ಕನ್ನಡ ವಾರ್ತೆಗಳು

ಶ್ರೀ ರಾಘವೇಶ್ವರ ಸ್ವಾಮೀಜಿ ದೋಷಮುಕ್ತಗೊಂಡಿದ್ದು ಹೇಗೆ ಗೊತ್ತಾ?

Pinterest LinkedIn Tumblr

ಹೊಸನಗರ ತಾಲೂಕಿನ ಹನಿಯದ ಶ್ರೀ ರಾಮಚಂದ್ರಾಪುರ ಮಠದ ಹಾಗೂ ಉ.ಕ. ಜಿಲ್ಲೆಯ ಶ್ರೀ ಸಂಸ್ಥಾನ ಗೋಕರ್ಣದ ಮಠಾಧಿಪತಿಯಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀ ಸ್ವಾಮೀಜಿಯವರ ಮೇಲೆ ಬೆಂಗಳೂರಿನ ಸಿ.ಐ.ಡಿ. ಯವರು ಭಾರತೀಯ ದಂಡ ಸಂಹಿತೆಯ ಕಲಂ 376 (2) (ಎಫ್) ಹಾಗೂ (ಎನ್) ನಂತೆ ಅತ್ಯಾಚಾರ ಹಾಗೂ ಕಲಂ 506 (508 ? ) ರಂತೆ ಆರೋಪಿಸಿ ಸಲ್ಲಿಸಿದ ಪ್ರಕರಣವು ವಿಚಾರಣೆ ಇಲ್ಲದೇ ಮುಕ್ತಾಯವಾಗಿದೆ. ಬೆಂಗಳೂರಿನ ವಿಶೇಷ ನ್ಯಾಯಾಲಯ (ಸಿ.ಸಿ.ಎಚ್. 54) ರ ನಗರ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಧೀಶ ಶ್ರೀ ಜಿ.ಬಿ. ಮುದಿಗೌಡರ್ ತಾರೀಕು 31-03-2016 ರಂದು ಆದೇಶ ನೀಡಿ ಸ್ವಾಮೀಜಿಯನ್ನು ಪ್ರಕರಣದಲ್ಲಿ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 227 ರ ಕೆಳಗೆ ಡಿಸ್‌ಚಾರ್ಜ್ ಮಾಡುವ ಮೂಲಕ ದೋಷಮುಕ್ತಗೊಳಿಸಿದ್ದಾರೆ. ಸದ್ರಿ ತೀರ್ಪಿನಲ್ಲಿ ಪ್ರಸ್ತಾವಿಸಿದ ವಿವರಗಳು ಆಸಕ್ತಿದಾಯಕವಾಗಿದ್ದು, ಈ ಕೆಳಗಿನಂತಿದೆ.

23-1445584765-ragaveshwarashri

1. ಬೆಂಗಳೂರಿನ ಗಿರಿನಗರದ ಮಠದಲ್ಲಿ ತಾರೀಕು 26-06-2014 ರಂದು ರಾತ್ರಿ 9.00 ರಿಂದ 9.15 ಗಂಟೆಯ ನಡುವೆ ಹಾಗೂ 27-06-2014 ರಂದು ರಾತ್ರಿ 8.30 ರಿಂದ 9.45 ಗಂಟೆಯ ನಡುವೆ ಸ್ವಾಮೀಜಿಯವರು ಪ್ರೇಮಲತಾ ಶಾಸ್ತ್ರಿಯವರ ಶೀಲಹರಣ ಮಾಡಿರುತ್ತಾರೆ ಎಂಬ ಆರೋಪವಿರುತ್ತದೆ. ಈ ವಿಚಾರವನ್ನು ರುಜುವಾತು ಮಾಡಲು ಅಭಿಯೋಜನೆ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 164 ರಡಿ ನ್ಯಾಯಾಲಯದಲ್ಲಿ ದಾಖಲಾದ ದೂರುದಾರ್ತಿಯ ಹೇಳಿಕೆಗಳು, ದಂಡ ಪ್ರಕ್ರಿಯಾ ಸಂಹಿತೆಯ ಕಲಂ 161 ರಡಿ ದಾಖಲಾದ ಸಾಕ್ಷಿದಾರರ ಹೇಳಿಕೆಗಳು, ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಪಾರೆನ್ಸಿಕ್ ಸಾಯನ್ಸ್ ಲ್ಯಾಬೋರೆಟರಿ)ಯ ರಕ್ತ ಡಿ.ಎನ್.ಎ. ವರದಿ ಹಾಗೂ ವೀರ್ಯದ ವಿಶ್ಲೇಷಣೆ ವರದಿಗಳನ್ನು ಅವಲಂಬಿಸಿದೆ. ಈ ದಾಖಲಾತಿಗಳನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಕೂಲಂಕುಶವಾಗಿ ವಿಶ್ಲೇಷಿಸಿದೆ.

