ಕನ್ನಡ ವಾರ್ತೆಗಳು

ಬಾಲ್ಯವಿವಾಹ ತಡೆಗಟ್ಟಲು ಹೊಸ ನಿಯಮಾವಳಿ ಜಾರಿಗೆ : ಸಚಿವೆ ಉಮಾಶ್ರೀ

Pinterest LinkedIn Tumblr

Umashri_Press_Meet_1

ಮಂಗಳೂರು, ಮಾ. 28:ಬಾಲ್ಯವಿವಾಹವನ್ನು ತಡೆಗಟ್ಟಲು ರಾಜ್ಯ ಸರಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು ಬಾಲ್ಯವಿವಾಹಕ್ಕೆ ಸಂಬಂಧಪಟ್ಟಂತೆ ಆರೋಪಿ ಸ್ಥಾನದಲ್ಲಿರುವವರಿಗೆ ಕನಿಷ್ಠ ಒಂದು ವರ್ಷ ಗರಿಷ್ಠ ಎರಡು ವರ್ಷ ಶಿಕ್ಷೆಯನ್ನು ನೀಡುವ ಕಾನೂನನ್ನು ಜಾರಿಗೆ ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ರವಿವಾರ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದೆ ಬಾಲ್ಯವಿವಾಹಕ್ಕೆ ಕನಿಷ್ಟ ಶಿಕ್ಷೆಯೆಂಬುದಿರಲಿಲ್ಲ. ಇದೀಗ ಕನಿಷ್ಟ ಶಿಕ್ಷೆಯನ್ನು ರೂಪಿಸಲಾಗಿದೆ. ಬಾಲ್ಯ ವಿವಾಹಕ್ಕೆ ಪ್ರೇರಣೆ ನೀಡುವ ತಂದೆ ತಾಯಿ, ಅಕ್ಕಪಕ್ಕದವರು , ದಲ್ಲಾಳಿಗಳಿಗೆ ಈ ಕಾನೂನು ವ್ಯಾಪ್ತಿಯಲ್ಲಿ ಶಿಕ್ಷೆಯಾಗಲಿದೆ ಎಂದು ಹೇಳಿದರು.

Umashri_Press_Meet_2

ರಾಜ್ಯ ಸರ್ಕಾರವು ಮಹಿಳೆಯರ ಅಭಿವೃದ್ದಿಗೆ ಸಂಬಂಧಪಟ್ಟು ಸಾಕಷ್ಟು ಕೆಲಸಗಳನ್ನು ಮಾಡಿದ್ದು ಇದೀಗ ಮಂಗಳಮುಖಿಯರಿಗೆ ಹೊಸ ನೀತಿ, 18 ವರ್ಷದ ಒಳಗಿನ ಬಾಲಕಿಯರಿಗೆ ನೀತಿ, ಮಹಿಳಾ ನೀತಿ, ಸಬಲೀಕರಣ ನೀತಿಯನ್ನು ಜಾರಿಗೆ ತರಲಾಗುವುದು. ಈ ನೀತಿಗಳು ವಿಧಾನಸಭೆಯಲ್ಲಿ ಬಜೆಟ್ ಮೇಲೆ ಪ್ರಸ್ತಾವಿಸಲಾಗಿದ್ದು ವಿಧಾನಪರಿಷತ್‌ನಲ್ಲಿ ಮಂಡನೆಯಾಗಲು ಬಾಕಿಯಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅತ್ಯಾಚಾರ ತಡೆ ಸಲಹಾ ಸಮಿತಿ ಅಧ್ಯಕ್ಷ ಉಗ್ರಪ್ಪ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಾರ್ಯನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಗಮನಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಅತ್ಯಾಚಾರ ಸಂತ್ರಸ್ತೆಯರಿಗೆ ಪರಿಹಾರ ವಿತರಿಸದೆ ಇರುವ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿ ಅಧಿಕಾರಿಯ ಮೇಲೆ ವಾಗ್ದಳಿ ನಡೆಸಿದ್ದರು.

ಅತ್ಯಾಚಾರ ಸಂತ್ರಸ್ತೆಯರಿಗೆ ನೀಡಬೇಕಾದ ಸ್ಥೈರ್ಯನಿಧಿ ಸದ್ಬಳಕೆ ಆಗಿಲ್ಲ ಎನ್ನುವ ಅಸಮಾಧಾನ ಅವರದಾಗಿತ್ತು. ವಾಸ್ತವವಾಗಿ ಸ್ಥೆರ್ಯನಿಧಿ ಜಿಲ್ಲೆಗಳಿಗೆ ಬಿಡುಗಡೆಯಾಗಿರಲಿಲ್ಲ. ಈ ಬಗ್ಗೆ ಅವರಿಗೆ ತಿಳಿಯದೆ ಅಧಿಕಾರಿಯ ವಿರುದ್ದ ಅಸಮಾಧಾನಗೊಂಡಿದ್ದರು ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಇಬ್ರಾಹೀಂ ಕೋಡಿಜಾಲ್, ಬಾಲಕೃಷ್ಣ ಶೆಟ್ಟಿ, ಅಶ್ರಫ್, ಎ.ಸಿ.ಭಂಡಾರಿ, ದಿವ್ಯಪ್ರಭಾ,ಮುಂತಾದವರು ಉಪಸ್ಥಿತರಿದ್ದರು.

Write A Comment