
ಮಂಗಳೂರು : ಆರ್.ಟಿ.ಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗರ ಹತ್ಯೆಗೆ ಸಂಬಂಧಿಸಿದಂತೆ ಇನ್ನಿಬ್ಬರು ಶಂಕಿತ ಆರೋಪಿಗಳ ಚಿತ್ರವನ್ನು ಬಿಡುಗಡೆಗೊಳಿಸಲಾಗಿದ್ದು, ಆರೋಪಿಗಳ ಪತ್ತೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಿನಾಂಕ: 21-03-2016 ರಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಬಾಬ್ತು ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಅಪರಿಚಿತ ವ್ಯಕ್ತಿಗಳು ಅವರನ್ನು ತಲವಾರಿನಿಂದ ಕಡಿದು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ವಿನಾಯಕ ಪಾಂಡುರಂಗ ಬಾಳಿಗರನ್ನು ಜ್ಯೋತಿಯ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದಾಗ ಅವರು ಮೃತಪಟ್ಟಿದ್ದರು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ವಿನಿತ್ ಪೂಜಾರಿ ಮತ್ತು ನಿಶಿತ್ ದೇವಾಡಿಗ ಎಂಬವರನ್ನು ದಿನಾಂಕ: 27-03-2016 ರಂದು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಈ ವರೆಗಿನ ತನಿಖೆಯಿಂದ ಹಾಗೂ ದೊರೆತಿರುವ ಸಾಕ್ಷ್ಯಾಧಾರಗಳಿಂದ ಇನ್ನೂ ಇಬ್ಬರು ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಈ ಇಬ್ಬರು ಶಂಕಿತ ಆರೋಪಿಗಳ ಚಿತ್ರವನ್ನು ಬಿಡುಗಡೆಗೊಳಿಸಿರುವ ಪೊಲೀಸರು, ಆರೋಪಿಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಇಲಾಖೆಗೆ ಸಹಕರಿಸುವಂತೆ ಕೋರಿದ್ದಾರೆ.
ಶಂಕಿತ ಆರೋಪಿಗಳನ್ನು ಪಂಜಿಮೊಗರು,ಉರುಂಡಾಡಿಗುಡ್ಡೆಯ ಗೋಪಾಲಕೃಷ್ಣ ಭಜನಾ ಮಂದಿರದ ಬಳಿಯ ನಿವಾಸಿ ಶಿವ ಪೂಜಾರಿ (29) ಹಾಗೂ ಕಾವೂರು ಶಾಂತಿನಗರ ಮೈದಾನದ ಬಳಿಯ ನಿವಾಸಿ ಶ್ರೀಕಾಂತ್ ಮೂಲ್ಯ (40) ಎಂದು ಹೆಸರಿಸಲಾಗಿದೆ.
ಈ ಆರೋಪಿಗಳ ಪತ್ತೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಲು ಕೋರಲಾಗಿದೆ. ಈ ಮೇಲೆ ನಮೂದಿಸಿದ ಶಂಕಿತ ಆರೋಪಿತರ ಸುಳಿವು ಲಭ್ಯವಾದಲ್ಲಿ ಕೂಡಲೇ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಕೇಂದ್ರ ಉಪವಿಭಾಗರವರ ದೂರವಾಣಿ ಸಂಖ್ಯೆ: 9480805320 ಕ್ಕೆ ಕರೆಗಳ ಮೂಲಕ, ಎಸ್ಎಂಎಸ್, whatsApp, ಈ ಮೇಲ್ (sdpocitymgc@ksp.gov.in) ಯಾವುದೇ ರೀತಿಯಲ್ಲಿ ಮಾಹಿತಿ ನೀಡಲು ಕೋರಲಾಗಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಹಾಗೂ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.