2. ನ್ಯಾಯಾಲಯದ ಅಭಿಪ್ರಾಯದಂತೆ ಸ್ವಾಮೀಜಿಯು ಸಂತ್ರಸ್ತ ಮಹಿಳೆಯ ಜೊತೆ ಸಂಭೋಗ ಮಾಡಿದ್ದರೇ, ಮಹಿಳೆಯ ಮರ್ಮಾಂಗದಲ್ಲಿ ಸಹಜವಾಗಿ ಪುರುಷನ ವೀರ್ಯ ಹಾಗೂ ಸ್ತ್ರೀ ಅಂಡಾಣು ಒಟ್ಟಾಗಿ ಕಂಡು ಬರಬೇಕಿತ್ತು. ಈ ಪ್ರಕರಣದಲ್ಲಿ ಮಹಿಳೆಯ ಮರ್ಮಾಂಗದಲ್ಲಿ ಸ್ವಾಮೀಜಿಯ ವೀರ್ಯ ಕಂಡು ಬಂದಿಲ್ಲ. ಮಹಿಳೆಯ ಬಟ್ಟೆಯಲ್ಲಿ ವೀರ್ಯಕಣಗಳು ಕಂಡು ಬಂದರೇ ಅಭಿಯೋಜನೆಯವರು ಅತ್ಯಾಚಾರವನ್ನು ರುಜುವಾತು ಪಡಿಸಿದಂತಾಗಿಲ್ಲಾ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

3. ಸಾಮಾನ್ಯವಾಗಿ ದೈಹಿಕ ಮಿಲನವಾಗುವಾಗ ಮಹಿಳೆ ಮತ್ತು ಪುರುಷನ ನಡುವೆಯಾದ ದೈಹಿಕ ತಿಕ್ಕಾಟದಲ್ಲಿ ಇಬ್ಬರ ಬಾಹ್ಯ ಚರ್ಮದ ಸತ್ತ ಕಣಗಳು ನೆಲಕ್ಕೆ ಬೀಳಬೇಕು. ಆದರೆ ಪ್ರಸ್ತುತ ಪ್ರಕರಣದಲ್ಲಿ ಬಾಹ್ಯ ಚರ್ಮದ ಸತ್ತ ಕಣಗಳು ಯಾರದೆಂದು ತಿಳಿದ್ದಿಲ್ಲ. ಆ ಬಗ್ಗೆ ಸೂಕ್ತ ಪರೀಕ್ಷೆಗಳಾಗಿಲ್ಲ.

4. 2011 ರಿಂದ 27-06-2014 ರ ನಾಲ್ಕು ವರ್ಷದ ಅವಧಿಯಲ್ಲಿ ಸ್ವಾಮೀಜಿಯು 169 ಬಾರಿ ತನ್ನನ್ನು ಸಂಭೋಗಿಸಿದ್ದಾರೆಂದು ಮಹಿಳೆಯು ಆರೋಪಿಸಿದ್ದಾಳೆ. ಮಹಿಳೆಯು ಖ್ಯಾತ ಗಾಯಕಿಯಾಗಿದ್ದು, ದೇಶ ವಿದೇಶಗಳಲ್ಲಿ ಪ್ರಯಾಣ ಮಾಡಿರುತ್ತಾಳೆ. ಆಕೆಯು ಬೆಂಗಳೂರಿನ ನಿವಾಸಿಯಾಗಿದ್ದು, ವಿದ್ಯಾವಂತಳಾಗಿದ್ದಾಳೆ. ಸ್ವಾಮೀಜಿ ಅವರಾಗಿಯೇ ಆಕೆಯನ್ನು ಆಹ್ವಾನಿಸಿಲ್ಲ. ಯಾವುದೇ ವಸತಿ ಗೃಹ, ವಿಹಾರ ಕೇಂದ್ರಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಸಂಭೋಗಿಸಿಲ್ಲ. ಆಕೆಯೇ ಪದೇ ಪದೇ ಸ್ವಾಮೀಜಿಯನ್ನು ಭೇಟಿಯಾಗುತ್ತಿದ್ದಳು. ಒಮ್ಮೆ ಸ್ವಾಮೀಜಿಯು ತನ್ನನ್ನು ಬಳಸಿಕೊಂಡರು, ಅವರು ಒಳ್ಳೆಯವರಲ್ಲಾ ಎಂದು ಅರಿವಾದ ನಂತರ ಪದೇ, ಪದೇ ಅವರನ್ನು ಭೇಟಿಯಾಗುವ ಮಹಿಳೆಯ ವರ್ತನೆಯನ್ನು ನ್ಯಾಯಾಲಯ ಸಂದೇಹಾರ್ಹ ವರ್ತನೆಯಾಗಿ ಪರಿಗಣಿಸಿದೆ.

