ಕನ್ನಡ ವಾರ್ತೆಗಳು

ಆರ್ ಟಿ ಐ ಕಾರ್ಯಕರ್ತ ಬಾಳಿಗ ಹತ್ಯೆಯಲ್ಲಿ ನರೇಶ್ ಶೆಣೈ ಪಾತ್ರದ ಬಗ್ಗೆ ಶಂಕೆ..?

Pinterest LinkedIn Tumblr

Naresh_shenoy_baliga

ಆರ್ ಟಿ ಐ ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣ : ಪ್ರಮುಖ ಸೂತ್ರಧಾರನ ಪಟ್ಟಿಯಲ್ಲಿ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಹೆಸರು..?

ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆಯಲ್ಲಿ ನಮೋ ಬ್ರಿಗೇಡ್ ಯುವ ಸಂಘಟನೆಯ ಸ್ಥಾಪಕ ಹಾಗೂ ಮಾಜಿ ಸಂಚಾಲಕ ನರೇಶ್ ಶೆಣೈ ಹೆಸರು ಪ್ರಮುಖವಾಗಿ ಕೇಳಿ ಬಂದಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಶೆಣೈ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಗುರುವಾರ ನರೇಶ್ ಶೆಣೈ ನಿವಾಸಕ್ಕೆ ತೆರಳಿದ್ದರು ಆದರೆ, ಅವರು ಮನೆಯಲಿ ಇರಲಿಲ್ಲ. ಕಳೆದ ಒಂದು ವಾರಗಳಿಂದ ಅವರು ಮನೆಯಲ್ಲಿ ಇಲ್ಲ, ಕ್ಷೇತ್ರ ದರ್ಶನಕ್ಕೆ ತೆರಳಿದ್ದಾರೆ ಎಂದು ಮನೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಆರ್ ಟಿಐ ಕಾರ್ಯಕರ್ತ ವಿನಾಯಕ್ ಪಾಂಡುರಂಗ ಬಾಳಿಗರನ್ನು ಮಾರ್ಚ್ 21 ರಂದು ಬೆಳಿಗ್ಗಿನ ಜಾವ ನಗರದ ಬೆಸೆಂಟ್ ಕಾಲೇಜು ಸಮೀಪದ ಪಿ.ವಿ.ಎಸ್ ಕಲಾಕುಂಜ ಮುಂಭಾಗದಲ್ಲಿರುವ ಓಣಿಯಲ್ಲಿ ಅವರ ಮನೆಯ ಸಮೀಪದಲ್ಲೇ ಹಂತಕರು ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಶಿತ್ ದೇವಾಡಿಗ ಹಾಗೂ ವಿನೀತ್ ಪೂಜಾರಿ ಎಂಬ ಇಬ್ಬರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಇನ್ನಿಬ್ಬರೂ ಶಂಕಿತ ಆರೋಪಿಗಳಾದ ಶಿವು ಮತ್ತು ಶ್ರೀಕಾಂತ್ ಎಂಬವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬಾಳಿಗ ಅವರು ತಮ್ಮ ಇಲೆಕ್ಟ್ರಿಕಲ್ ಗುತ್ತಿಗೆ ಜೊತೆಗೆ ಆರ್‌ಟಿಎ ಕಾರ್ಯಕರ್ತನಾಗಿಯೂ ಕಾರ್ಯಚರಿಸುತ್ತಿದ್ದು, ನಗರದಲ್ಲಿ ನಡೆಯುತ್ತಿರುವ ಅಕ್ರಮ ಪ್ರಕರಣಗಳನ್ನು ಪತ್ತೆ ಹಚ್ಚಿ ಕೋರ್ಟಿಗೆ ಆರ್‌ಟಿಎ ಅರ್ಜಿ ಸಲ್ಲಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.ಇತ್ತೀಚಿಗಷ್ಟೇ ನಗರದ ಕಾರ್‌ಸ್ಟ್ರೀಟ್‌ನ ದೇವಾಸ್ಥಾನವೊಂದರಲ್ಲಿ ಬಹುಕೋಟಿ ರೂಪಾಯಿಗಳ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ದೇವಾಸ್ಥಾನದ ಆಡಳಿತ ಮಂಡಳಿ ವಿರುದ್ಧ ಹೈಕೋರ್ಟಿಗೆ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ಮಾತ್ರವಲ್ಲದೇ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ವಿಚಾರದಲ್ಲಿ ಮಂಗಳೂರಿನ ಪ್ರಭಾವಿ ವ್ಯಕ್ತಿಯೊಬ್ಬರ ವಿರುದ್ಧ ಹಾಗೂ ನಗರದ ಕೆಲವು ಬಿಲ್ಡರ್ ಗಳ ಅಕ್ರಮ ಕಟ್ಟಡಗಳ ಹಾಗೂ ಜಾಗದ ವಿಚಾರದಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಗರದ ಪ್ರತಿಷ್ಠಿತ ಬಿಲ್ಡರ್ ಗಳ ವಿರುದ್ಧ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಬಿಲ್ಡರುಗಳು, ರಿಯಲ್ ಎಸ್ಟೇಟ್ ವ್ಯವಹಾರಸ್ಥರು, ಶಿಕ್ಷಣ ಸಂಸ್ಥೆಗಳ ಮಾಲಿಕರು, ಧಾರ್ಮಿಕ ಸಂಸ್ಥೆಗಳ ಪ್ರಮುಖರು, ಬ್ಯಾಂಕಿಂಗ್ ಲಾಬಿಗಳು ಸೇರಿದಂತೆ ಹಲವು ಪ್ರಭಾವಿಗಳು ವಿನಾಯಕ ಬಾಳಿಗರ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅವರುಗಳ ಅನ್ಯಾಯಕ್ಕೆ ಇದಿರಾಗಿ ಹೋರಾಡುತ್ತಿದ್ದ ಬಾಳಿಗರನ್ನು ಸುಪಾರಿ ಹಂತಕರ ಮೂಲಕ ಹತ್ಯೆಗೈಯ್ಯಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

