ಕನ್ನಡ ವಾರ್ತೆಗಳು

ಮಲ್ಯಾಡಿ ಶ್ರೀ ಮಹಾದೇವಿ ನಂದಿಕೇಶ್ವರ ದೈವಸ್ಥಾನದಲ್ಲಿ ಕಳ್ಳರ ಕೈಚಳಕ: ಬೆಳ್ಳಿ ಪ್ರಭಾವಳಿಗೆ ಕನ್ನ

Pinterest LinkedIn Tumblr

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಸಮೀಪದ ಮಲ್ಯಾಡಿಯಲ್ಲಿರುವ ಶ್ರೀ ಮಹಾದೇವಿ ನಂದಿಕೇಶ್ವರ ಸಪರಿವಾರ ದೈವಸ್ಥಾನಕ್ಕೆ ತಡರಾತ್ರಿ ಕನ್ನಹಕಿದ ಕಳ್ಳರು ಎರಡುವರೆ ಕೇಜಿಗೂ ಅಧಿಕ ಬೆಳ್ಳಿ ಪ್ರಭಾವಳಿ ದೋಚಿ ಪರಾರಿಯಾದ ಘಟನೆ ನಡೆದಿದ್ದು ಸೋಮವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ತೆಕ್ಕಟ್ಟೆಯಿಂದ ಕೆದೂರು-ದಬ್ಬೆಕಟ್ಟೆ ರಸ್ತೆಯ ಮಾರ್ಗದಲ್ಲಿ ಸುಮಾರು 2-3 ಕಿ.ಮೀ. ಸಾಗಿದರೇ ಸಿಗುವುದೇ ಮಲ್ಯಾಡಿ. ಒಂದೆಡೆ ಪಕ್ಷಿಧಾಮವಾದರೇ ಇನ್ನೊಂದೆಡೆ ಸುತ್ತಲೂ ಮನೆಗಳಿರುವ ಜನನಿಬೀಡ ಸ್ಥಳದಲ್ಲಿ ರಸ್ತೆಯ ಸಮೀಪವೇ ಈ ದೈವಸ್ಥಾನವಿದೆ. ಭಾನುವಾರ ತಡರಾತ್ರಿ ದೇವಸ್ಥಾನದ ಎದುರಿನ ಕಬ್ಬಿಣದ ಗೇಟಿನ ಬೀಗ ಮುರಿದು ಒಳನುಸುಳಿದ ಕಳ್ಳರು ದೈವಸ್ಥಾನದ ಗರ್ಭಗುಡಿಯ ಬೀಗವನು ಮುರಿದು ಒಳಪ್ರವೇಶಿಸಿದ್ದಾರೆ. ಆಳೆತ್ತೆರದ ಮರದ ಕಾಷ್ಟಗಳ ದೈವದ ಮೂರ್ತಿಗಳ ಹಿಂದೆ ಸಾಗುವಾನಿ ಮರದ ಮೇಲ್ಭಾಗದಲ್ಲಿದ್ದ ಬೆಳ್ಳಿಯನ್ನು ನಾಜೂಕಾಗಿ ಬಿಡಿಸಿ ಕೊಂಡೊಯ್ದಿದ್ದಾರೆ. ಅಲ್ಲದೇ ದೈವಸ್ಥಾನದ ಹೊರಭಾಗದಲ್ಲಿದ್ದ ಒಂದು ಕ್ವಿಂಟಾಲಿಗೂ ಅಧಿಕ ತೂಕವಿದ್ದ ಕಾಣಿಕೆ ಹುಂಡಿಯನ್ನು ಒಡೆಯಲು ಯತ್ನಿಸಿದ್ದಾರೆ.

Malyadi_Temple_Theft (13) Malyadi_Temple_Theft (8) Malyadi_Temple_Theft (6) Malyadi_Temple_Theft (16) Malyadi_Temple_Theft (11) Malyadi_Temple_Theft (7) Malyadi_Temple_Theft (2) Malyadi_Temple_Theft (3) Malyadi_Temple_Theft (4) Malyadi_Temple_Theft (10) Malyadi_Temple_Theft (9) Malyadi_Temple_Theft (12) Malyadi_Temple_Theft (15) Malyadi_Temple_Theft (5) Malyadi_Temple_Theft (1) Malyadi_Temple_Theft (14)