5. ದೂರುದಾರ್ತಿಯ ವರ್ತನೆಯನ್ನು ನ್ಯಾಯಾಲಯ ಕಟುವಾಗಿ ಟೀಕಿಸಿದೆ. ಆಕೆಯು 51 ವರ್ಷ ವಯಸ್ಸಿನವಳಾಗಿದ್ದು, ಜೀನ್ಸ್ ಪ್ಯಾಂಟ ಹಾಗೂ ಶರ್ಟ ಧರಿಸುವವಳಾಗಿದ್ದಾಳೆ. ಆಕೆಗೆ 22 ಹಾಗೂ 19 ವರ್ಷದ ಇಬ್ಬರು ಮಗಳಂದಿರಿದ್ದಾರೆ. ಸ್ವಾಮೀಜಿಯು ಸಂಸ್ಕೃತ ಪಂಡಿತರಾಗಿದ್ದು, ಸಂಸ್ಕಾರವಂತರಾಗಿದ್ದಾರೆ. ಹಿಂದುತ್ವ ಹಾಗೂ ಗೋವಿನ ರಕ್ಷಣೆಗೆ ಪಣ ತೊಟ್ಟವರಾಗಿದ್ದಾರೆ. ಘಟನೆಯ ಕಾಲಕ್ಕೆ ಅವರ ವಯಸ್ಸು ಕೇವಲ 38. ದೂರುದಾರ್ತಿ ಹಾಗೂ ಸ್ವಾಮೀಜಿ ನಡುವೆ 14 ವರ್ಷದ ಅಂತರವಿದೆ. ಸ್ವಾಮೀಜಿ ಬ್ರಹ್ಮಚಾರಿ. ದೂರುದಾರ್ತಿ ಹಾಗೂ ಸ್ವಾಮೀಜಿಯ ನಡುವಿನ ಸಂಬಂಧ ತಾಯಿ ಮತ್ತು ಮಗನದ್ದು ಎನ್ನಬಹುದಾಗಿದೆ. ದೂರುದಾರ್ತಿಯು ರಾಮಕಥಾದಲ್ಲಿ ಗಾಯಕಿ. ರಾಮಕಥಾ ನಡೆಯುವ ಸಂದರ್ಭದಲ್ಲಿ ಹಾಗೂ ಅದರ ರಿಹರ್ಸಲ್ ಸಂದರ್ಭಗಳಲ್ಲಿ ಮಾತ್ರ ಸ್ವಾಮೀಜಿ ತನ್ನನ್ನು ಬಳಸಿಕೊಂಡಿದ್ದಾರೆ ಎಂದು ಗಾಯಕಿಯ ಹೇಳಿಕೆಯಾಗಿದೆ. ಆಕೆಯ ಪ್ರಕಾರವೇ ಸ್ವಾಮೀಜಿಯು ಅಕೆಯನ್ನು ಪದೇ, ಪದೇ ಬಳಸಿಕೊಂಡಿದ್ದರೂ, ಆಕೆಯು ಪ್ರತಿಭಟಿಸಿಲ್ಲ, ವಿರೋಧ ತೋರಿಲ್ಲ. ಅಕೆಯು ನಂತರ ಮನೆಗೆ ಹಿಂತಿರುಗಿ ಗಂಡನೊಂದಿಗೆ ದೈಹಿಕ ಸಂಪರ್ಕವನ್ನು ಮಾಮೂಲಾಗಿ ಹೊಂದಿರುತ್ತಾಳೆ. ಗಂಡನಿಗೆ ಯಾವ ವಿಚಾರ ತಿಳಿಸಿಲ್ಲ. ಈ ಎಲ್ಲಾ ವಿಚಾರಗಳು ಸಂದೇಹಾರ್ಹವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

6. ನ್ಯಾಯಾಲಯದ ತೀರ್ಪುಗಳಲ್ಲಿ ಸಾಹಿತ್ಯಕ್ಕೆ ಅವಕಾಶವಿಲ್ಲದಿದ್ದರೋ, ಈ ಪ್ರಕರಣದಲ್ಲಿ “ಸತಿ ಧರ್ಮದ ಮುಂದೆ ಯತಿ ಧರ್ಮ ನಗಣ್ಯ”ವೆಂದು ನ್ಯಾಯಾಲಯ ತಿಳಿಸಿದೆ. ಗಂಡನಿಗೆ ನಿಷ್ಟರಾಗಿರುವ ಪತ್ನಿಯು ಯಾವುದೇ ಸಂದರ್ಭದಲ್ಲಿ ಪರ ಪುರುಷನ ಸಂಪರ್ಕವನ್ನು ಮಾಡುವುದಿಲ್ಲ. ಈ ಪ್ರಕರಣದಲ್ಲಿ ಸ್ವಾಮೀಜಿಯು ಮಿಲನದ ಮೊದಲು ಹಾಗೂ ನಂತರ ಶ್ರೀರಾಮ ಮಂತ್ರ ಪಠಿಸಿ ತನ್ನನ್ನು ಸುಮ್ಮನಾಗಿಸುತ್ತಿದ್ದರು ಎಂದು ಮಹಿಳೆಯು ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಳು. ದೈವಿಕ ಅಸಂತುಷ್ಟತೆಗೆ ಹೆದರಿ ತಾನು ಸ್ವಾಮೀಜಿಗೆ ದೈಹಿಕವಾಗಿ ಶರಣಾಗುತ್ತಿದ್ದೆ ಎಂದು ಆಕೆ ತಿಳಿಸಿರುತ್ತಾಳೆ. ದೈವಿಕ ಭಾವನೆಯಿರುವ ಮಹಿಳೆ ಪರ ಪುರುಷನ ಸಂಪರ್ಕದಿಂದ ದೊರವಿರುತ್ತಾಳೆ. ದೂರುದಾರ್ತಿಯು ವಿವಿಧ ಅವಧಿಯಲ್ಲಿ 169 ಬಾರಿ ಸ್ವಾಮೀಜಿಯ ಜೊತೆ ಲೈಂಗಿಕ ಸಂಪರ್ಕದಲ್ಲಿ ತೊಡಗಿದರೇ ಅದು ಆಕೆಯ ಮರ್ಯಾದಾಹೀನ ನಡುವಳಿಕೆಯೇ ಹೊರತು ದೈವಿಕ ಶಾಪಕ್ಕೆ ಹೆದರಿ ಆದ ಶರಣಾಗತಿಯಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

7. ದೂರುದಾರ್ತಿಯು ಸ್ವಾಮೀಜಿಯ ವರ್ತನೆ ಬಗ್ಗೆ ಆಕೆಯ ಮಗಳಿಗೆ ತಿಳಿಸಿದ್ದರೂ ಕೂಡಾ, ವಿದ್ಯಾವಂತ ಮಗಳು ಸ್ವಾಮೀಜಿಯ ಬಳಿ ಮರಳಿ ಹೋಗದಂತೆ ತಾಯಿಯನ್ನು ತಡೆದಿಲ್ಲ.

