ರಾಷ್ಟ್ರೀಯ

ಶಾಪಗ್ರಸ್ತ ಕೊಹಿನ್ನೂರ್ ವಜ್ರ ಬ್ರಿಟಿಷರ ಬಳಿಯಲ್ಲೇ ಇರಲಿ ಎಂದು ಇತಿಹಾಸಕಾರ ಹೇಳಿದ್ದು ಯಾಕಾಗಿ ಗೊತ್ತಾ…? ಇಲ್ಲಿದೆ ಸಂಪೂರ್ಣ ವರದಿ…

Pinterest LinkedIn Tumblr

Kohinoor

ಹೈದ್ರಾಬಾದ್: ಬ್ರಿಟಿಷರು ಕೊಹಿನ್ನೂರ್ ವಜ್ರವನ್ನು ಕದ್ದಿಲ್ಲ, ಅದನ್ನು ಬಲವಂತವಾಗಿ ತೆಗೆದುಕೊಂಡೂ ಹೋಗಿಲ್ಲ. ಪ್ರಸ್ತುತ ವಜ್ರವನ್ನು ಪಂಜಾಬ್‌ನ ಮಹಾರಾಜ ರಂಜೀತ್ ಸಿಂಗ್ ಅವರು ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು.

ಇದೀಗ ಹೈದ್ರಾಬಾದ್ ಮೂಲದ ಇತಿಹಾಸಕಾರ ಮೊಹಮ್ಮದ್ ಸೈಫುಲ್ಲಾ ಅವರು ಆ ವಜ್ರ ಬ್ರಿಟಿಷರ ಬಳಿಯಲ್ಲೇ ಇರಲಿ. ಅದನ್ನು ಭಾರತಕ್ಕೆ ವಾಪಸ್ ತರುವ ಅಗತ್ಯವಿಲ್ಲ. ಯಾಕೆಂದರೆ ಕೊಹಿನ್ನೂರ್ ವಜ್ರ ಶಾಪಗ್ರಸ್ತವಾಗಿದೆ. ಅದು ಯಾರ ಬಳಿಯಲ್ಲಿರುತ್ತದೋ ಅಲ್ಲಿ ದುರಂತಗಳು ಸಂಭವಿಸುತ್ತವೆ. ಅದನ್ನು ವಶದಲ್ಲಿಟ್ಟುಕೊಂಡವರಿಗೆ ಅದು ದೌರ್ಭಾಗ್ಯವನ್ನು ತರುತ್ತದೆ ಎಂದಿದ್ದಾರೆ.

ಕೊಹಿನ್ನೂರ್ ವಜ್ರ ಅಶುಭ ತರುತ್ತದೆ ಎಂಬುದಕ್ಕೆ ಸೈಫುಲ್ಲಾ ಕಾರಣವನ್ನೂ ನೀಡುತ್ತಾರೆ. ಅದು ಹೀಗಿದೆ:

ಈ ವಜ್ರವನ್ನು ಪಡೆಯಬೇಕೆಂದು ಹಂಬಲಿಸಿ ಅದನ್ನು ವಶವಿರಿಸಿಕೊಂಡಿದ್ದ ರಾಜವಂಶಗಳು ತಕ್ಷಣವೇ ವಿನಾಶವಾಗಿವೆ. ಇನ್ನು ಬ್ರಿಟಿಷರ ಬಗ್ಗೆ ಹೇಳುವುದಾದರೆ, ಅವರು ಈ ವಜ್ರವನ್ನು ಪಡೆದುಕೊಂಡ ಕೂಡಲೇ ತಮ್ಮ ಕಾಲನಿಗಳನ್ನು ಅವರು ಕಳೆದುಕೊಂಡಿದ್ದಾರೆ. ಸೂರ್ಯ ಮುಳುಗದೇ ಇದ್ದ ಸಾಮ್ರಾಜ್ಯವನ್ನು ಹೊಂದಿದ್ದೇವೆ ಎಂದು ಬೀಗುತ್ತಿದ್ದ ಬ್ರಿಟಿಷರು, ಕೊಹಿನ್ನೂರ್ ಸಿಕ್ಕಿದ ಮೇಲೆ ಸೂರ್ಯ ಉದಯವಾಗುವ ನಾಡನ್ನು ನೋಡಿಯೇ ಇಲ್ಲ.

ಕೊಹಿನ್ನೂರ್ ಎಂದರೆ ಬೆಳಕಿನ ಶಿಖರ ಎಂದರ್ಥ. ದೊಡ್ಡ ಗಾತ್ರದ ನಿರ್ವರ್ಣ ವಜ್ರವು ಆಂಧ್ರ ಪ್ರದೇಶದ ಗುಂಟೂರಿನ ಕೊಲ್ಲೂರ್ ಗಣಿಯಲ್ಲಿ ಪತ್ತೆಯಾಗಿತ್ತು. 14 ನೇ ಶತಮಾನದ ಆದಿಯಲ್ಲಿ ಕಾಕತೀಯ ರಾಜವಂಶದ ಅಧಿಕಾರವಧಿಯಲ್ಲಿ ಇದು ಪತ್ತೆಯಾಗಿತ್ತು. ಕೊಲೋನಿಯಲ್ ಯುಗ (ಕಾಲನಿಗಳಾಗಿ ಬದುಕುತ್ತಿದ್ದ ಕಾಲ)ದಲ್ಲಿ ಬ್ರಿಟಿಷರಿಗೆ 108 ಕ್ಯಾರೆಟ್ ಕೊಹಿನ್ನೂರ್ ವಜ್ರವನ್ನು ಹಸ್ತಾಂತರಿಸಲಾಗಿತ್ತು.

