ಕನ್ನಡ ವಾರ್ತೆಗಳು

ವಿಶ್ವವಿದ್ಯಾಲಯ ಮಟ್ಟದಲ್ಲಿ ಜಪಾನ್ ಭಾಷೆ ಕಲಿಸಲು ಚಿಂತನೆ :ಸಚಿವ ಟಿ.ಬಿ. ಜಯಚಂದ್ರ.

Pinterest LinkedIn Tumblr

jayachandra

ಬೆಂಗಳೂರು, ಏ.23:  ಜಪಾನ್ ದೇಶದಲ್ಲಿ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಜಪಾನ್ ಭಾಷೆ ಕಲಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

ವಿಧಾನಸೌಧದಲ್ಲಿಂದು ಜಪಾನ್‌ನ ನಿಯೋಗ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಪಾನ್‌ನಲ್ಲಿ ಸುಮಾರು 40 ಸಾವಿರ ಎಂಜಿನಿಯರ್‌ಗಳನ್ನು ಭಾರತ ಹಾಗೂ ವಿಯಟ್ನಾಂನಿಂದ ಮಾತ್ರ ನೇಮಕ ಮಾಡಿಕೊಳ್ಳಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಜತೆಗೆ ಅಲ್ಲಿ ವಯಸ್ಸಾದವರು ಹೆಚ್ಚಿರುವುದರಿಂದ ಅವರ ಆರೈಕೆಗೆ 4 ಲಕ್ಷದಷ್ಟು ದಾದಿಯರ ನೇಮಕಾತಿಗೂ ಅಲ್ಲಿನ ಸರ್ಕಾರ ಮುಂದಾಗಿದೆ. ಇದರ ಜತೆಗೆ ಐಟಿಐ, ಡಿಪ್ಲೋಮಾ ಓದಿರುವವರಿಗೂ ಅಲ್ಲಿ ಸಾಕಷ್ಟು ಉದ್ಯೋಗಗಳು ಲಭ್ಯವಿದ್ದು, ಅಲ್ಲಿ ಉದ್ಯೋಗಕ್ಕೆ ಜಪಾನ್ ಭಾಷೆ ಕಲಿಕೆ ಅಗತ್ಯ ಇರುವುದರಿಂದ ಆಸಕ್ತರಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಜಪಾನ್ ಭಾಷೆ ಕಲಿಸಲು ಅವಕಾಶ ನೀಡುವ ಬಗ್ಗೆ ಚಿಂತನೆ ಇದೆ ಎಂದರು.

ಈ ಸಂಬಂಧ ಮೇ ತಿಂಗಳ 3ರಂದು ನಡೆಯುವ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಚರ್ಚಿಸಲಾಗುವುದು. ಈ ಸಭೆಯಲ್ಲಿ ಜಪಾನ್ ನಿಯೋಗದ ಕೆಲ ಗಣ್ಯರು ಪಾಲ್ಗೊಂಡು ತಮ್ಮ ಅಗತ್ಯತೆಯನ್ನು ವಿವರಿಸಲಿದ್ದಾರೆ ಎಂದರು.

ರಾಜ್ಯಕ್ಕೆ ಭೇಟಿ ನೀಡಿರುವ ಜಪಾನ್ ನಿಯೋಗ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದೆ. ನಮ್ಮ ಮೂಲಭೂತ ಸೌಕರ್ಯಗಳು ಎಲ್ಲದರ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಪಾನ್‌ನ ಸಿಲ್ವರ್ ಪೀಕ್ ವಿವಿಯ ಮುಖ್ಯಸ್ಥ ಸುಬಾಲ್ ಬಾಟ್‌ಚಾನ್ ಅವರು, ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಉತ್ತಮ ಇರುವುದರಿಂದ ಜಪಾನ್ ಕರ್ನಾಟಕದಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ನೇಮಕಾತಿಗೆ ಆಸಕ್ತಿ ತೋರಿದೆ ಎಂದರು.

ಜಪಾನ್ ಈಗ ಐಟಿ ಕ್ಷೇತ್ರದ ಅಭಿವೃದ್ಧಿಗೆ ಗಮನ ನೀಡಿರುವುದರಿಂದ ಐಟಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಅವರು ಹೇಳಿದರು.
ಇದರ ಜತೆಗೆ ಹಿರಿಯರ ಆರೈಕೆಗೆ ನರ್ಸ್‌ಗಳು, ವೆಲ್ಡರ್ಸ್, ಪ್ಲಂಬರ್ರ್ಸ್ ಎಲೆಕ್ಟ್ರಿಷಿಯನ್ ಸೇರಿದಂತೆ ವಿವಿಧ ಉದ್ಯೋಗಗಳಿಗೂ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಅವಕಾಶವಿದೆ. ದೊಡ್ಡ ಸಂಬಳವೂ ಸಿಗುತ್ತದೆ ಎಂದರು.

ಜಪಾನ್‌ನಲ್ಲಿ ವಿದ್ಯಾರ್ಥಿಗಳಿಗೆ ಅರೆಕಾಲಿಕ ಉದ್ಯೋಗ ಕಡ್ಡಾಯವಾಗಿರುವುದರಿಂದ ಎಲ್ಲರೂ ಜಪಾನ್ ಭಾಷೆ ಕಲಿಯುವ ಅಗತ್ಯವಿದೆ. ಅರೆಕಾಲಿಕ ಉದ್ಯೋಗವನ್ನು ಸರ್ಕಾರವೇ ಒದಗಿಸುತ್ತದೆ ಎಂದು ಅವರು ಹೇಳಿದರು.

ಭಾರತದಿಂದ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಮಾತುಕತೆಗಳು ನಡೆದಿವೆ. ಮುಂಬರುವ ದಿನಗಳಲ್ಲಿ ಜಪಾನ್‌ನ 30 ಉದ್ಯಮಿಗಳ ತಂಡ ಭಾರತಕ್ಕೆ ಭೇಟಿ ನೀಡಿ ಈ ಸಂಬಂಧ ಚರ್ಚೆ ನಡೆಸಲಿದೆ ಎಂದು ಅವರು ಹೇಳಿದರು.

 

Write A Comment