8. ಸ್ವಾಮೀಜಿ ಫಿರ್ಯಾದುದಾರ್ತಿಯನ್ನು ಬಂಧನದಲ್ಲಿರಿಸಿ ೧೬೯ ಬಾರಿ ಸಂಭೋಗಿಸಿಲ್ಲ. ಆಕೆಗೆ ಮದುವೆಯಾಗುವ ಭರವಸೆ ನೀಡಿದ್ದಾನೆಂದು ಹೇಳುವ ಹಾಗೇ ಇಲ್ಲ. ಏಕೆಂದರೆ ಆಕೆ ವಿವಾಹಿತೆ. ದೂರುದಾರ್ತಿಯ ವರ್ತನೆಗೆ ಯಾವುದೇ ಸಮರ್ಥನೆಯೇ ಇಲ್ಲ. ಮನುಷ್ಯ ಸುಳ್ಳು ಹೇಳಬಹುದು. ಆದರೆ ಸಂದರ್ಭಗಳು ಸುಳ್ಳು ಹೇಳಲಾರದು ಎಂದು ನ್ಯಾಯಾಲಯ ತಿಳಿಸಿದೆ.

9. ಪೋಲೀಸರು ದಿನಾಂಕ 06-09-2014 ರಂದು ದೂರುದಾರ್ತಿಯ ಮನೆಯನ್ನು ಶೋಧನೆಗೆ ಒಳಪಡಿಸಿದಾಗ ಅತ್ಯಾಚಾರಕ್ಕೆ ಸಂಬಂಧಿಸಿದ ಯಾವ ವಸ್ತು ಸಿಕ್ಕಿರಲಿಲ್ಲ. ದಿನಾಂಕ 17-09-2014 ರಂದು ಫಿರ್ಯಾದುದಾರ್ತಿ ಹಾಗೂ ಅಕೆಯ ಗಂಡ ದಿನಾಕರ ಶಾಸ್ತ್ರಿ ಜೈಲಿನಿಂದ ಬಿಡುಗಡೆಯಾಗಿ ಬಂದು ಸಿ.ಐ.ಡಿ. ಪೋಲೀಸರ ಸಂಪರ್ಕಕ್ಕೆ ಬರುತ್ತಾರೆ. ಆಗ ಕೂಡಾ ಯಾವುದೇ ವಸ್ತುಗಳನ್ನು ಪೋಲೀಸರಿಗೆ ನೀಡುವುದಿಲ್ಲ. ದಿನಾಂಕ 18-09-2014 ಕಕೆ ಸೀರೆ, ಒಳ ಉಡುಪು, ಕೂದಲು ಇತ್ಯಾದಿ ವಸ್ತುಗಳು ಪೋಲೀಸರಿಗೆ ದೂರುದಾರ್ತಿಯ ಮನೆಯಲ್ಲಿ ಸಿಗುತ್ತದೆ. ಇದು ಹೇಗೆ ಸಾಧ್ಯವೆನ್ನುವುದು ನ್ಯಾಯಾಲಯದ ಪ್ರಶ್ನೆ.

10. ದೂರು ನೀಡುವಾಗ ಆದ ವಿಳಂಬ ಹಾಗೂ ಫಿರ್ಯಾದುದಾರ್ತಿಯ ಹೇಳಿಕೆಯನ್ನು ದಾಖಲಿಸಿದಾಗ ಆದ ವಿಳಂಬ ನ್ಯಾಯಾಲಯ ಗಮನಿಸಿದೆ. ಆ ಬಗ್ಗೆ ದೂರುದಾರ್ತಿ ನೀಡಿದ ಸಮರ್ಥನೆಯು ತರ್ಕಶಾಸ್ತ್ರ, ಸಾಮಾನ್ಯ ಜ್ಞಾನಕ್ಕೆ ವ್ಯತಿರಿಕ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

11. ಕಾಮವು ಅತ್ಯಾಚಾರ, ಲೀವಿಂಗ್ ಇನ್ ರಿಲೇಷನ್‌ಶಿಫ್, ವ್ಯಭಿಚಾರ, ವೇಶ್ಯವಾಟಿಕೆ, ಅಕ್ರಮ ಸಂಬಂಧ ಇವುಗಳೆಲೆಲ್ಲಾ ಇರುತ್ತದೆ. ಕಾಮಕ್ಕೆ ಯಾವ ಹೆಸರನ್ನ ನೀಡಬೇಕೆಂದು ತಿಳಿಯಬೇಕಾದರೆ ವ್ಯಕ್ತಿಗಳ ನಡುವಿನ ಸಂಬಂಧ ಹಾಗೂ ಸಂದರ್ಭ ನೋಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

