ಕನ್ನಡ ವಾರ್ತೆಗಳು

ಜುಬೈಲ್‌ ಅಗ್ನಿ ದುರಂತಕ್ಕೆ ಜಿಲ್ಲೆಯ 6 ಮಂದಿ ಸೇರಿ 12 ಮಂದಿ ಬಲಿ : ಮೃತರ ಪಾರ್ಥಿವ ಶರೀರಗಳಿಗಾಗಿ ಕಾಯುತ್ತಿರುವ ದು:ಖತಪ್ತ ಕುಟುಂಬಸ್ಥರು

Pinterest LinkedIn Tumblr

Soudi_fire_death_1

ಮಂಗಳೂರು, ಎ.18: ಸೌದಿ ಅರಬಿಯಾದ ಜುಬೈಲ್‌ನ ಯುನೈಟೆಡ್ ಪೆಟ್ರೊ ಕೆಮಿಕಲ್ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತ ದ.ಕ. ಜಿಲ್ಲೆಯ ಜನತೆಗೆ ಆಘಾತ ತಂದಿದೆ. ಅವಘಡದಲ್ಲಿ ಜಿಲ್ಲೆಯ 6 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಬಜ್ಪೆ ಸಮಿಪದ ಕೊಂಚಾರ್ ನಿವಾಸಿ ಭಾಸ್ಕರ್ ಪೂಜಾರಿ(44), ನೀರುಮಾರ್ಗದ ಮೇರ್ಲಪದವು ವಿನ್ಸೆಂಟ್ ಮೊಂತೇರೊ(36), ಹಳೆಯಂಗಡಿ ನಿವಾಸಿ ಅಶ್ರಫ್(30) ಹಾಗೂ ಮೂಡುಶೆಡ್ಡೆ ನಿವಾಸಿ ಬಾಲಕೃಷ್ಣ ಎಂಬವರು ಬೆಂಕಿ ಅನಾಹುತಕ್ಕೆ ಬಲಿಯಾಗಿದ್ದಾರೆ. ಮೃತರ ಪಾರ್ಥಿವ ಶರೀರಗಳನ್ನು ಊರಿಗೆ ತರಲು ಕನಿಷ್ಠ 15 ದಿನಗಳು ಬೇಕಾಗಬಹುದೆಂದು ಅಂದಾಜಿಸಲಾಗಿದ್ದು, ರಾಜತಾಂತ್ರಿಕ ನೆರವನ್ನು ಕುಟುಂಬಿಕರು ನಿರೀಕ್ಷಿಸುತ್ತಿದ್ದಾರೆ.

ಅವಘಡಕ್ಕೆ ಬಲಿಯಾದ ಮೇರ್ಲಪದವಿನ ವಿನ್ಸೆಂಟ್ ಮೊಂತೇರೊ ಶನಿವಾರ ಹುಟ್ಟೂರಿಗೆ ಬರಲು ನಿರ್ಧರಿಸಿದ್ದರು. ಈ ಬಗ್ಗೆ ಮನೆಯವರಿಗೂ ತಿಳಿಸಿದ್ದರು. ಆದರೆ ಅವಿವಾಹಿತರಾಗಿರುವ ವಿನ್ಸೆಂಟ್‌ರಿಗೆ ಈ ಬಾರಿ ಊರಿಗೆ ಬಂದಾಗ ಮದುವೆ ಮಾಡಲು ಮನೆಯವರು ನಿರ್ಧರಿಸಿದ್ದರಿಂದ ರಜೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಅವರು ಊರಿಗೆ ಬರುವುದನ್ನು ಒಂದು ತಿಂಗಳಿಗೆ ಮುಂದೂಡಿದ್ದರು. ಇಲ್ಲವಾದಲ್ಲಿ ಶನಿವಾರ ಅವರು ಊರು ಸೇರುತ್ತಿದ್ದರು.

