಸಭೆಯಲ್ಲಿ ಎತ್ತಿನಹೊಳೆ ಯೋಜನೆ ನಿಲ್ಲಿಸಲು ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮೇ 19ರಂದು ದ.ಕ. ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಬಂದ್‌ ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು.

ನೇತ್ರಾವತಿ ನದಿ ತಿರುವಿಗೆ ಬದಲಾಗಿ ಎತ್ತಿನ ಹೊಳೆ ಯೋಜನೆಯನ್ನು ಸರಕಾರ ಜಾರಿ ಮಾಡಲು ಹೊರಟಿದೆ. ಇದರಿಂದ ಜಿಲ್ಲೆಯಲ್ಲಿ ಇನ್ನಷ್ಟು ನೀರಿನ ಸಮಸ್ಯೆ ಉದ್ಭವವಾಗುತ್ತಿದ್ದು, ಎತ್ತಿನಹೊಳೆ ಯೋಜನೆಯನ್ನು ಸ್ಥಗಿತಗೊಳಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ಸರಕಾರ ನಿರ್ಲಕ್ಷಿಸುತ್ತಿದೆ. ಈ ನಿಟ್ಟಿನಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸುವ ನಿಟ್ಟಿನಲ್ಲಿ ಮೇ 19ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸ್ವಯಂಪ್ರೇರಿತ ಬಂದ್ ನಡೆಸಲು ಸಾರ್ವಜನಿಕರ ಸಹಕಾರ ಕೋರಲು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಆರ್ಯ ಸಮಾಜದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತು.

Arya_samaja_Press_1

ಸಭೆಯಲ್ಲಿ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ಗುರುಪುರ ಮಠದ ವಜ್ರದೇಹಿ ಸ್ವಾಮೀಜಿ, ಮಂಗಳೂರು ಧರ್ಮಪ್ರಾಂತದ ಪಿಆರ್‌ಒ ಫಾ| ವಿಲಿಯಮ್‌ ಮಿನೇಜಸ್‌, ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಮಹಮ್ಮದ್‌ ಮಸೂದ್‌ ಹಾಗೂ ನೆತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ ವಿಜಯಕುಮಾರ್‌ ಶೆಟ್ಟಿ ತಮ್ಮ ಅಭಿಪ್ರಾಯ ಮಂಡಿಸಿದರು.

ಯೋಜನೆಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿ ನೇತ್ರಾವತಿ ಪರ ಹೋರಾಟಗಾರರು ನಡೆಸುತ್ತಿರುವ ಹೋರಾಟವನ್ನು ಸರಕಾರ ನಿರ್ಲಕ್ಷಿಸುತ್ತಿದೆ. ನೇತ್ರಾವತಿ ನದಿಯ ಸಂರಕ್ಷಣೆಗಾಗಿ ಹೋರಾಡುತ್ತಿರುವ ವಿವಿಧ ಸಂಘಟನೆಗಳ ಪ್ರತಿ ನಿಧಿಗಳನ್ನೊಳಗೊಂಡ ಸಮಿತಿಯ ಮೂಲಕ ಸರ ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮಾತುಕತೆಗೂ ಕರೆದಿಲ್ಲ. ಈ ಎಲ್ಲಾ ಕಾರಣಗಳಿಂದ ಜಿಲ್ಲಾ ಬಂದ್ ರೀತಿಯ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದ ನೆತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ ವಿಜಯಕುಮಾರ್‌ ಶೆಟ್ಟಿ ಅವರು, ಜಿಲ್ಲೆಯಲ್ಲಿರುವ ಎಲ್ಲಾ ಪ್ರತಿನಿಧಿಗಳಿಂದ ಎತ್ತಿನಹೊಳೆ ವಿರೋಧಿಸುವ ನಿಟ್ಟಿನಲ್ಲಿ ಬೆಂಬಲ ದೊರೆಯಲಿಲ್ಲ. ನಮ್ಮ ಕೂಗು ಸರಕಾರಕ್ಕೆ ಇನ್ನೂ ತಲುಪಿಲ್ಲ.ಆದರೆ ಜಿಲ್ಲೆಯ ಜನರಿಂದ ಜಾತಿ, ಮತ, ಭೇದವಿಲ್ಲದೆ ಬೆಂಬಲ ದೊರೆಯುತ್ತಿದೆ ಎಂದು ತಿಳಿಸಿದರು.

ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಅವರು ಮಾತನಾಡಿ, ಎತ್ತಿನ ಹೊಳೆ ಯೋಜನೆಯ ಮೂಲಕ ಕರಾವಳಿ ತುಳುನಾಡನ್ನೇ ನಾಶ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ನೀರಿನ ಹಕ್ಕಿಗಾಗಿ ತೀವ್ರ ಹೋರಾಟ ನಡೆಯಬೇಕಾಗಿದೆ ಎಂದು ಕರೆ ಕೊಟ್ಟರು.

ಎತ್ತಿನ ಹೊಳೆಯ ಕಾಮಗಾರಿ ನಡೆಯುತ್ತಲೇ ಇದೆ. ಇದನ್ನು ನಿಲ್ಲಿಸಲು ಜಿಲ್ಲೆಯಾದ್ಯಂತ ನಿರಂತರ ಹೋರಾಟ ನಡೆಯಬೇಕಾಗಿದೆ ಎಂದು ಗುರುಪುರ ಮಠದ ವಜ್ರದೇಹಿ ಸ್ವಾಮೀಜಿ ತಿಳಿಸಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್ ಮಾತನಾಡಿ, ನೇತ್ರಾವತಿಯಲ್ಲಿ ನೀರಿಲ್ಲದಿದ್ದರೆ ಇಲ್ಲಿನ ಜನ ಬದುಕಲು ಸಾಧ್ಯವಿಲ್ಲ. ಜಿಲ್ಲೆಯ ಒಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಮಂಗಳೂರು ಧರ್ಮಪ್ರಾಂತದ ಪಿಆರ್‌ಒ ಫಾ| ವಿಲಿಯಮ್‌ ಮಿನೇಜಸ್ ಅವರು ಮಾತನಾಡಿ, ನೇತ್ರಾವತಿ ನದಿ ನೀರಿನ ರಕ್ಷಣೆಗೆ ಕ್ರೈಸ್ತ ಸಂಘಟನೆಗಳ ಬೆಂಬಲವಿದೆ. ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ನಡೆಸಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ರಾಜ ಶೇಖರಾನಂದ ಸ್ವಾಮೀಜಿ, ಕ್ರೈಸ್ತ ಧರ್ಮಪ್ರಾಂತದ ಪ್ರತಿನಿಧಿಗಳಾದ ಫಾ.ಜೆ.ಬಿ.ಕ್ರಾಸ್ತಾ, ಹರಿಕೃಷ್ಣ ಬಂಟ್ವಾಳ, ಮೇಘನಾಥ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಶಶಿರಾಜ್ ಶೆಟ್ಟಿ ಕೊಳಂಬೆ, ದಿನಕರ ಶೆಟ್ಟಿ, ಹನಿಫ್ ಖಾನ್ ಕೊಡಾಜೆ ,ಅಥಾವುಲ್ಲಾ ಜೋಕಟ್ಟೆ , ರಾಮಚಂದ್ರ ಬೈಕಂಪಾಡಿ, ಎಂ.ಜಿ.ಹೆಗ್ಡೆ, ಯೋಗೀಶ್ ಶೆಟ್ಟಿ ಜೆಪ್ಪು, ಸಂಜೀವ ಸೂಟರ್‌ಪೇಟೆ, ನವಾಝ್, ದಿನಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Write A Comment