
ಮಂಗಳೂರು, ಮಾ.27: ಏಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ ಅಥವಾ ಪಾಸ್ಕ ಹಬ್ಬದ ಆಚರಣೆ ಅಂಗವಾಗಿ ಶನಿವಾರ ರಾತ್ರಿ ನಡೆದ ಸಂಭ್ರಮದ ಬಲಿಪೂಜೆಯಲ್ಲಿ ಮಂಗಳೂರಿನ ರೊಝಾರಿಯೊ ಕೆಥೆಡ್ರಲ್ನಲ್ಲಿ ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಈಸ್ಟರ್ ಮೊಂಬತ್ತಿಯನ್ನು ಉರಿಸಿದರು. ಈ ವೇಳೆ ಇತರ ಗುರುಗಳು ಉಪಸ್ಥಿತರಿದ್ದರು. ಬಳಿಕ ಕ್ರೈಸ್ತ ಬಾಂಧವರನ್ನು ಧರ್ಮಗುರುಗಳು ಆಶೀರ್ವದಿಸಿದರು.

ಶಿಲುಬೆಗೇರಿಸಿದ ಏಸು ಮರಣ ಜಯಿಸಿ ಮೂರನೆ ದಿನ ಪುನರುತ್ಥಾನ ಹೊಂದಿದರು ಎಂಬುದು ಕ್ರೈಸ್ತರ ನಂಬಿಕೆ. ಜನರನ್ನು ಪಾಪವೆಂಬ ಕತ್ತಲೆಯಿಂದ ಒಳಿತೆಂಬ ಬೆಳಕಿನೆಡೆಗೆ ಸಾಗಲು ಏಸು ಮಾರ್ಗದರ್ಶನ ನೀಡಿದರು ಎಂಬ ವಿಶ್ವಾಸದ ಪ್ರತೀಕವಾಗಿ ಈಸ್ಟರ್ ಹಬ್ಬದ ಮುಂಚಿನ ದಿನ ರಾತ್ರಿ ಕ್ರೈಸ್ತರು ಚರ್ಚ್ಗಳಲ್ಲಿ ಸೇರಿ ಆಶೀರ್ವಚನ ಮಾಡಿ ಅದರ ಮೂಲಕ ಮೇಣದ ಬತ್ತಿ ಉರಿಸಿ ಪ್ರಾರ್ಥಿಸುತ್ತಾರೆ. ಧರ್ಮಾಧ್ಯಕ್ಷರು ಅಥವಾ ಧರ್ಮಗುರುಗಳು ದೊಡ್ಡ ಗಾತ್ರದ ಮೊಂಬತ್ತಿ ಉರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ.