ಕನ್ನಡ ವಾರ್ತೆಗಳು

ಹುಣ್ಸೆಕಟ್ಟೆ: ಉಡುಪಿ ಕೃಷ್ಣಾಪುರ ಮಠ ಜಮೀನು ಅತಿಕ್ರಮಣ; ಸಮಸ್ಯೆಯಲ್ಲಿ ಸ್ಥಳೀಯ ಜನ|ಶ್ರೀ ವಿದ್ಯಾಸಾಗರ ತೀರ್ಥ ಶ್ರೀಗಳ ಭೇಟಿ

Pinterest LinkedIn Tumblr

ಕುಂದಾಪುರ: ತಾಲೂಕಿನ ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣ್ಸೆಕಟ್ಟೆ ಸೇತುವೆಯ ಸಮೀಪ ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎನ್ನಲಾದ ಸರ್ವೆ ನಂಬರ್ 10/12 ರಲ್ಲಿ 2.27 ಎಕ್ರೆ ಜಮೀನನ್ನು ತಹಶಿಲ್ದಾರ್ ಆದೇಶದ ಮೇರೆಗೆ ತೆರವುಗೊಳಿಸುವ ಕಾರ್ಯ ಬುಧವಾರ ಪೊಲೀಸ್ ಭದ್ರತೆಯೊಂದಿಗೆ ನಡೆದರೂ ಕೂಡ ಅದನ್ನು ಮಧ್ಯಾಹ್ನದ ಸುಮಾರಿಗೆ ಅರ್ಧಕ್ಕೆ ಮೊಟಕುಗೊಳಿಸಿ ಪೊಲೀಸರಿಗೆ ದೂರು ನೀಡಿದ ಅತಿಕ್ರಮಣ ಆರೋಪ ಹೊತ್ತ ಮನೆಯವರು ಮಾಡಿದ್ದಾರೆ ಎನ್ನಲಾಗಿದೆ.

Kundapura_Sri Vidyasagara Shri_Visit_Hunsekatte Place (3) Kundapura_Sri Vidyasagara Shri_Visit_Hunsekatte Place (1) Kundapura_Sri Vidyasagara Shri_Visit_Hunsekatte Place (4) Kundapura_Sri Vidyasagara Shri_Visit_Hunsekatte Place (2)

ಹಂಗಳೂರು ಗ್ರಾಮದ ನೇರಂಬಳ್ಳಿ ಪರಿಸರದ ಕುಂಬಾರ ಕಟ್ಟೆ ಹಾಗೂ ಹುಣ್ಸೆಕಟ್ಟೆ ಸೇತುವೆ ಹತ್ತಿರ ವಾಸ್ತವ್ಯ ಇರುವ ವ್ಯಕ್ತಿಯೋರ್ವರು ಮನೆ ಸಮೀಪದ ಜಾಗವನ್ನು ಹಲವು ವರ್ಷಗಳಿಂದ ಅತಿಕ್ರಮಣ ಮಾಡಿಕೊಂಡಿದ್ದು ಒತ್ತುವರಿದಾರರು ಹೊಳೆಸಾಲಿಗೆ ಮಣ್ಣು ತುಂಬಿದ್ದರಿಂದ ನೀರು ಕೃಷಿ ಭೂಮಿಗೆ ಹರಿಯುವ ಆತಂಕ ಒಂದೆಡೆಯಾದರೇ ಈ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಕೃಷಿ ಬೆಳೆ, ಸಾರ್ವಜನಿಕರಿಗೆ ಹಾಗೂ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನೀರು ನುಗ್ಗುವ ಆಪಾಯ ಇರುವುದರಿಂದ ಅನದಿಕೃತವಾಗಿ ಮಣ್ಣು ಹಾಕಿರುವುದನ್ನು ತೆರವುಗೊಳಿಸುವಂತೆ ಕೃಷಿಕರು ಹಾಗೂ ಗ್ರಾಮಸ್ಥರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರು. ಅವರ ಮನವಿ ಮೇರೆಗೆ ಬುಧವಾರದಂದು ತಹಶೀಲ್ದಾರರ ನಿರ್ದೇಶನದ ಮೆರೆಗೆ ಕಂದಾಯ ಇಲಾಖೆ ಹಾಗೂ ಹಂಗಳೂರು ಗ್ರಾಮ ಪಂಚಾಯತ್ ಜಂಟಿಯಾಗಿ ಸರ್ವೇ ನಡೆಸಿ ಈ ತೆರವು ಕಾರ್ಯ ಮಾಡಲು ಮುಂದಾಗಿದ್ದರೂ ಕೂಡ ಊಟದ ವೇಳೆಯಲ್ಲಿ ಅತಿಕ್ರಮಣ ಮಾಡಿಕೊಂಡ ಮನೆಯವರು ಪೊಲೀಸರಿಗೆ ಸುಳ್ಳು ಹೇಳಿಕೆ ನೀಡಿ ಅವರ ಮೂಲಕ ಕೆಲಸ ನಿಲ್ಲಿಸಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಸಿಟ್ಟುಗೊಂಡ ಸ್ಥಳಿಯ ನಾಗರೀಕರು ತಹಶಿಲ್ದಾರ್ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದು ಅತೀಕ್ರಮಣಗೊಂಡ ಜಾಗವು ಕೃಷ್ಣಾಪುರ ಮಠಕ್ಕೆ ಸೇರಿದ ಕಾರಣ ಅಲ್ಲಿನ ಶ್ರೀಗಳಾದ ಶ್ರೀ ವಿದ್ಯಾಸಾಗರ ತೀರ್ಥಸ್ವಾಮೀಜಿಯವರಿಗೆ ವಿಚಾರ ತಿಳಿಸಿ ನ್ಯಾಯಕ್ಕಾಗಿ ಕೋರಿದ್ದರು.

