ಕನ್ನಡ ವಾರ್ತೆಗಳು

ಡಿಸಿ ಅಸಹಿಷ್ಣುತೆ ಹೇಳಿಕೆಗೆ ವಿಹಿಂಪ ಘರಂ : ಪುತ್ತೂರು ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಮರುಮುದ್ರಣಕ್ಕೆ ಆಗ್ರಹ

Pinterest LinkedIn Tumblr

VHP_meet_photo_1

ಮಂಗಳೂರು : ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಆಮಂತ್ರಣ ಪತ್ರಿಕೆಯಲ್ಲಿ ಮೂರ್ತಿ ಪೂಜೆಯಲ್ಲಿ ನಂಬಿಕೆಯಿಲ್ಲದ ಮುಸ್ಲಿಂ ಸಮುದಾಯದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಹೆಸರನ್ನು ದುರುದ್ದೇಶದಿಂದ ನಮೂದಿಸಲಾಗಿದೆ. ಇದನ್ನು ವಿಶ್ವಹಿಂದೂ ಪರಿಷತ್ ಖಂಡಿಸುತ್ತದೆ ಎಂದು ವಿ.ಹಿಂ.ಪ. ಕಾರ್ಯದ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವವು ಹಿಂದೂ ಸಮಾಜದ ಖಾಸಗಿ ಜಾತ್ರೆಯಾಗಿದ್ದು, ಸರಕಾರ ಜಾತ್ರೆಯ ಉಸ್ತುವಾರಿ ವಹಿಸಿದೆ ವಿನಃ ಸರ್ಕಾರಿ ಸಮಾರಂಭವಲ್ಲ. ಆದ್ದರಿಂದ ಇದಕ್ಕೆ ಶಿಷ್ಟಾಚಾರವಿರುವುದಿಲ್ಲ. ಕೇವಲ ದುರುದ್ದೇಶದಿಂದ ಆಮಂತ್ರಣ ಪತ್ರಿಕೆಯ ಪಾವಿತ್ರ್ಯತೆ ಕೆಡಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಹೆಸರನ್ನು ನಮೂದಿಸಿರುವುದು ಕಾನೂನುಬಾಹಿರವಾಗಿದೆ ಎಂದು ಹೇಳಿದರು.

VHP_meet_photo_2 VHP_meet_photo_3

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ಜಿಲ್ಲಾಧಿಕಾರಿಯವರ ಹೆಸರನ್ನು ಶಿಷ್ಟಾಚಾರದ ಕಾರಣದಿಂದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನಮಾಡಿದ್ದಾರೆ. ಮಾತ್ರವಲ್ಲದೇ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಅಸಹಿಷ್ಣುತೆ ಶಬ್ದ ಬಳಸಿದ್ದಾರೆ. ಜಿಲ್ಲಾಧಿಕಾರಿಗಳು ಹಿಂದೂಗಳಿಗೆ ಸಹಿಷ್ಣುತೆಯ ಪಾಠ ಕಲಿಸಬೇಕಾಗಿಲ್ಲ, ಅನ್ಯಕೋಮಿನವರನ್ನು ಸೌಹಾರ್ದತೆಯಿಂದ ನೋಡುವಂತಹ ಸಹಿಷ್ಣುತೆ ನಮ್ಮಲ್ಲಿದೆ. ಆದರೆ ಅಧಿಕಾರ ವಹಿಸಿಕೊಂಡವರಲ್ಲಿ ಅಪನಂಬಿಕೆಯಿದೆ ಎಂದು ದೂರಿದರು.

ಕುಕ್ಕೆಸುಬ್ರಹ್ಮಣ್ಯ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲೂ ಡಿಸಿಯವರ ಹೆಸರಿತ್ತು. ಆದರೆ ಆ ಪತ್ರಿಕೆ ಸಮಾರಂಭದ ಹಿಂದಿನ ದಿನ ನಮ್ಮ ಕೈಗೆ ಬಂದ ಕಾರಣ ಈ ವಿಷಯವನ್ನು ನಾವು ಸಹಿಸಿಕೊಂಡಿದ್ದೆವು.

ಆದರೆ ಈ ಆಮಂತ್ರಣ ಪತ್ರಿಕೆ 15 ದಿನ ಮೊದಲೇ ಸಿಕ್ಕಿದ್ದು ಇದರ ಮರುಮುದ್ರಣ ಮಾಡಲೇ ಬೇಕು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಬಗ್ಗೆ ನಮಗೆ ಯಾವೂದೇ ವೈಯಕ್ತಿಕ ವಿರೋಧವಿಲ್ಲ. ಕಾನೂನು ವ್ಯವಸ್ಥೆಯಡಿಯಲ್ಲಿ ದೇವಸ್ಥಾನದ ಆಡಳಿತವನ್ನು ಹಿಂದೂಗಳು ಮಾಡಬೇಕೆಂದಿದ್ದು, ಹಿಂದೂಯೇತರರು ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಆಮಂತ್ರಣ ಪತ್ರಿಕೆಯ ಮರುಮುದ್ರಣವಾಗಲೇ ಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಪುರಾಣಿಕ್ ತಿಳಿಸಿದರು.

ಬಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್, ಸಂಘಟನೆಯ ಪ್ರಮುಖರಾದ ಜಯರಾಂ ಶೆಟ್ಟಿ, ಸಂಜೀವ ಮಠಂದೂರು ಹಾಗೂ ಮತ್ತಿತ್ತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Write A Comment