ಕನ್ನಡ ವಾರ್ತೆಗಳು

ಪುತ್ತೂರು ಜಾತ್ರೆಯ ಆಮಂತ್ರಣ ಪತ್ರ ವಿವಾದ : ಮರುಮುದ್ರಣಕ್ಕೆ ಆಗ್ರಹಿಸಿ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ.

Pinterest LinkedIn Tumblr

Putturu_VHP_Protest

ಪುತ್ತೂರು, ಮಾ.19:  ಪುತ್ತೂರು ಮಹಾಲಿಂಗೆಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂಯೇತರ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರನ್ನು ಆತಿಥೇಯರ ಸಾಲಿನಲ್ಲಿ ಮುದ್ರಿಸಲಾಗಿದ್ದು, ಇದನ್ನು ತೆಗೆದು ಹಾಕಿ ಆಮಂತ್ರಣ ಪತ್ರಿಕೆ ಮರುಮುದ್ರಣ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ಬಂದ್ ನಡೆಸಲು ಕರೆ ನೀಡಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಸತ್ಯಜಿತ್ ಸುರತ್ಕಲ್ ಎಚ್ಚರಿಸಿದರು. ದೇವಳದ ಆಮಂತ್ರಣ ಪತ್ರಿಕೆ ವಿವಾದದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಪುತ್ತೂರು ಮಿನಿ ವಿಧಾನಸೌಧದ ಮುಂಭಾಗ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳ ಆಡಳಿತ ನಿರ್ವಹಣೆಯೂ ಸೇರಿದಂತೆ ದೇವಳದ ಎಲ್ಲ ನಿರ್ವಹಣೆಗಳಲ್ಲಿ ಹಿಂದೂಗಳೇ ಕರ್ತವ್ಯ ನಿರ್ವಹಿಸಬೇಕು ಎಂದು ಎಂಡೋಮೆಂಟ್ ಕಾಯಿದೆಯ 7 ನೇ ಸೆಕ್ಷನ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ ಪುತ್ತೂರು ದೇವಾಲಯದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂಯೇತರ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರನ್ನು ಹಾಕುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ. ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಈ ಹೆಸರನ್ನು ತೆಗೆದು ಅಪರ ಜಿಲ್ಲಾಧಿಕಾರಿ ಅವರ ಹೆಸರು ಹಾಕುವ ಮೂಲಕ ತಕ್ಷಣ ಕಾಗದ ಮರು ಮುದ್ರಣ ಮಾಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಜಿಲ್ಲಾ ಬಂದ್‌ಗೂ ಕರೆ ನೀಡಲಾಗುವುದು. ಅದರಿಂದ ಆಗುವ ತೊಂದರೆಗಳಿಗೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಸಿದರು.

ಒರಿಸ್ಸಾದ ಪುರಿ ಜಗನ್ನಾಥ ದೇವಾಲಯಕ್ಕೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ನೀಡಿದ್ದಾಗ, ಅವರು ಪ್ರಧಾನಿಯಾಗಿದ್ದರೂ ಅವರ ಪತಿ ಹಿಂದೂ ಅಲ್ಲದ ಕಾರಣ ಪರಿಪೂರ್ಣ ಹಿಂದೂಗಳಿಗೆ ಮಾತ್ರ ದೇವಳ ಪ್ರವೇಶ ಎಂಬ ನೆಲೆಯಲ್ಲಿ ಪ್ರವೇಶ ನಿರಾಕರಿಸಲಾಗಿತ್ತು. ಹಿಂದೂ ಧಾರ್ಮಿಕತೆ ಮೇಲೆ ನಂಬಿಕೆ ಇದೆ ಎಂದು ಜಿಲ್ಲಾಧಿಕಾರಿಯವರು ಹೇಳಲಿ. ದೇವಾಲಯದ ಜಾತ್ರೆಗೆ ಬಂದು ಅಂಕುರ ಪ್ರಸಾದ ಸ್ವೀಕರಿಸುತ್ತೇನೆ ಎಂದು ಹೇಳಲಿ. ಆಗ ಅವರ ಹೆಸರು ಇರುವುದನ್ನು ನಾವು ಸ್ವೀಕರಿಸುತ್ತೇವೆ. ಆದರೆ ಜಿಲ್ಲಾಧಿಕಾರಿ ಅವರು ಹಾಗೆ ಹೇಳಲಾರರು. ಹಾಗೊಂದು ವೇಳೆ ಅವರು ಹೇಳಿದ್ದೇ ಆದಲ್ಲಿ ಅವರ ಧರ್ಮದವರೇ ಅವರನ್ನು ಕಾಫಿರರು ಎಂದು ಕರೆಯುತ್ತಾರೆ ಎಂದು ಹೇಳಿದ ಸತ್ಯಜಿತ್, ಹಿಂದೂಯೇತರರು ದೇವಾಲಯಕ್ಕೆ ಬರುವುದಾಗಲಿ, ಇಲ್ಲಿನ ಸೇವೆಗಳಿಗೆ ಸಹಕಾರ ನೀಡುವುದಕ್ಕಾಗಲಿ ನಮ್ಮ ವಿರೋಧವಿಲ್ಲ ಎಂದರು.