9 ಕೋಟಿ ರೂ. ಅವ್ಯವಹಾರ – ಹತ್ಯೆಗೆ ಕಾರಣವೇ..?

ಕಾರ್ ಸ್ಟ್ರೀಟ್ ನಲ್ಲಿರುವ ದೇವಸ್ಥಾನದಲ್ಲಿ ಸುಮಾರು 9 ಕೋಟಿ ರೂ.ಗಳಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಆರ್ ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಮಾಹಿತಿ ಪಡೆದಿದ್ದರು. ಇದೇ ಕಾರಣದಿಂದ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದರಾದರೂ, ಈ ಕೊಲೆಯ ಪ್ರಮುಖ ಸೂತ್ರಧಾರರು ಯಾರು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಕುಟುಂಬಸ್ಥರ ಆರೋಪ ತನಿಖೆಯ ಹಾದಿಯನ್ನು ಸುಗಮಗೊಳಿಸಿದೆ.

ಶಂಕಿತ ಆರೋಪಿ ನರೇಶ್ ಶೆಣೈಯನ್ನು ಬಾಳಿಗಾ ದೇವಸ್ಥಾನದ ವಿಚಾರದಲ್ಲಿ ನೇರವಾಗಿ ವಿರೋಧಿಸುತ್ತಿದ್ದರು ಮತ್ತು ಇವರ ಜೊತೆಗೆ ಹಲವು ಮಂದಿ ಭಾಗಿಯಾಗಿರುವ ಬಗ್ಗೆ ಈಗಾಗಲೇ ಕೆಲವು ಪತ್ರಿಕೆಗಳಲ್ಲಿ ವರದಿಯಾಗಿದೆ. ಮಾತ್ರವಲ್ಲದೇ ವಿನಾಯಕ್ ಬಾಳಿಗ ಹತ್ಯೆಗೆ ಸಹಕರಿಸಿದ್ದಾರೆ ಎಂಬ ಆರೋಪದಡಿ ಸಾರ್ವಜನಿಕರಲ್ಲಿ ಪತ್ತೆಗೆ ಸಹಕರಿಸಿ ಎಂಬ ಹೇಳಿಕೆಯೊಂದಿಗೆ ಮಂಗಳೂರು ಪೊಲೀಸರು ಪ್ರಕಟಣೆ ನೀಡಿದ್ದು, ಪ್ರಕಟಣೆಯಲ್ಲಿ ಬಿಡುಗಡೆಗೊಳಿಸಿರುವ ಚಿತ್ರದಲ್ಲಿರುವ ಶಂಕಿತ ಆರೋಪಿಗಳಾದ ಶ್ರೀಕಾಂತ್ ಹಾಗೂ ಶಿವು ಎಂಬವರು ನರೇಶ್ ಶೆಣೈ ಅವರ ಸಹಚರರು ಎಂಬ ಮಾಹಿತಿ ಲಭ್ಯವಾಗಿದ್ದು, ಬಾಳಿಗ ಹತ್ಯೆಯಲ್ಲಿ ನರೇಶ್ ಶೆಣೈ ಪಾತ್ರ ಇದೆ ಎಂಬ ಶಂಕೆ ತೀವ್ರಗೊಳ್ಳಲು ಕಾರಣವಾಗಿದೆ.