12. ಮಹಿಳೆಯ ಬಟ್ಟೆಯಲ್ಲಿ ಚಳಿಗಾಲದಲ್ಲಿ ವೀರ್ಯಾಣುಗಳು 24 ಗಂಟೆಗಳ ನಂತರ ಉಳಿಯುವುದು ಕಷ್ಟ ಸಾಧ್ಯ. ಈ ಪ್ರಕರಣದಲ್ಲಿ ಮಹಿಳೆಯು ದೈಹಿಕ ಮಿಲನದ ನಂತರ ಸಂಬಂಧಿತ ಬಟ್ಟೆಯನ್ನು ಕಸದ ಬುಟ್ಟಿಯಲ್ಲಿ ಹಾಕಿರುವುದಾಗಿ ತಿಳಿಸಿರುತ್ತಾಳೆ. ಸದ್ರಿ ಬಟ್ಟೆಗಳನ್ನು ದೈಹಿಕ ಮಿಲನವಾದ 82 ದಿನಗಳ ನಂತರ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಸದ್ರಿ ಬಟ್ಟೆಗಳು ಕಸದ ಬುಟ್ಟಿಯಂತಹ ಅಸುರಕ್ಷಿತ ಸ್ಥಳದಿಂದ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಇರುವೆಗಳು ಬಟ್ಟೆಯ ಬಿಳಿಯ ಭಾಗವನ್ನು ತಿಂದಿರುವ ಸಾಧ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳು ಬಟ್ಟೆಯಲ್ಲಿ ವೀರ್ಯದ ಅಂಶವಿದೆ ಎಂದು ಕಂಡುಕೊಳ್ಳುವುದು ಸಾಧ್ಯವಿಲ್ಲವೆಂದು ನ್ಯಾಯಾಲಯ ತಿಳಿಸಿದೆ.

13. ವಿಧಿ ವಿಜ್ಞಾನ ಪ್ರಯೋಗಾಲಯದವರು ಮೂರು ಪ್ರತ್ಯೇಕ ವರದಿಗಳನ್ನು ನೀಡಿದ್ದಾರೆ. ಹಿಂದಿನ ವರದಿಯಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಲು ಮುಂದಿನ ವರದಿಯನ್ನು ನೀಡಲಾಗಿದೆ. ಈ ವರದಿಗಳ ಮಧ್ಯ ಹೊಸ ಪರೀಕ್ಷೆಯನ್ನು ಮಾಡಲಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯು ಸಿ.ಐ.ಡಿ. ಇಲಾಖೆಯೊಂದಿಗೆ ಸ್ವಾಮೀಜಿಯನ್ನು ಬಲಿ ಪಶು ಮಾಡಲು ಕೈ ಜೋಡಿಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯವು ನೀಡಿರುವ ವರದಿಗಳು ನಂಬಲಾರ್ಹವಲ್ಲಾ ಎಂದು ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ.

14. ಬೆಂಗಳೂರಿನ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯ ಸ್ವತಂತ್ರ ಸಂಸ್ಥೆಯಾಗಿರದೇ, ಅದರ ನಿರ್ದೇಶಕ ಪೋಲಿಸ್ ಇಲಾಖೆಗೆ ಸೇರಿದವರು ಎನ್ನುವ ಆರೋಪಿ ವಕೀಲರ ವಾದವನ್ನು ನ್ಯಾಯಾಲಯ ಗಮನಿಸಿದೆ.

15. ಸಿ.ಐ.ಡಿ. ಸಲ್ಲಿಸಿದ ದೋಷಾರೋಪಣಾ ಪಟ್ಟಿಯನ್ನು 100 ಪ್ರತಿ ಶತ ನಿಜವೆಂದು ಭಾವಿಸಿದರೂ ಸ್ವಾಮೀಜಿಯವರು ಮಹಿಳೆಯನ್ನು ಶೀಲಹರಣ ಮಾಡಿದರು ಎನ್ನಲಾಗದು. ಮಹಿಳೆಯು ತನ್ನ ನೆನಪಿನ ಬಲದಲ್ಲಿ ಸ್ವಾಮೀಜಿಯು 169 ಬಾರಿ ತನ್ನ ಜೊತೆ ಲೈಂಗಿಕ ಸಂಪರ್ಕ ಮಾಡಿದ್ದರು ಎನ್ನುತ್ತಾಳೆ. ಅವುಗಳಲ್ಲಿ ದಿನಾಂಕ 25-06-2014 ಹಾಗೂ 27-06-2014 ರ ಎರಡು ಪ್ರಕರಣವನ್ನು ಬೇರ್ಪಡಿಸಿ ಅವುಗಳು ಶೀಲಹರಣವೇ ಅಥವಾ ಅಲ್ಲವೇ ಎಂದು ತೀರ್ಮಾನಿಸಲಾಗುವುದಿಲ್ಲ. ಹೆಚ್ಚೆಂದರೇ ಆಗಿದೇ ಎನ್ನಲಾದ ಲೈಂಗಿಕ ಸಂಪರ್ಕಗಳು ಒಪ್ಪಿಗೆಯಿಂದ ಆದ ಅನೈತಿಕ ಸಂಬಂಧ ಎಂದಾಗಬಹುದು. ಅತ್ಯಾಚಾರ ಅಪರಾಧದ ಘಟಕಾಂಶಗಳು ಪ್ರಸ್ತುತ ಪ್ರಕರಣದಲ್ಲಿ ಎಂದು ನ್ಯಾಯಾಲಯ ತಿಳಿಸಿದೆ.