ಹುಂಡಿ ಎಸೆದು ಹೋದ ಕಳ್ಳರು..
ಬಲವಾದ ಹುಂಡಿ ಒಡೆಯಲು ಅಸಾಧ್ಯವಾದ ಕಾರಣ ಹುಂಡಿ ಹಾಗೂ ಪ್ರಭಾವಳಿಗೆ ಅಳವಡಿಸಿದ್ದ ಸಾಗುವಾನಿ ಮರದ ತುಂಡುಗಳನ್ನು ದೈವಸ್ಥಾನದ ಅರ್ಧಕಿ.ಮೀ ದೂರದಲ್ಲಿರುವ ಪಕ್ಷಿಧಾಮದವ್ರೆಗೂ ಕೊಂಡೊಯ್ದ ಕಳ್ಳರು ಅವೆಲ್ಲವನ್ನೂ ಎಸೆದು ಹೋಗಿದ್ದಾರೆ. ಅಲ್ಲದೇ ದೊಡ್ಡ ಗಾತ್ರದ ಶಿಲೆಗಲ್ಲಿನ ಮೂಲಕ ಹುಂಡಿ ಒಡೆಯಲು ಪ್ರಯತ್ನಿಸಿದ ಕುರುಹುಗಳು ಸಿಕ್ಕಿದೆ. ಇನ್ನು ದೈವಸ್ಥಾನ ಒಳಪ್ರವೇಶಿಸುವ ಮುನ್ನ ಹೊರಗಿನ ಬಲ್ಬ್ ಒಡೆದು ಹಾಕಿದ್ದಾರೆ.

ಸಿ.ಸಿ.ಕ್ಯಾಮೆರಾ, ಅಲರಾಂ ಇರಲಿಲ್ಲ..
ಕಳೆದ ಒಂದೆರಡು ವರ್ಷಗಳಲ್ಲಿ ಉಡುಪಿ ಜಿಲ್ಲಾಧ್ಯಂತ ಹಲವು ದೇವಸ್ಥಾನ ಹಾಗೂ ದೈವಸ್ಥಾನಗಳ ಕಳವು ಪ್ರಕರಣಗಳು ನಡೆದಿದ್ದು ಧಾರ್ಮಿಕ ಕೇಂದ್ರಗಳಲ್ಲಿ ಅಲರಾಂ ಹಾಗೂ ಸಿ.ಸಿ. ಕ್ಯಾಮೆರಾ ಅಳವಡಿಸುವಂತೆ ಪೊಲೀಸರು ಹಾಗೂ ಸಂಬಂದಪಟ್ಟವರು ಹಲವು ಬಾರೀ ಮನವಿ ಮಾಡಿದ್ದರೂ ಕೂಡ ಕೆಲವೊಂದು ಕಡೆಗಳಲ್ಲಿ ಇನ್ನೂ ಯಾವುದೇ ಭದ್ರತಾ ಕ್ರಮಗಳನ್ನು ಅನುಸರಿಸದಿರುವುದು ಬೇಜವಬ್ದಾರಿಗೆ ನಿದರ್ಶನವಾಗಿದೆ. ಅಂತೆಯೇ ಮಲ್ಯಾಡಿಯ ಈ ದೈವಸ್ಥಾನದಲ್ಲಿಯೂ ಯಾವುದೇ ಅಲರಾಂ ವ್ಯವಸ್ಥೆಯನ್ನಾಗಲಿ ಸಿ.ಸಿ.ಕ್ಯಾಮೆರವನ್ನಾಗಲಿ ಅಳವಡಿಸಿಲ್ಲ.

ಇನ್ನು ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೊದಲನೇ ದೇವಸ್ಥಾನ ಕಳ್ಳತನ ಪ್ರಕರಣ ಇದಾಗಿದ್ದು ಈಗಾಗಲೇ ಕಳ್ಳರ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ತೆಕ್ಕಟ್ಟೆ ಜಂಕ್ಷನ್ ನಲ್ಲಿ ರಾತ್ರಿ ಚೆಕ್ ಪೋಸ್ಟ್ ಇದೆ ಅಲ್ಲದೇ ಠಾಣಾ ವ್ಯಾಪ್ತಿಯ ಎಲ್ಲೆಡೆ ರಾತ್ರಿ ಗಸ್ತು ವ್ಯವಸ್ಥೆಯಿದ್ದರೂ ಜನನಿಬೀಢ ಪ್ರದೇಶದಲಿಯೇ ರಸ್ತೆ ಸಮೀಪವೇ ಇರುವ ದೈವಸ್ಥಾನದಲ್ಲಿ ಕಳ್ಳತನ ನಡೆದ ಬಗ್ಗೆ ಸಾರ್ವಜನಿಕರು ಭೀತರಾಗಿದ್ದಾರೆ.

ಘಟನಾ ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅರುಣ್ ನಾಯಕ್, ಕೋಟ ಎಸ್.ಐ. ಕಬ್ಬಾಳರಾಜ್ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೈವಸ್ಥಾನದ ಮೊಕ್ತೇಸರ ರಘುರಾಮ್ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ. ಶೆಟ್ಟಿ, ಕಾರ್ಯದರ್ಶಿ ಮಲ್ಯಾಡಿ ಶಿವರಾಂ ಶೆಟ್ಟಿ, ಅರ್ಚಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Write A Comment