ಕನ್ನಡ ವಾರ್ತೆಗಳು

ಪತ್ನಿಯ ಕಡಿದು ಕೊಲೆ : ಗುಂಡಿ ತೋಡಿ ಮಣ್ಣು ಮಾಡಲು ಯತ್ನ.

Pinterest LinkedIn Tumblr

puttur_murder_case

ಪುತ್ತೂರು,ಏ.15 : ತಾಲೂಕಿನ ಸರ್ವೆ ಗ್ರಾಮದ ಬೈರಗುರಿ ಕಾಲೋನಿಯ ನಿವಾಸಿ ವಿಜಯ(38) ಎಂಬವರ ಪತ್ನಿ ಭಾಗೀರಥಿ (31) ತನ್ನ ಪತಿಯಿಂದಲೇ ಕೊಲೆಯಾಗಿದ್ದಾರೆ. ಕುಡಿದ ಮತ್ತಿನಲ್ಲಿ ಪತ್ನಿಯ ಶೀಲ ಶಂಕಿಸಿದ ಆರೋಪಿ ವಿಜಯ ಆಕೆಯ ಕುತ್ತಿಗೆಗೆ ಕತ್ತಿಯಿಂದ ಕಡಿದು ಹಲ್ಲೆಗೈದಿದ್ದಾನೆ. ಮಂಗಳವಾರ ರಾತ್ರಿ ಕೊಲೆ ಸಂಭವಿಸಿದ್ದರೂ ಬುಧವಾರ ತಡರಾತ್ರಿಯ ಸುಮಾರಿಗೆ ಬೆಳಕಿಗೆ ಬಂದಿದ್ದು, ಗುರುವಾರ ಪ್ರಕರಣ ದಾಖಲಾಗಿದೆ.

ಬೈರಗುರಿ ಕಾಲೋನಿಯ ನಿವಾಸಿ ವಿಜಯ ಮತ್ತು ಭಾಗೀರತಿ ದಂಪತಿ ಮನೆಯಲ್ಲಿ ಇಬ್ಬರೇ ವಾಸವಿದ್ದು, ಇಬ್ಬರೂ ಮದ್ಯವ್ಯಸನಿಗಳಾಗಿದ್ದು, ಪ್ರತೀ ದಿನ- ರಾತ್ರಿ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ದಂಪತಿಯ ಒಬ್ಬ ಪುತ್ರಿ ಮತ್ತು ಇಬ್ಬರು ಪುತ್ರರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಸಂಜಯ ನಗರದಲ್ಲಿರುವ ದೊಡ್ಡಮ್ಮನ ಮನೆಯಲ್ಲಿದ್ದರು.

ಎ. 12 ರ ರಾತ್ರಿ ಎಂದಿನಂತೆ ಪತಿ-ಪತ್ನಿಯ ನಡುವೆ ಮದ್ಯ ಸೇವನೆ ಬಳಿಕ ಗಲಾಟೆ ನಡೆದಿದೆ. ವಿಜಯ ಈ ಸಂದರ್ಭದಲ್ಲಿ ಕತ್ತಿಯಿಂದ ಪತ್ನಿ ಭಾಗೀರಥಿ ಅವರ ಕುತ್ತಿಗೆಗೆ ಕಡಿದು ಕೊಲೆ ಮಾಡಿದ್ದ ಬಳಿಕ ಮನೆಯಲ್ಲಿಯೇ ಆರೋಪಿ ವಿಜಯ ನಿದ್ದೆ ಮಾಡಿದ್ದ.

ಆರೋಪಿ ವಿಜಯ ಈ ಮರುದಿನ ಸಂಜೆಯ ತನಕವೂ ಕೊಲೆಯ ಬಗ್ಗೆ ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಮೃತದೇಹ ಕೊಳೆತು ದುರ್ವಾಸನೆ ಬೀರಲಾರಂಭಿಸಿತ್ತು. ಆರೋಪಿ ಮೃತದೇಹವನ್ನು ಮಣ್ಣು ಮಾಡುವ ಉದ್ದೇಶದಿಂದ ಬುಧವಾರ ಸಂಜೆ ವೇಳೆ ನೆರೆಮನೆಯವರಲ್ಲಿ ಹಾರೆ ಮತ್ತು ಪಿಕ್ಕಾಸು ಕೇಳಿದ್ದ. ರಾತ್ರಿ ವೇಳೆ ಹೊಂಡ ತೋಡಿ ಮೃತದೇಹವನ್ನು ಮಣ್ಣು ಮಾಡುವ ಯೋಜನೆ ಹಾಕಿಕೊಂಡಿದ್ದ. ಹಾರೆ ಮತ್ತು ಪಿಕ್ಕಾಸು ಯಾಕೆ ಎಂದು ನೆರೆಮನೆಯವರು ಗದರಿಸಿದ ಬಳಿಕವಷ್ಟೇ ಕೊಲೆ ನಡೆದ ಸಂಗತಿಯನ್ನು ಬಾಯ್ಬಿಟ್ಟಿದ್ದಾನೆ.

ತಕ್ಷಣ ಸ್ಥಳಿಯರೆಲ್ಲ ಸಂಪ್ಯ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ತಡ ರಾತ್ರಿಯ ವೇಳೆ ಆರೋಪಿ ವಿಜಯನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಎಎಸ್ಪಿ ರಿಷ್ಯಂತ್, ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಅನಿಲ್ ಎಸ್ ಕುಲಕರ್ಣಿ , ಸಂಪ್ಯ ಎಸೈ ರವಿ.ಬಿ.ಎಸ್, ಎಎಸೈ ಚೆಲುವಯ್ಯ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಕೊಲೆ ಕೃತ್ಯಕ್ಕೆ ಬಳಸಿದ ಕತ್ತಿಯನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ.

ಕೊಲೆ ಘಟನೆಯ ಕುರಿತು ಮೃತ ಭಾಗೀರಥಿ ಅವರ ಸಹೋದರ ವಸಂತ ಎಂಬವರು ಗುರುವಾರ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

Write A Comment