14 ನೇ ಶತಮಾನದ ಕಾಕತೀಯ ರಾಜವಂಶಜರಿಂದ ಕೊಹಿನ್ನೂರ್ ವಜ್ರವನ್ನು ದಕ್ಷಿಣ ಭಾರತವನ್ನು ವಶ ಪಡಿಸಿಕೊಂಡಿದ್ದ ಮತ್ತು ದೆಹಲಿಯಲ್ಲಿ ಮೊಗಲ ಸಾಮ್ರಾಜ್ಯವನ್ನು ವಿಸ್ತರಿಸಿದ ಅಲಾವುದ್ದೀನ್ ಖಿಲ್ಜಿ ಕೈ ಸೇರಿತ್ತು. ಇದಾದ ನಂತರ 1739ರಲ್ಲಿ ಪರ್ಷಿಯಾದ ನದೇರ್ ಷಾ ದೆಹಲಿಯಲ್ಲಿ ಮೊಗಲರ ಸಾಮ್ರಾಜ್ಯದ ಮೇಲೆ ಅತಿಕ್ರಮಣ ನಡೆಸಿದಾಗ ವಜ್ರವು ಪರ್ಷಿಯಾದ ಕೈವಶವಾಯಿತು.

ಪರ್ಷಿಯಾದ ಷಾ ಹತ್ಯೆಗೊಳಗಾದ ನಂತರ 1747ರಲ್ಲಿ ಈ ವಜ್ರ ಅಹ್ಮದ್ ಷಾ ದುರಾನಿ ಕೈ ಸೇರಿತು. ಈತ ಅಫ್ಘಾನಿಸ್ತಾನದ ಅಧಿಪತಿಯಾದಾಗ ಈತನ ವಂಶಸ್ಥನಾದ ಶೌಜಾ ಷಾ ದುರಾನಿಯ ಸಾಮಾಜ್ಯದ ಮೇಲೆ ಮೊಹಮ್ಮದ್ ಷಾ ದಂಡೆತ್ತಿ ಬಂದಾಗ ದುರಾನಿ ವಜ್ರವನ್ನು ತೆಗೆದುಕೊಂಡು ಪರಾರಿಯಾಗಿದ್ದನು. ಹೀಗೆ ಸೋಲಿನ ಭಯದಿಂದ ಓಡಿ ಬಂದ ದುರಾನಿ ಸಿಖ್ ಚಕ್ರವರ್ತಿ ಮಹಾರಾಜಾ ರಂಜೀತ್ ಸಿಂಗ್ ಬಳಿ ಅಭಯ ಪಡೆದನು. ಹೀಗೆ 1813ರಲ್ಲಿ ಕೊಹಿನ್ನೂರ್ ಮಹಾರಾಜಾ ರಂಜೀತ್ ಸಿಂಗ್ ಕೈವಶವಾಯಿತು.

ಮಹಾರಾಜಾ ರಂಜೀತ್ ಸಿಂಗ್ ಈ ವಜ್ರವನ್ನು ಪುರಿ ಜಗನ್ನಾಥ ದೇಗುಲದ ಸುಪರ್ದಿಗೆ ಒಪ್ಪಿಸುವಂತೆ ಉಯಿಲು ಬರೆದುಕೊಟ್ಟಿದ್ದರು. ಆದರೆ 1839ರಲ್ಲಿ ಮಹಾರಾಜಾ ರಂಜೀತ್ ಸಿಂಗ್ ಸಾವು ನಂತರ ಉಯಿಲಿಗೆ ಬೆಲೆ ಕಲ್ಪಿಸದ ಈಸ್ಟ್ ಇಂಡಿಯಾ ಕಂಪನಿ ಕೊಹಿನ್ನೂರ್‌ನ್ನು ತಮ್ಮದಾಗಿಸಿಕೊಂಡಿತು. 10 ವರ್ಷಗಳ ನಂತರ ಎರಡನೇ ಆಂಗ್ಲೋ -ಸಿಖ್ ಯುದ್ಧದ ನಂತರ ಪಂಜಾಬ್ ಬ್ರಿಟಿಷರ ಕೈವಶವಾಯಿತು. ದುಲೀಪ್ ಸಿಂಗ್ ಎಂಬ ಯುವ ರಾಜನಿಂದ ಬ್ರಿಟಿಷರು ಬಲವಂತವಾಗಿ ಕೊಹಿನ್ನೂರ್‌ನ್ನು ಪಡೆದುಕೊಂಡರು. ಹೀಗೆ ಕೊಹಿನ್ನೂರ್ ಮಹಾರಾಣಿ ವಿಕ್ಟೋರಿಯಾಳ ಸೊತ್ತು ಆಯಿತು.

ಇಷ್ಟೆಲ್ಲಾ ಘಟನೆಗಳು ನಡೆದಿರುವಾಗ ಭಾರತ ಕೊಹಿನ್ನೂರ್ ವಜ್ರವನ್ನು ವಾಪಸ್ ತರುವ ಅಗತ್ಯವೇನಿದೆ? ಎಂಬುದು ಸೌಫುಲ್ಲಾ ಅವರ ಪ್ರಶ್ನೆಯಾಗಿದೆ.

Write A Comment