ಅದರಂತೆಯೇ ಶನಿವಾರ ಮಧ್ಯಾಹ್ನದ ಸುಮಾರಿಗೆ ಹುಣ್ಸೆಕಟ್ಟೆಗೆ ಆಗಮಿಸಿದ ಶ್ರೀಗಳು ಸ್ಥಳ ಪರಿಶೀಲನೆಯನ್ನು ನಡೆಸಿದರು. ಈ ಸಂದರ್ಭ ಸ್ಥಳೀಯ ನಾಗರೀಕರು, ನಿವಾಸಿಗಳು ತಮಗಾಗುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಕಣ್ಣಿರಿಟ್ಟು ಹೇಳಿಕೊಂಡರು. ಅಲ್ಲದೇ ಸಮೀಪದ ಮನೆಯ ವ್ಯಕ್ತಿ ಮಾಡಿಕೊಂದ ಜಾಗದ ಅತಿಕ್ರಮಣದಿಂದಾಗಿಯೇ ಎಲ್ಲಾ ಸಮಸ್ಯೆಗಳು ಸ್ರಷ್ಟಿಯಾಗಿದೆ ಎಂದು ಆರೋಪಿಸಿದರು. ಒತ್ತುವರಿದಾರರ ಬಳಿಯೂ ಮಾಹಿತಿ ಪಡೆದ ಸ್ವಾಮಿಗಳು ‘ಬೇರೆಯವರಿಗೆ ತೊಂದರೆ ನೀಡಿದರೇ ಯಾರಿಗೂ ಒಳಿತಲ್ಲ, ಇಷ್ಟು ಜನರಿಗೆ ಸಮಸ್ಯೆಯಾಗುತ್ತಿರುವಾಗ ಅದನ್ನು ನಿವಾರಿಸಬೇಕು’ ಎಂದು ತಿಳಿಹೇಳಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶ್ರೀಗಳು, ಇದು ಮಠದ ಜಾಗವಾಗಿದ್ದು ಇದಕ್ಕೆ ಮಣ್ಣು ತುಂಬಿಸಿ ಆಕ್ರಮಣ ಮಾಡಿಕೊಂಡ ಸಲುವಾಗಿ ಸಮಸ್ಯೆಗಳಾಗುತ್ತಿದೆ ಎಂದು ಸಾರ್ವಜನಿಕರು ನೀಡಿದ ದೂರಿನ ಮೇಲೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಇಲ್ಲಿನ ಜನರು ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ, ಮಠಕ್ಕೆ ಸಂಬಂದಪಡುವ ಜಾಗ ಅತಿಕ್ರಮಣ ಮಾಡಿಲ್ಲ ಎಂದು ಒತ್ತುವರಿದಾರರು ಸ್ಪಷ್ಟನೆ ನೀಡಿದ್ದು ಎರಡು ಕಡೆಯವರ ವಾದವನ್ನು ಆಲಿಸಿದ್ದೇವೆ. ಕಂದಾಯ ಇಲಾಖೆಯವರ ನೇತೃತ್ವದಲ್ಲಿ ಒಂದೆರಡು ದಿನಗಳಲ್ಲಿ ಮರು ಸರ್ವೇ ನಡೆಸುವುದಾಗಿ ಪೊಲೀಸರು ತಿಳಿಸಿದ್ದು ಬಳಿಕ ಎಲ್ಲವೂ ಸ್ಪಷ್ಟವಾಗುತ್ತದೆ. ಒತ್ತುವರಿ ಮಾಡಿಕೊಂಡವರು ಹೇಳುವಂತೆ ಇದು ಗೇಣಿ ಕೊಟ್ಟ ಜಾಗವಲ್ಲ, ಬದಲಾಗಿ ನೀರು ಹೋಗುವ ಜಾಗವಾಗಿತ್ತು. ಮೇಲ್ನೋಟಕ್ಕೆ ಜಾಗ ಒತ್ತುವರಿಯಾಗಿದ್ದು ಕಂಡುಬಂದಿದೆಯಾದರೂ ಸರ್ವೇ ಕಾರ್ಯದ ಬಳಿಕ ಎಲ್ಲವೂ ತಿಳಿಯಲಿದೆ ಎಂದರು.

ಹಂಗಳೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಸ್ಟೀವನ್ ಡಿಕೋಸ್ಟಾ ಮಾತನಾಡಿ, ಬುಧವಾರದ ಸರ್ವೇ ಕಾರ್ಯವನ್ನು ಒತ್ತುವರಿದಾರರು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಇಂದು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜಾಗದ ವೀಕ್ಷಣೆ ನಡೆಸಿದ್ದೇವೆ. ಮಂಗಳವಾರ ಪುನಃ ಸರ್ವೇ ಕಾರ್ಯ ಮಾಡಿ ಮಠದ ಜಾಗದ ಒತ್ತುವರಿಯನ್ನು ತೆರವುಗೊಳಿಸಿ, ಬೇಲಿ ಹಾಕುವ ನಿರ್ಧಾರ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹಂಗಳೂರು ಗ್ರಾಮಪಂಚಾಯತ್ ಅಧ್ಯಕ್ಷೆ ಜಲಜಾ ಚಂದನ್, ಸದಸ್ಯರಾದ ನಾಗರಾಜ ಆಚಾರ್ಯ, ಶೇಖರ್ ಪೂಜಾರಿ, ಜಯಲಕ್ಷ್ಮೀ, ಸುಗುಣಾ, ಗಿರಿಜಾ, ಹಂಗಳೂರು ಮಠದ ಪ್ರಾಣೇಶ್, ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Write A Comment