ಕಾಸರಗೋಡು,ಏ.18 ಯುವತಿಯನ್ನು ಬಳಸಿಕೊಂಡು ಉದ್ಯಮಿ ಸೇರಿದಂತೆ ಇಬ್ಬರನ್ನು ಬ್ಲಾಕ್ ಮೇಲ್ ಮಾಡಲು ಯತ್ನಿಸಿದ ಘಟನೆ ಕಾಸರಗೋಡು ನಗರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಘಟನೆಗೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ನಗರ ಹೊರ ವಲಯದ ಚೌಕಿ ಮಜಲ್ ನ ಮುಹಮ್ಮದ್ ಜಹೀರ್ (25 ) ಮತ್ತು ಚೂರಿ ಬದರ್ ನಗರದ ಇಸ್ಮಾಯಿಲ್ ( 22) ಎಂದು ಗುರುತಿಸಲಾಗಿದೆ.ಯುವತಿ ಮತ್ತು ಈಕೆಯ ಜೊತೆಗಿದ್ದ ಇನೋರ್ವ ಪರಾರಿಯಾಗಿದ್ದಾರೆ. ತಲಶ್ಶೇರಿ ನಿವಾಸಿ ಯುವತಿಯೊಬ್ಬಳು ಕೆಂಗಲ್ಲು ವ್ಯಾಪಾರಿ ಯೋರ್ವ ರಿಗೆ ಮೊಬೈಲ್ ನಲ್ಲಿ ಮಿಸ್ಡ್ ಕಾಲ್ ನೀಡಿದ್ದು , ಬಳಿಕ ಇಬ್ಬರ ನಡುವೆ ಪರಿಚಯವಾಗಿತ್ತು. ಶನಿವಾರ ಮಧ್ಯಾಹ್ನ ಕಾಸರಗೋಡಿನಲ್ಲಿ ಭೇಟಿಯಾಗುವಂತೆ ಯುವತಿ ವ್ಯಾಪಾರಿಗೆ ಕರೆ ಮಾಡಿದ್ದಳು ಎನ್ನಲಾಗಿದೆ. ಎರಡು ಗಂಟೆ ಸುಮಾರಿಗೆ ಮತ್ತೆ ಕರೆ ಮಾಡಿದ ಯುವತಿ ತಾನು ರೈಲು ನಿಲ್ದಾಣದಲ್ಲಿರುವುದಾಗಿ ತಿಳಿಸಿದ್ದಳು .
ಇದರಂತೆ ಸ್ನೇಹಿತನ ಜೊತೆ ಕೆಂಗಲ್ಲು ವ್ಯಾಪಾರಿ ರೈಲು ನಿಲ್ದಾಣ ಬಳಿ ಕಾಯುತ್ತಿದ್ದ ಯುವತಿಯನ್ನು ಭೇಟಿಯಾಗಿದ್ದರು. ಯುವತಿಯನ್ನು ಕಾರಿಗೆ ಹತ್ತಿಸುತ್ತಿದ್ದಂತೆ ಅಲ್ಲೇ ಹೊಂಚು ಹಾಕಿ ಕುಳಿತ್ತಿದ್ದ ಮೂವರು ಬಲವಂತವಾಗಿ ಕಾರಿನ ಬಾಗಿಲು ತೆಗೆಸಿ ಕಾರಿಗೆ ಹತ್ತಿ, ಕಾರನ್ನು ಮಂಗಳೂರಿಗೆ ಕೊಂಡೊಯ್ಯುವಂತೆ ಬೆದರಿಸಿದರು.
ಮೊದಲು ನಿರಾಕರಿಸಿದ ವ್ಯಾಪಾರಿ ಬಳಿಕ ಒಪ್ಪಿದರು. ನಂತರ ಬ್ಯಾಂಕ್ ರಸ್ತೆ ಮೂಲಕ ನೇರವಾಗಿ ಕಾಸರಗೋಡು ಪೊಲೀಸ್ ಠಾಣೆಗೆ ಕಾರನ್ನು ಚಾಲಾಯಿಸಿಕೊಂಡು ಬಂದಿದ್ದು , ಠಾಣೆ ಬಳಿ ತಲಪುತ್ತಿದ್ದಂತೆ ಕಾರು ಆಫ್ ಆದುದರಿಂದ ಯುವತಿ ಹಾಗೂ ಓರ್ವ ಕಾರಿನಿಂದ ಜಿಗಿದು ಪರಾರಿಯಾಗಿದ್ದಾರೆ , ಮುಹಮ್ಮದ್ ಝಹೀರ್ ಮತ್ತು ಇಸ್ಮಾಯಿಲ್ ನನ್ನು ಬಂಧಿಸಿದ್ದಾರೆ.