16. ದೂರುದಾರ್ತಿಯು ಹೇಳಿಕೆಯನ್ನು ಪದೇ, ಪದೇ ಬದಲಾಯಿಸಿದ್ದಾಳೆ. ಆಕೆಯು ಕಾರವಾರ ಜೈಲಿನಲ್ಲಿರುವಾಗ ಬೆಂಗಳೂರಿನ ಗಿರಿ ನಗರದ ಪೋಲೀಸರು ಆಕೆಯನ್ನು ವಿಚಾರಿಸಿದ್ದಸರು. ಆಕೆಯು 26-06-2014 ರಂದು ಮಧ್ಯಾಹ್ನ 3.15 ರಿಂದ 3.30 ರ ನಡುವೆ ಅತ್ಯಾಚಾರವಾಗಿದೆ ಎಂದು ಅವರ ಮುಂದೆ ಹೇಳಿಕೆ ನೀಡಿದ್ದಳು. ಈ ಹೇಳಿಕೆಯು ಆಕೆಯು ನಂತರ ಸೂಚಿಸಿದ ಅಪರಾಧ ಘಟಿಸಿದ ಸಮಯಕ್ಕೆ ವಿರೋಧವಾಗಿತ್ತು. ಮಂಗಳೂರಿನಲ್ಲಿ ‘ರಾಮಕಥಾ’ ನಡೆಯುತ್ತಿದ್ದಾಗ ಸ್ವಾಮೀಜಿ ದಿನ, ದಿನ ತನ್ನನ್ನು ಬಳಸಿಕೊಂಡಿದ್ದಾರೆಂದು ಕೂಡಾ ಹೇಳಿದ ಮಹಿಳೆ, ನಂತರ ನಾನು ರಾಮಕಥಾ ಸಂದರ್ಭ ಮಂಗಳೂರಿಗೆ ಹೋಗಿಯೇ ಇಲ್ಲಾ ಎಂದಿದ್ದಳು. ಆಕೆಯ ಹೇಳಿಕೆಗಳು ನಂಬಲಾರ್ಹವಲ್ಲಾವೆಂದು ನ್ಯಾಯಾಲಯ ತಿಳಿಸಿದೆ.

17. ದೂರುದಾರ್ತಿಯು ಸ್ವಯಂ ಸ್ಫೂತಿಯಿಂದ ಆರು ತಿಂಗಳು ಶ್ರೀ ಮಠದ ಸಂಪರ್ಕದಿಂದ ದೂರವಿದ್ದು, ಜನವರಿ 2014 ರಂದು ತಾನಾಗಿಯೇ ಏಕಾ‌ಏಕೀ ಮಠಕ್ಕೆ ಹೋಗುವ ಅವಶ್ಯಕತೆ ಏನಿತ್ತು? ದಿನಾಂಕ 27-06-2014 ರಂದು ಮಠಕ್ಕೆ ಹೋಗುವಾಗ ದೂರುದಾರ್ತಿಯು ಆಕೆಯ ತೋಟದಲ್ಲಿ ಬೆಳೆಸಿದ ಹಣ್ಣನ್ನು ಸ್ವಾಮೀಜಿಗೆ ಅರ್ಪಿಸಲು ಏಕೆ ಕೊಂಡು ಹೋದಳು? ದೂರುದಾರ್ತಿ ಹಾಗೂ ಅವಳ ಮಗಳು ಸ್ವಾಮೀಜಿಯನ್ನು ಗೌರವದಿಂದ ‘ಗುರುದೇವ’ ಎಂದು ಏಕೆ ಕರೆಯುತ್ತಿದ್ದರು? ಈ ಎಲ್ಲಾ ಅಸ್ವಾಭಾವಿಕ ಅಂಶಗಳನ್ನು ನ್ಯಾಯಾಲಯ ಗಮನಿಸಿದೆ. ಆಕೆಯು ಅನುಕೂಲತೆಗೆ ತಕ್ಕಂತೆ ಹೇಳಿಕೆಗಳನ್ನು ಬದಲಾಯಿಸುತ್ತಾಳೆ. ಕಾನೂನಿಗನುಸಾರವಾಗಿ ನೊಂದ ಮಹಿಳೆ ಎಷ್ಟು ಬಾರಿ ಹೇಳಿಕೆಗಳನ್ನು ನೀಡಬಹುದಾದರು, ಅವುಗಳಲ್ಲಿ ಸಮಾನ ವಿಚಾರ, ಸತ್ಯ ಹಾಗೂ ನಿರಂತರತೆ ಇರಬೇಕೆನ್ನುವುದು ನ್ಯಾಯಾಲಯ ಗಮನಿಸಿದೆ.

