ವಿಟ್ಲ, ಏ.19: ಕೆದಿಲ ಗ್ರಾಮದ ಬಡೆಕ್ಕಿಲ ಶ್ಯಾಮಪ್ರಸಾದ ಶಾಸ್ತ್ರಿ ಅವರ ಅನುಮಾನಾಸ್ಪದ ಸಾವಿನ ಸರಿಯಾದ ತನಿಖೆ ನಡೆಸಬೇಕೆಂದು ಆಪ್ತ ಬಂಧು, ಕುಟುಂಬಸ್ಥ ಗೋವಿಂದ ಶಾಸ್ತ್ರಿ ಅವರು ಖಾಸಗಿ ಪ್ರಕರಣ ದಾಖಲಿಸಿದ್ದು, ಸೋಮವಾರ ಪುತ್ತೂರು ಪ್ರಧಾನ ವ್ಯಾವಹಾರಿಕ ಹಿರಿಯ ಸಿವಿಲ್ ನ್ಯಾಯಾಲಯವು ಸಿ.ಎಂ.ದಿವಾಕರ ಶಾಸ್ತ್ರಿಗೆ ಸಮನ್ಸ್ ಜಾರಿ ಮಾಡಿದೆ.
ಶ್ಯಾಮಪ್ರಸಾದ ಶಾಸ್ತ್ರಿಗಳು ಆತ್ಮಹತ್ಯೆ ನಡೆಸಿಕೊಂಡರು ಎಂದ ಸ್ಥಳದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿ ನೀಡಿದ ದಾಖಲೆಗಳಲ್ಲೇ ಆತ್ಮಹತ್ಯೆಯಲ್ಲ, ಪೂರ್ವನಿಯೋಜಿತ ಕೃತ್ಯ ಎಂಬಂತೆ ಕಾಣಿಸುತ್ತಿದೆ. ಅವರು ಬಳಸಿದ ಬಂದೂಕಿನ ವಾರಸುದಾರರೇ ಬೇರೆ ಹಾಗೂ ವ್ಯಾಪ್ತಿಯೂ ಬೇರೆಯಾಗಿದೆ. ಶ್ಯಾಮಪ್ರಸಾದ ಶಾಸ್ತ್ರಿ ತಮ್ಮ ಹೆಸರಿನಲ್ಲಿ ಪರವಾನಿಗೆಯಿರುವ ಕೋವಿಯನ್ನು ಹೊಂದಿದ್ದರೂ, ಬೇರೆ ತಾಲೂಕಿನ ಪರವಾನಿಗೆ ಹೊಂದಿರುವ ದಿವಾಕರ ಶಾಸ್ತ್ರಿ ಅವರ ಲೋಡೆಡ್ ಬಂದೂಕು ಯಾಕೆ ಉಪಯೋಗಿಸಿದರು.
ಬೇರೆ ತಾಲೂಕಿನ ಪರವಾನಿಗೆ ಹೊಂದಿರುವ ದಿವಾಕರ ಶಾಸ್ತ್ರಿ ಮತ್ತೊಬ್ಬರಿಗೆ ಬಂದೂಕನ್ನು ಹಸ್ತಾಂತರಿಸುವುದು ತಪ್ಪಲ್ಲವೇ? ಇದು ಶಿಕ್ಷಾರ್ಹ ಅಪರಾಧವಾಗಿದ್ದರೂ ಪೊಲೀಸರು ಹಾಗೂ ಸಿಐಡಿ ಯಾಕೆ ಕ್ರಮ ಕೈಗೊಂಡಿಲ್ಲ? ಇದೆಲ್ಲವನ್ನೂ ತನಿಖೆ ನಡೆಸಿದರೆ ನಿಜಬಣ್ಣ ಬಯಲಾಗುವ ಭಯವೇ? ದಿವಾಕರ ಶಾಸ್ತ್ರಿ ಮತ್ತು ಅವರ ತಂಡವನ್ನು ರಕ್ಷಿಸುವುದಕ್ಕಾಗಿ ನಡೆಸುತ್ತಿರುವ ಹುನ್ನಾರವೇ? ಎಂದು ಅವರು ಪ್ರಶ್ನಿಸಿದ್ದಲ್ಲದೇ ಈ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ನ್ಯಾಯಾಲಯದಲ್ಲಿ ಖಾಸಗೀ ದೂರು ದಾಖಲಿಸಲಾಗಿತ್ತು.
ಆ ದೂರನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಸಿ.ಎಂ.ದಿವಾಕರ ಶಾಸ್ತ್ರಿಯನ್ನು ಆರೋಪಿಯೆಂದು ಪರಿಗಣಿಸಿ, ಭಾರತೀಯ ದಂಡ ಸಂಹಿತೆ ಸೆಕ್ಷನ್ 304, 201, 120(ಬಿ) ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 25ರ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತೀರ್ಪು ನೀಡಿದೆ ಮತ್ತು ಆರೋಪಿಗೆ ಸಮನ್ಸ್ ಜಾರಿಗೊಳಿಸಲು ಆದೇಶ ನೀಡಿದೆ.
