ಕನ್ನಡ ವಾರ್ತೆಗಳು

ಮೌಲ್ಯಮಾಪನ ಬಹಿಷ್ಕಾರ ಪ್ರಕರಣ : ಕುಮಾರ್ ನಾಯಕ್ ವರದಿ ಅನುಷ್ಠಾನಕ್ಕೆ ಕಾರ್ನಿಕ್ ಆಗ್ರಹ.

Pinterest LinkedIn Tumblr

ganesh-karnik-pic_1

ಮಂಗಳೂರು,ಎ.18 : ಕಳೆದ 16 ದಿನಗಳಿಂದ ಪಿ.ಯು. ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕಿ ಮುಷ್ಕರ ನಡೆಸುತ್ತಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗದೆ ಪರ್ಯಾಯ ಮಾರ್ಗದ ಕುರಿತು ದಿನಕೊಂದು ನಿರ್ಧಾರ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸರ್ಕಾರವು ಚೆಲ್ಲಾಟವಾಡುತ್ತಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.

ಸರ್ಕಾರವೇ ನೇಮಕಮಾಡಿದ್ದ ಕುಮಾರ್ ನಾಯಕ್ ನೇತೃತ್ವದ ಅಧಿಕಾರಿ ಸಮಿತಿಯ ವರದಿ ಸರ್ಕಾರದ ಬಳಿ ಸಿದ್ಧವಿದ್ದರೂ ಪೂರ್ಣ ಪ್ರಮಾಣದಲ್ಲಿ ಅದನ್ನು ಆನುಷ್ಠಾನಗೊಳಿಸದೆ ಕೇವಲ ಒಂದು ವೇತನ ಬಡ್ತಿ ನೀಡುವುದಾಗಿ ಆದೇಶ ಹೊರಡಿಸಿರುವುದು ಶಿಕ್ಷಕರ ಮೂಗಿಗೆ ಬೆಣ್ಣೆ ಸವರುವ ಪ್ರಯತ್ನವಾಗಿದೆ.

ಮೌಲ್ಯಮಾಪನ ಕಾರ್ಯವನ್ನು ಖಾಸಗಿ ಕಾಲೇಜುಗಳ ಉಪನ್ಯಾಸಕರಿಂದ, ನಿವೃತ್ತ ಉಪನ್ಯಾಸಕರಿಂದ ನಡೆಸುತ್ತೇವೆ ಎಂದು ದಿನಕೊಂದು ಹೇಳಿಕೆಯನ್ನು ನೀಡುತ್ತಾ, ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡದೆ ಪದವಿಪೂರ್ವ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಪ್ರೌಢಶಾಲೆಯ ಶಿಕ್ಷಕ ನ್ಯಾಯಯುತ ಬೇಡಿಕೆಯಾದ ಕುಮಾರ ನಾಯಕ್ ವರದಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸುವ ಮೂಲಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಒತ್ತಾಯಿಸುವುದಾಗಿ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಪ್ರಶ್ನೆ ಪತ್ರಿಕೆಗಳ ಬಹಿರಂಗ, ರಾಸಯನಶಾಸ್ತ್ರ ಪತ್ರಿಕೆಯ ಮರುಪರೀಕ್ಷೆ ಮುಂತಾದ ಗೊಂದಲಗಳ ನಡುವೆ ಆತಂಕಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಮರ್ಪಕ ಹಾಗೂ ನಿಧಾನಗತಿಯ ಮೌಲ್ಯಮಾಪನದ ವಿರುದ್ಧ ಬೀದಿಗಿಳಿಯುವ ಮೊದಲೆ ಸರ್ಕಾರ ಎಚ್ಚೆತ್ತುಕೊಳ್ಳುವುದನ್ನು ಬಿಟ್ಟು ಪ್ರಾಂಶುಪಾಲ ಉಪನ್ಯಾಸಕರನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನವನ್ನು ಅತ್ಯಂತ ತೀವ್ರವಾಗಿ ಖಂಡಿಸುವುದಾಗಿ ಕಾರ್ನಿಕ್ ತಿಳಿಸಿದ್ದಾರೆ.

Write A Comment