18. ದೂರುದಾರ್ತಿಯು ಪದೇ, ಪದೇ ಸ್ವಾಮೀಜಿಯವರಿಗೆ ವಾಟ್ಸಪ್, ಇ-ಮೇಲ್ ಸಂದೇಶಗಳನ್ನು ಮಾಡಿ ಆಶೀರ್ವಾದ ನೀಡುವಂತೆ ಕೋರುತ್ತಿದ್ದಳು. ಆಶೀರ್ವಾದವೆಂದರೇ ಹಣವಾಗಿರಬಹುದೆಂದು ನ್ಯಾಯಾಧೀಶರು ತಿಳಿಸಿದ್ದಾರೆ. ದೂರುದಾರ್ತಿಯು ಹಣ ಪಡೆಯುವ ಅಥವಾ ಸ್ವಾಮೀಜಿಯವರನ್ನು ಪೀಠದಿಂದ ಕೆಳಗಿಳಿಸುವ ಸಂಚು ಮಾಡಿರಬಹುದೆಂದು ನ್ಯಾಯಾಲಯ ಸಂಶಯ ವ್ಯಕ್ತಪಡಿಸಿದೆ. ದೂರುದಾರ್ತಿಯು 3 ಕೋಟಿ ಹಣವನ್ನು ಕೇಳಿದಾಗಿ ಆರೋಪ ಇತ್ತು.

19. ದೂರುದಾರ್ತಿಯು ಹೊನ್ನಾವರ ಠಾಣೆಯಲ್ಲಿ ಮಠದ ಬಿ.ಆರ್. ಚಂದ್ರಶೇಖರ ನೀಡಿದ ವಂಚನೆ ಪ್ರಕರಣದಲ್ಲಿ ತನ್ನ ಗಂಡನೊಂದಿಗೆ ಆರೋಪಿಯಾಗಿದ್ದು, ಸದ್ರಿ ಪ್ರಕರಣದಲ್ಲಿ ಆಕೆಯು ಸ್ವಾಮೀಜಿ ವಿರುದ್ಧ ಅಪೂರ್ಣವಾದ ದೂರನ್ನು ತಾರೀಕು 27-08-2014 ರಲ್ಲಿ ಹೊನ್ನಾವರದ ನ್ಯಾಯಾಲಯದಲ್ಲಿ ನೀಡಿರುವುದು ನ್ಯಾಯಾಲಯ ಗಮನಿಸಿದೆ. ಬೆಂಗಳೂರಿನ ಆರಕ್ಷಕ ಠಾಣೆಯಲ್ಲಿ ದೂರುದಾರ್ತಿಯ ಮಗಳು ಅಂಶುಮತಿ ನೀಡಿದ ಫಿರ್ಯಾದು ಮಗಳ ಸ್ವಂತ ಅನುಭವದ ಮೇಲೆ ನೀಡಲಾದ ಫಿರ್ಯಾದು ಅಲ್ಲಾ ಎಂದು ನ್ಯಾಯಾಲಯ ತಿಳಿಸಿದೆ.

20. ದೂರುದಾರ್ತಿಯು ಐ-ಪ್ಯಾಡ, ಐ-ಫೋನ್, ಕಂಪ್ಯೂಟರ್ ಹಾಗೂ ಇ-ಮೈಲ್‌ನಲ್ಲಿ ಸಂಭಾಷಣೆ ಮಾಡಿದ್ದು ಈ ಪ್ರಕರಣ ದಾಖಲಿಸುವ ಬಗ್ಗೆ ಒಳಸಂಚು ನಡೆಸಿದ್ದಾರೆಂದು ನ್ಯಾಯಾಲಯ ತಿಳಿಸಿದೆ. ದೂರುದಾರ್ತಿ ಮತ್ತು ಆಕೆಯ ಗಂಡ ದಿವಾಕರ ಶಾಸ್ತ್ರಿ ಇವರ ನಡುವೆ ನಡೆದ ಇ-ಮೈಲ್ ಸಂಭಾಷಣೆಯಂತು 25-06-2014 ರಂದು ಬೆಳಿಗ್ಗೆ ದಂಪತಿಗಳ ನಡುವೆ ‘ತಿಳಿವು’ ಎಂಬ ತಲೆಬರಹದ ಕೆಳಗೆ ನಡೆದಿತ್ತು. ದೂರು ದಾಖಲಿಸುವ ಪೂರ್ವದಲ್ಲಿ ದೂರುದಾರ್ತಿಯು ವಕೀಲರನ್ನು ಹಾಗೂ ಜ್ಯೋತಿಷಿಯೊಬ್ಬರನ್ನು ದೂರು ನೀಡುವ ಬಗ್ಗೆ ಸಂಪರ್ಕಿಸಿದ್ದಳು. ಆಕೆಯ ವರ್ತನೆ ಸಂಶಯಾಸ್ಪದವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ.

