ಕನ್ನಡ ವಾರ್ತೆಗಳು

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವೇಳೆ ಪೊಲೀಸರ ದಾಳಿ: ಇಬ್ಬರ ವಶ: ಐದು ಜಾನುವಾರು ವಶ

Pinterest LinkedIn Tumblr

ಉಡುಪಿ: ಮಾಂಸ ಮಾಡುವ ಸಲುವಾಗಿ ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ನಡೆಸುತ್ತಿದ್ದಾಗ ಖಚಿತ ವರ್ತಮಾನದ ಮೇರೆಗೆ ಕೋಟ ಪೊಲೀಸರು ವಾಹನವನ್ನು ಅಡ್ಡಗಟ್ಟಿ ಇಬ್ಬರನ್ನು ಬಂಧಿಸಿದ್ದಲ್ಲದೇ ಐದು ಜಾನುವಾರುಗಳನ್ನು ರಕ್ಷಿಸಿದ ಘಟನೆ ಕೋಟ ಸಮೀಪದ ಶಿರಿಯಾರ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಈ ಸಂದರ್ಭ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಶಿವಮೊಗ್ಗ ಭದ್ರಾವತಿ ನಿವಾಸಿಗಳಾದ ಫಯಾಝ್ (28) ಮತ್ತು ಹರೀಶ್(25) ಬಂಧಿತ ಆರೋಪಿಗಳು. ಜಾನುವಾರ ಸಾಗಾಟಕ್ಕೆ ಮದ್ಯವರ್ತಿಯಾದ ಉಡುಪಿಯ ಬಿಲ್ಲಾಡಿ ನಿವಾಸಿಯಾದ ಸಂತೋಷ್ ಹಾಗೂ ಜಾನುವಾರುಗಳನ್ನು ಮಾರಾಟ ಮಾಡಿದ ಅಪರಿಚಿತ ವ್ಯಕ್ತಿ ಪರಾರಿಯಾಗಿದ್ದಾರೆ.

Kota_Illeagle Cow_Transport (2) Kota_Illeagle Cow_Transport (5) Kota_Illeagle Cow_Transport (4) Kota_Illeagle Cow_Transport (3) Kota_Illeagle Cow_Transport (6) Kota_Illeagle Cow_Transport (1)

ಘಟನೆ ವಿವರ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟ ಮೂರುಕೈ ಕಡೆಯಿಂದ ಶಿರಿಯಾರದತ್ತ ಜಾನುವಾರುಗಳನ್ನು ವಾಹನವೊಂದರಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಆ ವಾಹನವನ್ನು ಬೆನ್ನಟ್ಟಿ ಹೋಗುತ್ತಿರುವಾಗ ಶಿರಿಯಾರ ಗ್ರಾಮದ ಕಳ್ಳಾಡಿ ಎಂಬಲ್ಲಿ ಜಾನುವಾರುಗಳಿದ್ದ ವಾಹನವನ್ನು ಊರಿನ ಜನರು ಸುತ್ತುವರಿದು ಅಡ್ಡಗಟ್ಟಿ ನಿಲ್ಲಿಸಿದ್ದರು. ಪೊಲೀಸರು ವಾಹನವನ್ನು ತಪಾಸಣೆ ಮಾಡುವ ವೇಳೆ ಐದು ಜಾನುವಾರುಗಳನ್ನು ಆರೋಪಿ ಫಯಾಝ್ ಮತ್ತು ಹರೀಶ್ ಸಾಗಿಸುತ್ತಿರುವುದು ತಿಳಿದುಬಂದಿದೆ. ಕೂಡಲೇ ಪೊಲೀಸರು ಇಬ್ಬರನ್ನು ವಶಪಡಿಸಿಕೊಂಡಿದ್ದು ಅದಾಗಲೇ ಸಂತೋಷ್ ಹಾಗೂ ಇನ್ನೋರ್ವ ಅಪರಿಚಿತ ವ್ಯಕ್ತಿ ತಪ್ಪಿಸಿಕೊಂಡಿದ್ದರು. ಈ ಅಪರಿಚಿತ ವ್ಯಕ್ತಿ ಜಾನುವಾರು ಮಾರಾಟ ಮಾಡುವುದನ್ನು ತಿಳಿದ ಮಧ್ಯವರ್ತಿ ಸಂತೋಷ್ ಬಂಧಿತ ಆರೋಪಿಗಳಿಬ್ಬರ ಮೂಲಕ ಈ ಜಾನುವಾರು ಖರೀಧಿಸಿ ಮಾಂಸಕ್ಕಾಗಿ ಮಂಗಳೂರಿನತ್ತ ಸಾಗಿಸುವ ತಯಾರಿ ನಡೆಸಿರುವ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದೆ.

ಅಕ್ರಮ ಜಾನುವಾರು ಸಾಗಾಟಕ್ಕೆ ಬಳಸಿದ ಗೂಡ್ಸ್ ವಾಹನ, 2 ದನಗಳು, 2 ಹೆಣ್ಣುಕರು ಹಾಗೂ ಒಂದು ಗಂದು ಕರು ಸೇರಿದಂತೆ 20,000 ಮೌಲ್ಯದ ಐದು ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಆರೋಪಿಗಳ ಪತ್ತೆಗೂ ಪೊಲೀಸರು ಬಲೆಬೀಸಿದ್ದಾರೆ.

ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕ ಕಬ್ಬಾಳರಾಜ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Write A Comment