ಕನ್ನಡ ವಾರ್ತೆಗಳು

ಪುತ್ತೂರು ವಾರ್ಷಿಕ ಜಾತ್ರೆ : ಸುಡುಮದ್ದು ಪ್ರದರ್ಶನದಂದು ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ

Pinterest LinkedIn Tumblr

Puttur_jatra_crekers_1

ಪುತ್ತೂರು, ಏ.14 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಅಂಗವಾಗಿ ಏ.17ರಂದು ನಡೆಯುವ ಸುಡುಮದ್ದು ಪ್ರದರ್ಶನದ ವ್ಯವಸ್ಥೆಗಳನ್ನು ಸಹಾಯಕ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜನರಿಗೆ ಮನರಂಜನೆ ಕಡಿಮೆ ಆದರೂ ತೊಂದರೆಯಿಲ್ಲ. ಪ್ರಾಣ ತುಂಬಾ ಅಗತ್ಯ. ಸುಡುಮದ್ದು ಪ್ರದರ್ಶನದಂದು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಈ ಸಂದರ್ಭ ಹೇಳಿದರು.

ಸುಡುಮದ್ದು ಪ್ರದರ್ಶನದ ಜವಾಬ್ದಾರಿ ವಹಿಸಿಕೊಳ್ಳುವವರ ಬಗ್ಗೆ, ಆಂಬುಲೆನ್ಸ್, ಅಗ್ನಿಶಾಮಕ ದಳ, ಪೊಲೀಸ್ ಮುಂಜಾಗರೂಕತೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಸುಡುಮದ್ದು ಪ್ರದರ್ಶನದ ಜಾಗದಿಂದ ಕನಿಷ್ಠ ೫೦ ಮೀಟರ್ ದೂರದವರೆಗೆ ಜನರನ್ನು ನಿರ್ಬಂಧಿಸಬೇಕು. ಸಾಯಂಕಾಲ 4 ಗಂಟೆ ಬಳಿಕ ಸುಡುಮದ್ದು ಪ್ರದರ್ಶನದ ಜಾಗಕ್ಕೆ ಪ್ರವೇಶ ನಿಷೇಧಿಸಬೇಕು. ಹೆಚ್ಚು ಅಪಾಯ ಉಂಟು ಮಾಡುವ ಸುಡುಮದ್ದು ಬೇಡ ಎಂದು ಸೂಚಿಸಿದರು.

Puttur_jatra_crekers_2

ಬಳಿಕ ದೇವಸ್ಥಾನದ ಒಳಗಡೆ ನಡೆದ ಸಭೆಯಲ್ಲಿ ಜಾತ್ರಾ ಹಿನ್ನೆಲೆಯಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಹೊಂಡ ಬಿದ್ದ ರಸ್ತೆಗಳನ್ನು ತಕ್ಷಣ ಮುಚ್ಚುವಂತೆ ಹಾಗೂ ಶುಚಿತ್ವಕ್ಕೆ ಸಂಬಂಧಪಟ್ಟಂತೆ ಸೂಕ್ತ ಸಿಬ್ಬಂದಿ ನೇಮಕ ಮಾಡುವಂತೆ ನಗರಸಭೆಗೆ ಸೂಚಿಸಿದರು. ನೇಮಕಗೊಳಿಸಿದ ವ್ಯಕ್ತಿ ಯಾವುದೇ ಹೊತ್ತಿನಲ್ಲಿ ಶುಚಿತ್ವ ಕಾರ್ಯಕ್ಕೆ ಅಣಿಯಾಗಿರಬೇಕು. ಹಿಂದಿನ ಬಾರಿ ಧೂಳು ಕಡಿಮೆ ಮಾಡುವಲ್ಲಿ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳಿವೆ. ಈ ಬಾರಿ ಬೇಸಿಗೆ ಹೆಚ್ಚು, ಧೂಳೂ ಹೆಚ್ಚು. ಸೂಕ್ತ ವ್ಯಕ್ತಿಯನ್ನು ನೇಮಿಸಿ ಕೆಲಸ ನಡೆಸುವಂತೆ ನಿರ್ದೇಶಿಸಿದರು.

ಜಾತ್ರಾ ಗದ್ದೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಾಯ ತೆಗೆದುಕೊಂಡು ಔಷಧ ಕೇಂದ್ರ ತೆರೆಯಬೇಕು. ತುರ್ತು ಸಂದರ್ಭ ಯಾವುದೇ ರೀತಿಯ ಅಗತ್ಯ ಸಲಕರಣೆ ಇಲ್ಲ ಎಂದಾಗಬಾರದು. ಕೊನೆಕ್ಷಣದಲ್ಲಿ ಜಾರಿಕೊಂಡರೆ ಪರವಾನಗಿಗೆ ತೊಂದರೆಯಾಗಬಹುದು ಎಂದು ಸೂಚನೆ ನೀಡುವಂತೆ ತಾಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.

ಜಾತ್ರಾ ಸಂದರ್ಭ ಪುತ್ತೂರು ಆಸುಪಾಸು ಎಲ್ಲಿಯೂ ವಿದ್ಯುತ್ ಸಮಸ್ಯೆ ಕಾಡಬಾರದು. ಟ್ರಾನ್ಸ್‌ಫಾರ್ಮರ್ ಸಮಸ್ಯೆ, ಬೆಂಕಿ ಬಿತ್ತು ಎಂದು ನೆಪ ಹೇಳಬಾರದು. ಪ್ರತಿದಿನ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ವಿದ್ಯುತ್ ತೆಗೆಯುವವರ ಬಗ್ಗೆ ಕಣ್ಣಿಡಬೇಕು ಎಂದು ಎಚ್ಚರಿಸಿದರು.

ಸಂಚಾರ ದಟ್ಟಣೆ ಬಗ್ಗೆ ಪ್ರಸ್ತಾಪಿಸಿ, ವಾಹನಗಳು ಹಿಂದಿರುಗುವ ಮಾರ್ಗವನ್ನು ತೋರಿಸುವ ವ್ಯವಸ್ಥೆ ಮಾಡಬೇಕು ಎಂದರು. ಮಹೇಶ್ ಪ್ರಸಾದ್ ಮಾತನಾಡಿ, ಕೊಂಬೆಟ್ಟು ಕ್ರೀಡಾಂಗಣವನ್ನು ಪಾರ್ಕಿಂಗ್‌ಗೆ ಗೊತ್ತು ಪಡಿಸುವಂತೆ ಮನವಿ ಮಾಡಿದರು.

ಹೆಚ್ಚುವರಿ ಮೊಬೈಲ್ ಟವರ್, ಕುಡಿಯುವ ನೀರು, 10 ತಾತ್ಕಾಲಿಕ ಶೌಚಾಲಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸುವಂತೆ ಪ್ರತಿ ಸ್ಟಾಲ್‌ಗೂ ಸೂಚನೆ ನೀಡುವಂತೆ ತಿಳಿಸಲಾಯಿತು.

ಎಎಸ್ಪಿ ರಿಷ್ಯಂತ್, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಸಂಚಾರ ಠಾಣೆ ಎಸ್‌ಐ ನಾಗರಾಜ್ ಹಾಗೂ ಸುಡುಮದ್ದು ಗುತ್ತಿಗೆದಾರರು ಈ ವೇಳೆ ಉಪಸ್ಥಿತರಿದ್ದರು.

Write A Comment