ಅಂತರಾಷ್ಟ್ರೀಯ

ದೇಹ ತಂಪಾಗಿಸುವ ಪುದೀನಾ ನೀರು

Pinterest LinkedIn Tumblr

pudina-juice-715x350

ಬಿಸಿಲಿನ ಝಳ, ಧಗೆ ದಿನೇ ದಿನೇ ಹೆಚ್ಚಾಗುತ್ತಿರುವ ಅನುಭವ ಎಲ್ಲರಿಗೂ ಆಗುತ್ತಿದೆ. ನಿಲ್ಲದ ಬಾಯಾರಿಕೆ, ಆಯಾಸ, ಬೆವರು ಹರಿಯುವುದು… ಏನೆಲ್ಲಾ ಕಿರಿಕಿರಿಗಳು ಅಲ್ಲವೆ!

ಇದರಿಂದ ರಿಲೀಫ್ ಪ‌ಡೆಯಲು ಮಜ್ಜಿಗೆ, ತಂಪು ಪಾನೀಯ, ಸೌತೆಕಾಯಿ, ಕಲ್ಲಂಗಡಿ ಹಣ್ಣು ಸೇವನೆ ಸೇರಿದಂತೆ ಹಲವು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದೇವೆ. ಅವುಗಳ ಜತೆಗೆ, ಪುದೀನಾ ನೀರು ಸೇವಿಸಿದರೆ, ಮತ್ತಷ್ಟು ಸಮಾಧಾನಕರವಾಗಲಿದೆ.

ಒಂದು ಜಾರ್‌ನಷ್ಟು ನೀರಿಗೆ ಪುದೀನಾ ಎಲೆಗಳನ್ನು ಹಾಕಿ, ಅದಕ್ಕೆ ನಿಂಬೆಹಣ್ಣಿನ ಹೋಳುಗಳನ್ನು ಇಳಿಬಿಡಬೇಕು. ಸೌತೆಕಾಯಿ ಅಥವಾ ಕಲ್ಲಂಗಡಿ ಹಣ್ಣಿನ ಹೋಳನ್ನು ಹಾಕಿದರೆ ಇನ್ನೂ ಒಳ್ಳೆಯದು. ಈ ನೀರಿಗೆ ಜಜ್ಜಿದ ಶುಂಠಿ ಮಿಶ್ರಣ ಮಾಡಿಕೊಂಡು ಸೇವಿಸಿದರೆ ಫಲಿತಾಂಶ ಉತ್ತಮವಾಗಿರುತ್ತದೆ.

ಪುದೀನಾ ಬಳಕೆಯಿಂದಾಗುವ ನಾನಾ ಪ್ರಯೋಜನಗಳು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಪುದೀನಾ ನೀರನ್ನು ತಯಾರಿಸಿಕೊಂಡು ಕುಡಿದರೆ, ವಿಶೇಷವಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುತ್ತದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿವಿಧ ಬಗೆಯ ರೋಗರುಜಿನಗಳು ಬರುವ ಸಾಧ್ಯತೆ ಇರುತ್ತದೆ. ಜಂಕ್ ಫುಡ್ಸ್, ರಸ್ತೆಬದಿ ಮಾರಾಟ ಮಾಡುವ ಹಣ್ಣು, ಹಣ್ಣಿನ ರಸ, ತಂಪುಪಾನೀಯಗಳ ಸೇವನೆಯಿಂದ ರೋಗಗಳು ನಮ್ಮನ್ನು ಬಾಧಿಸುವ ಸಾಧ್ಯತೆ ಇರುತ್ತದೆ. ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು.
ಗಮನಿಸಬೇಕಾದ ಅಂಶವೆಂದರೆ, ಬೆಳಗಿನ ವೇಳೆ ಒಂದು ಲೋಟದಷ್ಟು ಪುದೀನಾ ರಸವನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ. ಈ ರೀತಿಯ ಪ್ರಯತ್ನದಿಂದಾಗಿ ಯಾವುದೇ ರೀತಿಯ ಸೋಂಕು ಹತ್ತಿರ ಸುಳಿಯದಂತೆ ಕಾಪಾಡಲಿದೆ.

ಇನ್ನು ಪುದೀನಾ ನೀರು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ದೂರವಾಗಲಿದೆ. ಪುದೀನಾದಲ್ಲಿ ಫೈಟೊ ನ್ಯೂಟ್ರಿಯಂಟ್ಸ್ ಅಂಶಗಳಿರುವುದರಿಂದ ಹೊಟ್ಟೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸುತ್ತದೆ.

ಪುದೀನಾ ನೀರು ಸೇವನೆಯಿಂದ ಉಸಿರಾಟ ವ್ಯವಸ್ಥೆ ಪರಿಶುದ್ಧವಾಗಿರಲು ಸಹಕಾರಿಯಾಗುತ್ತದೆ. ಅಸ್ತಮಾ ರೋಗಿಗಳಿಗೆ ಈ ನೀರು ಔಷಧಿಯಾಗಿ ಕೆಲಸ ಮಾಡುತ್ತದೆ.
ಬೇಸಿಗೆಯಲ್ಲಿ ನಮ್ಮ ತ್ವಚೆ ಜಿಡ್ಡಿನಿಂದ ಕೂಡಿರುತ್ತದೆ ಮತ್ತು ಮಂದವಾಗಿರುತ್ತದೆ. ಇಂತಹ ಸಮಯದಲ್ಲಿ ಮೊಡವೆ ಹಾಗೂ ಗುಳ್ಳೆಗಳಾಗುವ ಸಾಧ್ಯತೆಯಿರುತ್ತದೆ. ಪುದೀನಾ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಆಂಟಿಬ್ಯಾಕ್ಟೀರಿಯಲ್ ಹಾಗೂ ಉರಿಯೂತ ನಿರೋಧಕ ಗುಣಲಕ್ಷಣಗಳು ಪುದೀನಾದಲ್ಲಿ ಹೇರಳವಾಗಿದ್ದು, ಇದರ ಸೇವನೆಯಿಂದ ಹಲ್ಲುಗಳ ಸಮಸ್ಯೆ ಹಾಗೂ ಬಾಯಿ ಸಮಸ್ಯೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ.

ಹೀಗೆ ಬೇಸಿಗೆಯಲ್ಲಿ ಪುದೀನಾ ಹಾಗೂ ಪುದೀನಾ ನೀರು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ.

Write A Comment