ಕನ್ನಡ ವಾರ್ತೆಗಳು

ಆರ್‌ಟಿಎ ಕಾರ್ಯಕರ್ತ ಪಾಂಡುರಂಗ ಬಾಳಿಗ ಕೊಲೆ ಪ್ರಕರಣ : ಇಬ್ಬರು ಆರೋಪಿಗಳ ಸೆರೆ – ಇತರ ಆರೋಪಿಗಳಿಗಾಗಿ ಹುಡುಕಾಟ

Pinterest LinkedIn Tumblr

Panduranga_murder_arest_1

ಮಂಗಳೂರು : ನಗರದ ಬೆಸೆಂಟ್ ಕಾಲೇಜಿನ ಬಳಿ ನಡೆದ ಆರ್‌ಟಿಎ ಕಾರ್ಯಕರ್ತ (ಮಾಹಿತಿ ಹಕ್ಕು ಕಾರ್ಯಕರ್ತ) ವಿನಾಯಕ ಪಾಂಡುರಂಗ ಬಾಳಿಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರು ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಕಾವೂರು ಸಮೀಪದ ಪದವಿನಂಗಡಿ ಬಟ್ರೆಕುಮೇರು ನಿವಾಸಿ ವಿನಿತ್ ಪೂಜಾರಿ ( 26 ) ಹಾಗೂ ಶಕ್ತಿನಗರ ನಿವಾಸಿ ನಿಶಿತ್ ದೇವಾಡಿಗ ( 23 ) ಎಂದು ಹೆಸರಿಸಲಾಗಿದೆ.

Panduranga_murder_arest_6

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರ್‌ಟಿಐನಲ್ಲಿ ಪ್ರಶ್ನಿಸಿದ್ದಕ್ಕೆ ಕೊಲೆ ನಡೆದಿದೆ ಎಂಬ ಸಂಶಯ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿಗಳಿಗೆ ಸುಪಾರಿ ನೀಡಿ ಕೊಲೆ ಮಾಡಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಇಬ್ಬರು ಯುವಕರು ಈವರೆಗೆ ಯಾವೂದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಯಾವ ಕಾರಣಕ್ಕಾಗಿ ಕೊಲೆ ಮಾಡಿಸಲಾಗಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಯುಕ್ತರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಕೂಡ ಆರೋಪಿಗಳು ಹತ್ಯೆಗೈಯಲು ಸಂಚು ರೂಪಿಸಿದ್ದರು. ಆದರೆ ಆ ಸಂದರ್ಭದಲ್ಲಿ ಅಡಚಣೆ ಉಂಟಾಗಿದ್ದರಿಂದ ಅಂದು ಕೊಲೆ ಮಾಡಲು ಸಾಧ್ಯವಾಗಿರಲಿಲ್ಲ. ಮರುದಿನ ಮತ್ತೆ ಘಟನಾ ಸ್ಥಳಕ್ಕೆ ಬಂದ ಆರೋಪಿಗಳು ವಿನಾಯಕ ಪಾಂಡುರಂಗ ಅವರಲ್ಲಿ ವಿಳಾಸ ಕೇಳುವ ನೆಪದಲ್ಲಿ ತಡೆದು ನಿಲ್ಲಿಸಿ ಹತ್ಯೆಗೈದಿದ್ದಾರೆ ಎಂದು ಹೇಳಿದ ಅಯುಕ್ತರು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ದಿನಾಂಕ: 21-03-2016 ರಂದು ಬೆಳಿಗಿನ ಜಾವ ನಗರದ ಬೆಸೆಂಟ್ ಕಾಲೇಜಿನ ಸಮೀಪ ಪಿವಿಎಸ್ ಕಲಾಕುಂಜದ ಪಕ್ಕದ ಓಣಿಯಲ್ಲಿ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆ ನಡೆದಿತ್ತು.

Panduranga_murder_arest_2 Panduranga_murder_arest_3

ದಿನಾಂಕ: 21-03-2016 ರಂದು ವಿನಾಯಕ ಪಾಂಡುರಂಗ ಬಾಳಿಗರವರು ಎಂದಿನಂತೆ ಮುಂಜಾನೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ನಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ಬಾಳಿಗರನ್ನು ತಡೆದು ನಿಲ್ಲಿಸಿದ ಅಪರಿಚಿತ ವ್ಯಕ್ತಿಗಳು ಅವರನ್ನು ತಲವಾರಿನಿಂದ ಕಡಿದು, ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು.

ದಾಳಿಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿನಾಯಕ ಪಾಂಡುರಂಗ ಬಾಳಿಗರನ್ನು ಜ್ಯೋತಿಯ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸುತ್ತಿದ್ದಾಗ ಅವರು ದಾರಿಯಲ್ಲೇ ಮೃತಪಟ್ಟಿದ್ದರು.ಈ ಕೊಲೆ ಕೃತ್ಯದ ಬಗ್ಗೆ ವಿನಾಯಕ ಪಾಂಡುರಂಗ ಬಾಳಿಗರವರ ತಂಗಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೊಲೆ ಪ್ರಕರಣವನ್ನು ಭೇದಿಸಲು ಮಂಗಳೂರು ನಗರ ಕೇಂದ್ರ ಉಪ-ವಿಭಾಗದ ಎ.ಸಿ.ಪಿ ತಿಲಕ್ ಚಂದ್ರ ಮತ್ತು ಸಿಸಿಬಿ ಇನ್ಸ್ ಪೆಕ್ಟರ್ ವೆಲೆಂಟೈನ್ ಡಿ’ಸೋಜ, ಶಾಂತರಾಮ, ರಾಜೇಶ್, ರವೀಶ್ ನಾಯಕ್, ಮಾರುತಿ ನಾಯಕ್ ಮತ್ತು ಪಿಎಸ್ಐ ಶ್ಯಾಮಸುಂದರ್ ರವರುಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿತ್ತು.

ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ವಿನಿತ್ ಪೂಜಾರಿ ಮತ್ತು ನಿಶಿತ್ ದೇವಾಡಿಗ ರವರನ್ನು ದಿನಾಂಕ 27-03-2016 ರಂದು ಬೆಳಿಗ್ಗೆ ಬಿ.ಸಿ.ರೋಡ್ ರೈಲ್ವೆ ನಿಲ್ದಾಣದ ಬಳಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಮ್. ಶಾಂತರಾಜು ಹಾಗೂ ಡಾ. ಸಂಜೀವ ಎಮ್ ಪಾಟೀಲ್, ಎ.ಸಿ.ಪಿ ತಿಲಕ್ ಚಂದ್ರ, ಇನ್ಸ್ ಪೆಕ್ಟರ್ ವೆಲೆಂಟೈನ್ ಡಿ’ಸೋಜ, ಶಾಂತರಾಮ, ಪಿಎಸ್ಐ ಶ್ಯಾಮಸುಂದರ್ ಉಪಸ್ಥಿತರಿದ್ದರು.

Write A Comment