ಆರ್ ಟಿಐ ಚಟುವಟಿಕೆಗಳಲ್ಲಿ ಬಾಳಿಗಾ ಅವರು ಯಾವೂದೇ ಬ್ಲ್ಯಾಕ್ ಮೇಲ್ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಅಥವಾ ಯಾವೂದೇ ವ್ಯಕ್ತಿಗೆ ಬೆದರಿಕೆ ಹಾಕಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ಪ್ರಕರಣದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

ಬಾಳಿಗರ ವೃದ್ಧ ತಂದೆ-ತಾಯಿಯರ ಜವಾಬ್ದಾರಿಯನ್ನು ಇದೀಗ ಅವರ ಸಹೋದರಿಯರು ವಹಿಸಿಕೊಂಡಿದ್ದಾರೆ.

ಆರ್ ಟಿಐ ಮಾಹಿತಿ ಮೂಲಕ ಶಿಕ್ಷಣ ಸಂಸ್ಥೆ, ದೇವಸ್ಥಾನ, ಹಲವು ಬಿಲ್ಡರ್‌ಗಳನ್ನು ಎದುರು ಹಾಕಿಕೊಂಡಿದ್ದ ಬಾಳಿಗ ಅವರ ಹತ್ಯೆಯ ಬಗ್ಗೆ ಪೊಲೀಸರು ಹಲವು ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆ ನಡೆದ ಕೆಲವೇ ದಿನಗಳಲ್ಲಿ ಇಬ್ಬರು ಸುಪಾರಿ ಹಂತಕರನ್ನು ಬಂಧಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ಪೊಲೀಸರಿಗೆ ಇದೀಗ ಪ್ರಕರಣದ ಸೂತ್ರಧಾರನ ಬಂಧನ ಒಂದು ಸವಾಲಾಗಿದೆ.

ಆರೋಪಿಗಳ ಬಂಧನಕ್ಕೆ ಸಿಪಿಐ ಆಗ್ರಹ:

ಆರ್‍.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗರ ಹತ್ಯೆ ಮಾಡಿದವರನ್ನು ಹಾಗೂ ಹತ್ಯೆಗಾಗಿ ಸುಪಾರಿ ನೀಡಿದವರನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ. ಸಾಮಾಜಿಕ ಕಾರ್ಯಕರ್ತರು ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಲು ಹೋರಾಟ ನಡೆಸುತ್ತಾರೆ. ಅಂತವರನ್ನು ಕೊಲೆಗೈಯ್ಯುವ ಮುಖಾಂತರ ದುಷ್ಟ ಶಕ್ತಿಗಳು ತಮ್ಮ ಡೋಂಗಿ ವ್ಯವಹಾರವನ್ನು ಮರೆಮಾಚುತ್ತಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ನಾಶ ಮಾಡುತ್ತಾರೆ. ಇದಕ್ಕೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಈ ಕೊಲೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಹಾಗೂ ಈ ಕೊಲೆಯ ಹಿಂದಿರುವ ನೈಜ ಸತ್ಯಗಳನ್ನು ಬಹಿರಂಗಪಡಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

Write A Comment