ದಿವಂಗತ ಲಾರೆನ್ಸ್ ಮೊಂತೇರೊ ಮತ್ತು ಕ್ರಿಶ್ಚಿನ್ ಮೊಂತೇರೊ ಅವರ 6 ಮಕ್ಕಳಲ್ಲಿ ಐದನೆಯವರಾಗಿರುವ ವಿನ್ಸೆಂಟ್, ಕಳೆದ 9 ವರ್ಷಗಳಿಂದ ವಿದೇಶದಲ್ಲಿ ದುಡಿಯುತ್ತಿದ್ದರು. 5 ವರ್ಷ ದುಬೈಯಲ್ಲಿದ್ದ ಅವರು ಕಳೆದ ನಾಲ್ಕ್ಕೂ ವರೆ ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಇವರ ಸಾವು ಮನೆಯಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

‘‘ವಿನ್ಸೆಂಟ್ ಮೃತರಾಗಿರುವುದು ಆಘಾತ ತಂದಿದೆ. ಈ ಬಗ್ಗೆ ತಾಯಿಗೆ ಇನ್ನೂ ತಿಳಿಸಿಲ್ಲ. ಪಾರ್ಥಿವ ಶರೀರವನ್ನು ತರುವ ನಿಟ್ಟಿನಲ್ಲಿ ಸರಕಾರದ ನೆರವು ಎದುರು ನೋಡುತ್ತಿದ್ದೇವೆ’’ ಎಂದು ವಿನ್ಸೆಂಟ್‌ರ ಸಹೋದರ ಜೆರೊಂ ಪ್ರತಿಕ್ರಿಯಿಸಿದ್ದಾರೆ.

ಅವಘಡದಲ್ಲಿ ವಾಮಂಜೂರಿನ ಬಾಲಕೃಷ್ಣ ಮೃತಪಟ್ಟಿರುವುದನ್ನು ಜುಬೈಲ್‌ನ ಅವರ ರೂಮ್‌ನಲ್ಲಿ ಜೊತೆಯಾಗಿರುವ ಸ್ನೇಹಿತರೊಬ್ಬರು ಖಚಿತಪಡಿಸಿದ್ದಾರೆ.

ಬಾಲಕೃಷ್ಣ ಪೂಜಾರಿ ಕಳೆದ 2 ವರ್ಷಗಳಿಂದ ಸೌದಿ ಅರಬಿಯಾದಲ್ಲಿ ದುಡಿಯುತ್ತಿದ್ದರು. ಕಳೆದ ಏಳೆಂಟು ವರ್ಷಗಳಿಂದ ವಿದೇಶದಲ್ಲಿ ದುಡಿಯುತ್ತಿದ್ದ ತನ್ನ ಸಹೋದರ ಕುಟುಂಬಕ್ಕೆ ಆಧಾರವಾಗಿದ್ದ ಎಂದು ಕೊಂಚಾರ್‌ನ ಭಾಸ್ಕರ್ ಪೂಜಾರಿಯವರ ಹಿರಿಯ ಸಹೋದರ ದಯಾನಂದ ಪ್ರತಿಕ್ರಿಯಿಸಿದ್ದಾರೆ.ಭಾಸ್ಕರ್ ಪೂಜಾರಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಈದುಲ್ ಫಿತ್ರ್‌ಗೆ ಬರುವುದಾಗಿ ಹೇಳಿದ್ದ ಅಶ್ರಫ್ :

