ಕುಂದಾಪುರ: ಎಲ್ಲೆಡೆ ಮಳೆಗಾಗಿ ಜನರು ಕಾದಿದ್ದಾರೆ. ಒಂದೆಡೆ ಬಿರು ಬಿಸಿಲು. ಇನ್ನೊಂದೆಡೆ ಕುಡಿಯುವ ನೀರಿಗೂ ತತ್ವಾರ. ಎಲ್ಲರ ಮೇಲೆಯೂ ಮಳೆರಾಯ ಮುನಿಸಿಕೊಂಡಿದ್ದಾನೆ. ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿ ಮಳೆಗಾಗಿ ಜನರು ದೇವರ ಮೊರೆ ಹೋಗಿದ್ದಾರೆ.
ಕುಂದಾಪುರ ತಾಲೂಕಿನಿಂದ ಸುಮಾರು ಮೂವತ್ತೈದು ಕಿಲೋಮೀಟರ್ ದೂರವಿರುವ ದೇವಸ್ಥಾನವೇ ಕಮಲಶಿಲೆ. ಕುಬ್ಜಾ ನದಿ ತೀರದಲ್ಲಿರುವ ಈ ದೇವಸ್ಥಾನದಲ್ಲಿ ಬ್ರಾಹ್ಮೀ ದುರ್ಗಾಪರಮೇಶ್ವರಿ ನೆಲೆನಿಂತು ಭಕ್ತರನ್ನು ಹರಸುತ್ತಿದ್ದಾಳೆ. ತಮ್ಮ ಕಷ್ಟಗಳು ಪರಿಹಾರಕ್ಕೆ, ಇಷ್ಟಾರ್ಥ ಕೋರಿಕೆಗಳ ಬಗ್ಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಿಗೆ ಹರಕೆ ಕೋರಿಕೊಂಡರೇ ಅದು ಫಲಿಸುತ್ತದೆ ಎನ್ನುವ ಅಪಾರ ನಂಬಿಕೆ ಇಲ್ಲಿನ ಭಕ್ತರದ್ದು. ಅಂತೆಯೇ ಮಳೆಯ ವಿಚಾರದಲ್ಲಿಯೂ ದೇವಿ ಭಕ್ತರ ಪರವಾಗಿ ನಿಲ್ಲುತ್ತಾಳೆ. ಅತೀವೃಷ್ಟಿ ಸಂದರ್ಭದಲ್ಲಿಯೂ ಇಲ್ಲಿ ದೇವಿಗೆ ಪೂಜೆ ನೀಡಿ ಪ್ರಾರ್ಥಿಸಿದರೇ ಅದಕ್ಕೆ ಪರಿಹಾರ ಸಿಕ್ಕ ಉದಹಾರಣೆ ಇದೆ. ಅಲ್ಲದೇ ಅನಾವೃಷ್ಟಿ ಮತ್ತು ಭೀಕರ ಬರ ಸಂದರ್ಭದಲ್ಲಿ ಇಲ್ಲಿನ ದೇವಿಗೆ ವಿಶೇಷ ಪೂಜೆ ನೀಡಿ, ಸಿಯಾಳದ ಅಭಿಶೇಕ ಮಾಡಿದರೇ ಮಳೆ ಬರುತ್ತದೆ ಎಂಬ ಬಲವಾದ ನಂಬಿಕೆಯೂ ಇದೆ.