21. ದೂರುದಾರ್ತಿಯು ಅಕೆಯನ್ನು 27-06-2014 ರಂದು ರಾತ್ರಿ 8.30 ರಿಂದ 9.45 ರ ನಡುವೆ ಶೀಲಹರಣ ಮಾಡಲಾಗಿದೆ ಎನ್ನುತ್ತಾಳೆ. ಮಾತ್ರವಲ್ಲದೇ ಪ್ರವೀಣ ಡಿ. ರಾವ್ ಎನ್ನುವವರ ದೂರವಾಣಿ ಕರೆ ಬಂದ ನಂತರ ಶೀಲಹರಣವಾಗಿದೆ ಎನ್ನುತ್ತಾಳೆ. ಪ್ರವೀಣ ಡಿ. ರಾವ್ ರವರು ರಾತ್ರಿ 8.58 ಗಂಟೆಗೆ ಕರೆ ಮಾಡಿ ಗಂಟೆ 9.07 ರ ತನಕ ಮಾಡಿದ್ದಾರೆ. ಸ್ವಾಮೀಜಿಯವರು ರಾತ್ರಿ 9.00 ರಿಂದ 9.30 ರ ತನಕ ರಾಮಕಥಾ ರಿಹರ್ಸಲ್ ಅನ್ನು ಇತರ ಕಲಾವಿದರ ಜೊತೆ ಮಾಡುತ್ತಿದ್ದರು. ಕರೆಗಳ ವಿವರದ ರಿಜಿಸ್ಟರ್ (ಸಿ.ಡಿ.ಆರ್.) ನೋಡಿದಾಗ ದೂರುದಾರ್ತಿ ರಾತ್ರಿ 8.15 ಗಂಟೆಯಿಂದ ರಾತ್ರಿ 8.57 ರ ತನಕ ಮಾತ್ರ ಗಿರಿನಗರದ ಮಠದಲ್ಲಿ ಇದ್ದಿದಳು. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯು ಆಕೆಯನ್ನು ಗಿರಿನಗರ ಮಠದಲ್ಲಿ ಅತ್ಯಾಚಾರ ಮಾಡಲು ಅಸಾಧ್ಯವೆಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಆ ಸಂದರ್ಭದಲ್ಲಿ ದೂರುದಾರ್ತಿಯ ಟವರ್ ಲೋಕೇಶನ ಬೆಂಗಳೂರಿನ ಕಾಳಸಂದ್ರ ತೋರಿಸುತ್ತಿತ್ತು.

22. ಮಹಿಳೆಯ ಒಳ ಉಡುಪಿನಲ್ಲಿದ್ದ ವೀರ್ಯದ ಕಲೆಯಲ್ಲಿ ಹಾಗೂ ಕೂದಲಿನಲ್ಲಿ ದೊರೆತ ಡಿ.ಎನ್.ಎ. ಗಳು ಇಬ್ಬರೂ ಪುರುಷರದ್ದಾಗಿದೆ. ದೂರುದಾರ್ತಿಯ ಮೇಲೆ ಸ್ವಾಮೀಜಿ ಮಾತ್ರ ಅತ್ಯಾಚಾರ ಮಾಡಿದ ಆರೋಪ ಇರುವಾಗ, ಇಬ್ಬರು ಪುರುಷರ ಡಿ.ಎನ್.ಎ. ಪೊಪೈಲ್ ಹೇಗೆ ಸಿಗಲು ಸಾಧ್ಯ. ಸುಳ್ಳು ಸಾಕ್ಷ್ಯ ತಯಾರಿಸುವ ಭರದಲ್ಲಿ ಫಿರ್ಯಾದುದಾರ್ತಿಯೇ ಯಡವಟ್ಟು ಮಾಡಿಕೊಂಡು, ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುತ್ತಾಳೆ ಎಂದು ನ್ಯಾಯಾಲಯ ತಿಳಿಸಿದೆ.

23. ಈ ಹಿನ್ನೆಲೆಯಲ್ಲಿ ದೋಷಾರೋಪ ರಚಿಸಿ, ಸಾಕ್ಷಿದಾರರನ್ನು ಕರೆಯಿಸಿ, ಸುದೀರ್ಘ ವಿಚಾರಣೆ ಮಾಡಿ, ವಾದವನ್ನು ಆಲಿಸಿ ತೀರ್ಪು ನೀಡುವ ಅಗತ್ಯವಿಲ್ಲ. ಹಾಗೇ ಮಾಡಿದರೇ ಸ್ವಾಮೀಜಿಗೆ ಕಿರುಕುಳ, ಮುಜುಗರ ಹಾಗೂ ಅನಗತ್ಯ ತೊಂದರೆಗಳಾಗುತ್ತದೆ. ದೂರುದಾರ್ತಿಯು ಹಣದ ಆಸೆಗೆ ಸುಳ್ಳು ದೂರನ್ನು ನೀಡಿರುತ್ತಾಳೆ. ಪ್ರಕರಣವು ವಿಚಾರಣೆಗೆ ಯೋಗ್ಯವಿಲ್ಲ. ಆರೋಪಿಯ ವಿರುದ್ಧ ಚಾರ್ಜಸ್ ರಚಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು, ವಿಚಾರಣೆ ನಡೆಸುವ ಮುನ್ನವೇ ಸ್ವಾಮೀಜಿಯನ್ನು ದೋಷಮುಕ್ತಗೊಳಿಸಿದೆ. ಹೀಗೇ ರಾಷ್ಟ್ರದಲ್ಲಿ ಸಂಚಲನ ಮೂಡಿಸಿದ ಪ್ರಕರಣ ಅಂತ್ಯ ಕಂಡಿದೆ.

ವಿಶ್ಲೇಷಣೆ:

Ravikiran Murdeshwar Advocate

ರವಿಕಿರಣ್ ಮುರ್ಡೇಶ್ವರ
ನ್ಯಾಯವಾದಿ, ಕುಂದಾಪುರ
ಮೊ. 9880774449

Write A Comment