ಹಳೆಯಂಗಡಿ ನಿವಾಸಿ ಮುಹಮ್ಮದ್ ಅಶ್ರಫ್(30) ಎಂಬವರು ಜುಬೈಲ್‌ನ ಅಗ್ನಿ ದುರಂತಕ್ಕೆ ಬಲಿಯಾಗಿರುವುದು ದೃಢ ಪಟ್ಟಿದ್ದು ಕುಟುಂಬಿಕರು ಕಂಗಾಲಾಗಿದ್ದಾರೆ. ಅಶ್ರಫ್ ಯುನೈಟೆಡ್ ಪೆಟ್ರೊ ಕೆಮಿಕಲ್ ಕಾರ್ಖಾನೆಯ ಮೆಕ್ಯಾನಿಕಲ್ ವಿಭಾಗದಲ್ಲಿ ಪೈಪ್ ಟೆಕ್ನಿಶಿಯನ್ ಆಗಿ ಕಳೆದ ನಾಲ್ಕು ವರ್ಷಗಳಿಂದ ದುಡಿಯುತ್ತಿದ್ದರು. ನೌಕರಿ ಖಾಯಂಗೊಂಡ ಹಿನ್ನೆಲೆ ಯಲ್ಲಿ 1 ತಿಂಗಳ ಹಿಂದೆ ಮನೆಗೆ ಬಂದು ಹೋಗಿದ್ದರು.

ಬೆಂಕಿ ಕಾಣಿಸಿಕೊಂಡ ರಿಯಾಕ್ಟರ್‌ನ ಪಕ್ಕದ ಕೊಠಡಿಯಲ್ಲಿ ಕೆಲಸ ನಿರ್ವಹಿಸುತ್ತಿದ ಅಶ್ರಫ್ ರಾಸಾಯನಿಕಯುಕ್ತ ಹೊಗೆಯಿಂದ ಉಸಿ ರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ. ಅಶ್ರಫ್‌ರ ಸಹೋದರ ಮುಹಮ್ಮದ್ ಶರೀಫ್ ಕೂಡಾ ಇದೇ ಕಂಪೆನಿಯಲ್ಲಿ ಕೆಲಸ ನಿರ್ವಹಿ ಸುತ್ತಿದ್ದು, ಅವರದ್ದು ರಾತ್ರಿ ಪಾಳಿ ಆಗಿದ್ದರಿಂದ ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ.

ಅಶ್ರಫ್ ಮೃತಪಟ್ಟಿರುವ ಬಗ್ಗೆ ಶರೀಫ್ ನಿನ್ನೆ ರಾತ್ರಿ ಮನೆಗೆ ಕರೆ ಮಾಡಿ ತಿಳಿಸಿದ್ದಾರೆ. ಕಷ್ಟದ ದಿನಗಳನ್ನು ಕಂಡಿದ್ದ ಅಶ್ರಫ್ ಪ್ರಾಮಾಣಿಕನಾಗಿ ದುಡಿಯುತ್ತಾ, ಎಲ್ಲರೊಂದಿಗೂ ಬೆರೆಯುತ್ತಿದ್ದ ಎಂದು ಜುಬೈಲ್‌ನಲ್ಲಿ ಅಶ್ರಫ್‌ನೊಂದಿಗೆ ವಾಸವಾಗಿದ್ದ ಹಾಗೂ ಸಹೋದ್ಯೋಗಿ ಅಬ್ದುಲ್ ಹಮೀದ್ ಪ್ರತಿಕ್ರಿಯಿಸಿದ್ದಾರೆ.

ಈದುಲ್ ಫಿತ್ರ್‌ಗೆ ಬರುವವನಿದ್ದ: ಕಂಪೆನಿಯಲ್ಲಿ ವರ್ಷಕ್ಕೆ 35 ದಿನಗಳ ರಜೆಯಿರುವುದರಿಂದ ಜೂನ್ ಅಂತ್ಯದಲ್ಲಿ ಊರಿಗೆ ಬಂದು ಮನೆಮಂದಿಯೊಂದಿಗೆ ಈದುಲ್ ಫಿತ್ರ್ ಆಚರಿಸುವ ಬಗ್ಗೆ ಅಶ್ರಫ್ ಪ್ರಸ್ತಾಪಿಸಿದ್ದ ಎಂದು ಮನೆಮಂದಿ ನೆನಪಿಸಿಕೊಂಡು ಕಣ್ಣೀರಿಡುತ್ತಾರೆ.