ಕುಂದಾಪುರ ತಾಲೂಕು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ನೀರಿಗೆ ಸಮಸ್ಯೆ ಬಂದಿದ್ದು ಬರ ಪರಿಹಾರಕ್ಕೆ, ಮಳೆರಾಯನ ಕ್ರಪೆಗಾಗಿ ಕಮಲಶಿಲೆ ಹಾಗೂ ಆಸುಪಾಸಿನ ಜನರು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಿಯ ಮೊರೆಹೋಗಿದ್ದಾರೆ. ಶುಕ್ರವಾರ ಕಮಲಶಿಲೆ ದೇವಸ್ಥಾನದಲ್ಲಿ ಶ್ರೀ ದೇವಿಗೆ ಸಿಯಾಳದ ಅಭಿಷೇಕ ಮಾಡುವ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಊರಿನ ಹಾಗೂ ಪರವೂರಿನ ಜನರು ಸೇರಿದಂತೆ ದೇವಸ್ಥಾನದ ಭಕ್ತರು ನೀಡಿದ ಐನೂರಕ್ಕೂ ಅಧಿಕ ಸಿಯಾಳವನ್ನು ದೇವಿಗೆ ಸಮರ್ಪಿಸಲಾಯಿತು. ನೂರಾರು ಭಕ್ತರು ಈ ಸಂದರ್ಭ ಶ್ರೀ ದೇವಿಯ ದರ್ಶನ ಪಡೆದು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಳೆ ಜಾಸ್ಥಿಯಾದರೂ, ಮಳೆ ಕಡಿಮೆಯಾದರೂ ಶ್ರೀ ದೇವಿಗೆ ಪೂಜೆ ಸಲ್ಲಿಸಿ, ಸಿಯಾಳ ಅಬಿಷೇಕ ನಡೆಸಿ ದೇವಿಯನ್ನು ಪ್ರಾರ್ಥಿಸಿ ಅದಕ್ಕೊಂದು ಪರಿಹಾರ ಕಂಡುಕೊಳ್ಳುತ್ತೇವೆ. ವಿಶೇಷ ಶಕ್ತಿ ಹೊಂದಿರುವ ದೇವಿಯು ಭಕ್ತರಾದ ನಮ್ಮನ್ನು ಹರಸುತ್ತಾಳೆ, ಭಕ್ತರ ಸಂಕಷ್ಟವನ್ನು ನಿವಾರಿಸುತ್ತಾಳೆ ಎನ್ನುವ ಅಚಲವಾದ ನಂಬಿಕೆಯ ಮೂಲಕ ಈ ಕಾರ್ಯ ನೆರವೇರಿಸುತ್ತೇವೆ. ಸಿಯಾಳಾಭಿಷೇಕದ ನಂತರ ಒಂದೇ ದಿನದಲ್ಲಿ ಮಳೆಬಂದಿರುವ ಹಲವು ಉದಾಹರಣೆಗಳು ಇದೆ ಎನ್ನುತ್ತಾರೆ ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಎಸ್. ಸಚ್ಚಿದಾನಂದ ಚಾತ್ರ.
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಾಲಯದ ಇನ್ನೊಂದು ಪವಾಡವೆಂದರೇ ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಸ್ಥಳದಲ್ಲಿ ಈ ದೇವಸ್ಥಾನವಿದ್ದು, ಪ್ರತಿವರ್ಷದ ಮಳೆಗೆ ಇಲ್ಲಿನ ಉದ್ಭವಲಿಂಗಕ್ಕೆ ಪ್ರಾಕೃತಿಕ ಗಂಗಾಭಿಷೇಕವಾಗುತ್ತದೆ. ದೇವಾಲಯದ ಪ್ರಾಂಗಣಕ್ಕೆ ನೀರು ಹರಿದು ಬರುತ್ತಿದ್ದಂತೆ ದೇವಾಲಯಕ್ಕೆ ಭಕ್ತರು ಆಗಮಿಸಿ ಪವಿತ್ರ ನೀರಿನಲ್ಲಿ ಸ್ನಾನ ಮಾಡುವುದು ಪ್ರತಿವರ್ಷದ ರೂಢಿ ಎನ್ನುತ್ತಾರೆ ಇಲ್ಲಿನ ಅನುವಂಶಿಕ ಧರ್ಮದರ್ಶಿ ಶ್ರೀನಿವಾಸ ಚಾತ್ರ.
ಚಿತ್ರ,ವರದಿ- ಯೋಗೀಶ್ ಕುಂಭಾಸಿ