ಕನ್ನಡ ವಾರ್ತೆಗಳು

ನೇತ್ರಾವತಿ ನದಿಯ ಕಿನಾರೆಯಲ್ಲಿ ಯುವಕನ ಶವ ಪತ್ತೆ.

Pinterest LinkedIn Tumblr

puttur_murder_photo

ಮಂಗಳೂರು./ಪುತ್ತೂರು.ಮಾ.28 : ರಾ. ಹೆ. 75 ರ ನೇತ್ರಾವತಿ ನದಿ ಕಿನಾರೆಯಲ್ಲಿ  ಯುವಕನೊಬ್ಬನ ಮೃತದೇಹವು ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಯುವಕನನ್ನು ಕೊಲೆಗೈದು ನದಿಗೆಸೆದಿರ ಬಹುದು ಎಂದು ಅಂದಾಜಿಸಲಾಗಿದೆ. ಕಿನಾರೆಯಲ್ಲಿ ಯುವಕನ ಶವ ಬೋರಲು ಬಿದ್ದುಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸಾಗಿಸಿದ್ದಾರೆ.

ಅಂದಾಜು 30-35 ವಯಸ್ಸಿನ ಯುವಕನ ಮೃತದೇಹದ ಮೈಮೇಲೆ ಗಾಯದ ಗುರುತಿದ್ದು, ಮುಖ ಹಾಗೂ ಎದೆಯ ಭಾಗದಲ್ಲಿ ಹರಿತವಾದ ಆಯುಧದಿಂದ ತಿವಿದಿರುವ ಗುರುತು ಇದೆ. ಈತನನ್ನು ಬೇರೆ ಕಡೆ ಕೊಲೆಗೈದು ಇಲ್ಲಿ ತಂದು ಎಸೆದಿರುವ ಸಾಧ್ಯತೆಯೂ ಹೆಚ್ಚಿದೆ. ಸಂಶಯ ಬರದಿರಲು ಈತನ ಮೃತದೇಹದ ಬಳಿ ಚಪ್ಪಲಿಯನ್ನು ಜೋಡಿಸಿಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನೊಂದೆಡೆ ಅಪಘಾತವೆಸಗಿ ಮೃತದೇಹವನ್ನು ಇಲ್ಲಿ ತಂದು ಎಸೆದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಘಟನಾ ಸ್ಥಳಕ್ಕೆ ಅಡಿಶನಲ್‌ ಎಸ್‌ಪಿ ವಿನ್ಸೆಂಟ್‌ ಶಾಂತಕುಮಾರ್‌, ಪುತ್ತೂರು ಎಎಸ್ಪಿ ಸಿ.ಬಿ. ರಿಷ್ಯಂತ್‌, ಪ್ರೊಬೆಷನರಿ ಎಎಸ್ಪಿ ಲಕ್ಷಣ್‌ ಲಿಂಬರ್ಗಿ, ಉಪ್ಪಿನಂಗಡಿ ಠಾಣಾಧಿಕಾರಿ ತಿಮ್ಮಪ್ಪ ನಾಯ್ಕ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಅನಿಲ್‌ ಎಸ್‌. ಕುಲಕರ್ಣಿ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Write A Comment