ಹಳೆಯಂಗಡಿ ಸಮೀಪದ ಸಾಗ್ ಪರಿಸರದ ಪಂಡಿತ್ ಹೌಸ್ ನಿವಾಸಿಯಾಗಿರುವ ಮುಹಮ್ಮದ್ ಅಶ್ರಫ್, ದಿವಂಗತ ಡಿ.ಎಚ್.ಅಬ್ದುಲ್ ಖಾದರ್‌ರ ಐವರು ಮಕ್ಕಳಲ್ಲಿ 2ನೆಯವರು. ಅಣ್ಣ ಶರೀಫ್ ನೆರವಿನಿಂದ ಸೌದಿ ಅರಬಿಯಾಕ್ಕೆ ತೆರಳಿದ್ದ ಅಶ್ರಫ್ ದುರಂತಕ್ಕೀಡಾದ ಜುಬೈಲ್‌ನ ಕಂಪೆನಿಯಲ್ಲಿ ಕಳೆದ 4 ವರ್ಷಗಳಿಂದ ದುಡಿಯುತ್ತಿದ್ದರು. ಇವರಿಗೆ ಊರಿನಲ್ಲಿ ಹೊಸ ಮನೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಶ್ರಫ್‌ರ ಮೃತದೇಹ ಹಸ್ತಾಂತರಕ್ಕೆ 8-10 ದಿನಗಳು ಬೇಕಾಗುವುದರಿಂದ ಸೌದಿ ಅರಬಿಯಾದಲ್ಲೆ ದಫನ ಮಾಡುವ ಬಗ್ಗೆ ಕುಟುಂಬಿಕರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಸಾಯನಿಕ ಸೋರಿಕೆ ಕಾರಣ :

ಸೌದಿಯ ಜುಬೈಲ್‌ನಲ್ಲಿ ಪೂರ್ವಾಹ್ನ 11:30 (ಭಾರತೀಯ ಕಾಲಮಾನ ಅಪರಾಹ್ನ 2 ಗಂಟೆ)ರ ಸುಮಾರಿಗೆ ಯುನೈಟೆಡ್ ಪೆಟ್ರೋ ಕೆಮಿಕಲ್ ಕಂಪೆನಿಯ ರಿಯಾಕ್ಟರ್‌ನಲ್ಲಿ ಉಂಟಾದ ರಾಸಾಯನಿಕ ಸೋರಿಕೆ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ. ರಾಸಾಯನಿಕ ಸೋರಿಕೆಯಿಂದ ಉಂಟಾದ ಬೆಂಕಿ ಕ್ಷಣಾರ್ಧದಲ್ಲಿ ಎಲ್ಲೆಡೆ ವ್ಯಾಪಿಸಿದೆ. ಬೆಂಕಿಯ ಕೆನ್ನಾಲಗೆಗೆ ಸಿಲುಕಿದ ರಿಯಾಕ್ಟರ್ ಪ್ರಬಲವಾಗಿ ಸ್ಫೋಟಗೊಂಡಿದೆ. ಘಟನೆ ಯಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದು, 11 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಅವಿಭಜಿತ ದ.ಕ. ಜಿಲ್ಲೆಯ 800 ಮಂದಿ

ಜುಬೈಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯುನೈಟೆಡ್ ಪೆಟ್ರೊ ಕೆಮಿಕಲ್ ಕಂಪೆನಿ ಯಲ್ಲಿ ಒಟ್ಟು 1,800 ಕಾರ್ಮಿಕರು ದುಡಿ ಯುತ್ತಿದ್ದು, ಈ ಪೈಕಿ ಅವಿಭಜಿತ ದ.ಕ ಜಿಲ್ಲೆಯ ಸುಮಾರು 800 ಮಂದಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವರದಿ ಕೃಪೆ : ವಾಭಾ.

Write A Comment