ದೇವಾಲಯಕ್ಕೆ ಜಿಲ್ಲಾಧಿಕಾರಿ ಅವರ ಅನುಮತಿಯ ಮೇರೆಗೆ ಅನುದಾನ ಬರುತ್ತದೆ. ಅವರ ಹೆಸರಿನ ಅನುದಾನ ಬೇಕಿರುವಾಗ ಅವರ ಹೆಸರು ಯಾಕೆ ಬೇಡ ಎಂಬ ಪ್ರಶ್ನೆ ಕೇಳಲಾಗುತ್ತಿದೆ. ಮುಂದೊಂದು ದಿನ ಜಿಲ್ಲೆಗೆ ಹಿಂದೂ ಜಿಲ್ಲಾಧಿಕಾರಿ ಬರುತ್ತಾರೆ. ಆ ಸಂದರ್ಭದಲ್ಲಿ ಯಾವುದಾದರೂ ಉರೂಸ್ ಅಥವಾ ಚರ್ಚ್‌ನ ಉತ್ಸವಗಳಿಗೆ ಆ ಜಿಲ್ಲಾಧಿಕಾರಿಯವರ ಅನುಮತಿ ಮೇರೆಗೆ ಅನುದಾನ ಹೋಗುತ್ತದೆ ಎಂಬ ಕಾರಣಕ್ಕೆ ಅಂಥ ಉತ್ಸವಗಳ ಆಮಂತ್ರಣದಲ್ಲಿ ಆತಿಥೇಯರ ಸಾಲಿನಲ್ಲಿ ಹಿಂದೂ ಜಿಲ್ಲಾಧಿಕಾರಿ ಅವರ ಹೆಸರು ಬರೆಸುತ್ತಾರಾ ಎಂದವರು ಪ್ರಶ್ನಿಸಿದರು.

ಭಜರಂಗದಳದ ವಿಭಾಗ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ನಮ್ಮ ಹೋರಾಟ ಜಿಲ್ಲಾಧಿಕಾರಿ ಅವರ ವಿರುದ್ಧವಲ್ಲ, ಯಾವುದೇ ಧರ್ಮದ ವಿರುದ್ಧವೂ ಅಲ್ಲ. ಕಾನೂನು ಉಲ್ಲಂಘಿಸಿದ ಕಾರಣದ ವಿರುದ್ಧ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದರ ವಿರುದ್ಧ ಎಂದರು.

