ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಕಂಠಪೂರ್ತಿ ಸಾರಾಯಿ ಕುಡಿದು ಮದ್ಯಪಾನದ ಅಮಲು ತಲೇಗೇರಿದರೆ ಕುಡುಕರು ಏನೆಲ್ಲಾ ಅವಾಂತರ ಸೃಷ್ಟಿಸುತ್ತಾರೆ. ಇವರಿಂದ ಸಾರ್ವಜನಿಕರು ಯಾವ ರೀತಿ ತೊಂದರೆಗೊಳಗಾಗುತ್ತಾರೆ ಎಂಬುವುದಕ್ಕೆ ಇಲ್ಲಿದೆ ಒಂದು ತಾಜಾ ಉದಾಹರಣೆ.
ಕಂಠ ಪೂರ್ತಿ ಮದ್ಯಪಾನ ಮಾಡಿದ ಯುವನೊಬ್ಬ ವಿದ್ಯುತ್ ಕಂಬದ ಮೇಲೇರಿ ಸ್ವಲ್ಪ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಶನಿವಾರ ಮಧ್ಯಾಹ್ನ ಒಂದು ಗಂಟೆಗೆ ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.
ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ಭಾರತ್ ಮಾಲ್ ಪಕ್ಕದಲ್ಲಿ ಮೂರು ರಸ್ತೆ ಸೇರುವ ಸಿಗ್ನಲ್ ಬಳಿಯ ರಿಕ್ಷಾ ಪಾರ್ಕ್ ಪಕ್ಕದ ಕಾರ್ನರ್ನಲ್ಲಿ ( ಶ್ರಾವಣ್ ಬಾರ್ ಮುಂಭಾಗ) ಕುಡುಕರಿಗಾಗಿಯೇ ಮೀಸಲಾಗಿರುವ ಸ್ಥಳವೊಂದಿದ್ದು, ಈ ಸ್ಥಳದಲ್ಲಿರುವ ವಿದ್ಯುತ್ ಕಂಬದ ಮೇಲೆ ಹತ್ತಿದ್ದ ವಿಜಯಪುರ (ಬೀಜಾಪುರ) ಮೂಲದ ಈ ಯುವಕ (ಕುಡುಕ) ನ ಅವಾಂತರ ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾವಣೆಗೊಂಡಿದ್ದರಿಂದ ಈ ಪ್ರದೇಶದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉಂಟಾದ ಟ್ರಾಫಿಕ್ ಜಾಮ್ ಸಮಸೈಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಈ ಯುವಕನನ್ನು ವಿದ್ಯುತ್ ಕಂಬದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.
ಯುವಕನನ್ನು ಬರ್ಕೆ ಠಾಣೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್