
ಮಂಗಳೂರು,ಏ.16: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರಣ್ಯದಲ್ಲಿ ವಾಸವಾಗಿರುವ ಆದಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತಕ್ರಮಗಳನ್ನು ಕೈಗೊಳ್ಳಲು ಪೂರಕವಾಗು ವಂತೆ ಅರಣ್ಯ ಹಾಗೂ ಸಮಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳ ಉನ್ನತ ಮಟ್ಟದ ಸಭೆಯನ್ನು ಶೀಘ್ರವೇ ನಡೆಸುವುದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್.ಅಂಜನೇಯ ತಿಳಿಸಿದ್ದಾರೆ.
ತಮ್ಮ 61ನೇ ಹುಟ್ಟುಹಬ್ಬ ದಿನವಾದ ಶುಕ್ರವಾರ ಮುಲ್ಕಿಯ ಪಡುಪಣಂಬೂರಿನ ಕೆರೆಕಾಡು ಕೊರಗರ ಹಾಡಿಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿರುವ ಸಚಿವರು ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಪ್ರಕಟಿಸಿರುವ ಪರಿಶಿಷ್ಟ ಪಂಗಡದ ಸರ್ವತೋಮುಖ ಅಭಿವೃದ್ಧಿಗಾಗಿ ಸರಕಾರದ ಯೋಜನೆಗಳು ಕಾರ್ಯಕರ್ಮಗಳ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕೊರಗರ ಸಾಂಪ್ರದಾಯಿಕ ಡೋಲು ಹಾಗೂ ಕೊಳಲು ವಾದನದೊಂದಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರಾದ ಹೆಚ್. ಆಂಜನೇಯರವರನ್ನು ಸ್ವಾಗತಿಸಲಾಯಿತು.
ಸಚಿವ ಆಂಜನೇಯ ವಾಸ್ತವ್ಯ ಹೂಡಲಿರುವ ಬೇಬಿ ಅವರ ಮನೆ ಸೇರಿದಂತೆ ಪರಿಸರದ ಒಟ್ಟು 14 ಮನೆಗಳವರು ಸಂಭ್ರಮದಿಂದ ಪಾಲ್ಗೊಂಡು ಆತಿಥ್ಯ ನೀಡಿದರು. ಸಂಪೂರ್ಣ ಹಾಡಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಹಾಡಿಯ ಸ್ವಚ್ಛತೆ ಪ್ರಮುಖ ಅಂಶವಾಗಿದ್ದು, ಊಟೋಪಾಚಾರದ ವ್ಯವಸ್ಥೆಯಲ್ಲೂ ಅಚ್ಚುಕಟ್ಟನ್ನು ಕಾಪಾಡಿಕೊಳ್ಳಲಾಗಿತ್ತು. ಸ್ಥಳಾಂತರಿಸಬಹುದಾದ ಸಾಮೂಹಿಕ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ,ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಉಪಮೇಯರ್ ಸುಮಿತ್ರ ಕರಿಯ, ಪಡುಪಣಂಬೂರು ಗ್ರಾ.ಪಂ ಅಧ್ಯಕ ಮೋಹನ್ ದಾಸ್, ಬಂಟ್ಚಾಳ ನಗರದಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿಯುಸಿ ರಾಡಿಗ್ರಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿಧ್ಯಾ, ಮೊದಲಾದವರು ಉಪಸ್ಥಿತರಿದ್ದರು..