ದತ್ತಿ ಇಲಾಖೆಯ ಅಡಿಯಲ್ಲಿರುವ ಹಿಂದೂ ದೇವಾಲಯ ಒಂದರ ಜಾತ್ರೋತ್ಸವ ಹಿಂದೂಯೇತರ ಅಧಿಕಾರಿಯ ನೇತೃತ್ವದಲ್ಲಿ ನಡೆಯುವುದು ಹಿಂದೂಗಳು ತಲೆ ತಗ್ಗಿಸುವ ಕೆಲಸ. ಜಿಲ್ಲಾಧಿಕಾರಿ ಅವರು ಮಹಾಲಿಂಗೇಶ್ವರನ ಭಕ್ತರಾಗಿದ್ದಲ್ಲಿ ಜಾತ್ರೆಗೆ ಬನ್ನಿ, ನಮ್ಮ ಆಕ್ಷೇಪವಿಲ್ಲ. ಆದರೆ ದೇವಾಲಯದ ಆಡಳಿತದ ಹುದ್ದೆಯಲ್ಲಿ ಕಾಣಿಸಿಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಎಡವಟ್ಟು ಸರಿ ಮಾಡುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದರು.

ಶ್ರೀ ಮಹಾಲಿಂಗೇಶ್ವರ ದೇವಾಲಯದ ಮಾಜಿ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ನನ್ಯ ಅಚ್ಯುತ ಮೂಡಿತ್ತಾಯ ಮಾತನಾಡಿ, ಪುತ್ತೂರು ದೇಗುಲದ ಜಾತ್ರೆಯ ವೇಳೆ ಅದರ ನೇತೃತ್ವ ವಹಿಸಿಕೊಂಡ ವ್ಯಕ್ತಿಗೆ ಹತ್ತಾರು ಧಾರ್ಮಿಕ ವಿಧಿಗಳನ್ನು ಮತ್ತು ಧಾರ್ಮಿಕ ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕಿರುತ್ತದೆ. ಈಗ ಜಿಲ್ಲಾಧಿಕಾರಿ ಅವರು ಜಾತ್ರೆಯ ನೇತೃತ್ವ ವಹಿಸಿದಂತೆ ಬಿಂಬಿಸಲಾಗಿದೆ. ಹಾಗಾದರೆ ಅವರು ಜಾತ್ರೆಗೆ ಬಂದು ಎಲ್ಲ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಸಿದ್ಧರಿದ್ದಾರಾ? ಸಿದ್ಧರಿದ್ದಾರೆ ಎಂದಾದರೆ ನಮ್ಮದೇನೂ ಅಭ್ಯಂತರ ಇಲ್ಲ ಎಂದರು.

ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು, ಸರಕಾರಕ್ಕೆ ಸಲ್ಲಿಸುವ ಮನವಿಯನ್ನು ಓದಿ ಹೇಳಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಟಂದೂರು, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಗೌರವಾಧ್ಯಕ್ಷ ಪೂವಪ್ಪ, ಅಧ್ಯಕ್ಷ ಡೀಕಯ್ಯ ಪೆರ್ವೋಡಿ, ಬಿಜೆಪಿ ಮಂಡಲ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಪ್ರಮುಖರಾದ ಕೇಶವ ಬಜತ್ತೂರು, ಆರ್.ಸಿ. ನಾರಾಯಣ, ರಾಜೇಶ್ ಬನ್ನೂರು, ಚನಿಲ ತಿಮ್ಮಪ್ಪ ಶೆಟ್ಟಿ, ಬಂಗಾರಡ್ಕ ವಿಶ್ವೇಶ್ವರ ಭಟ್, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ ಜೈನ್, ಸದಸ್ಯರಾದ ಸುಧೀಂದ್ರ ಪ್ರಭು, ವಿನಯ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

‘ಆಮಂತ್ರಣ ಗೊಂದಲಕ್ಕೆ ಶಾಸಕಿಯೇ ಹೊಣೆ’

ಪುತ್ತೂರು ಮಹಾಲಿಂಗೇಶ್ವರ ದೇವಳದ ಆಮಂತ್ರಣ ಪತ್ರಿಕೆಯ ವಿವಾದವನ್ನು ಅನಗತ್ಯವಾಗಿ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಶಾಸಕಿ ಶಕುಂತಳಾ ಶೆಟ್ಟಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಂದೆರಡು ದಿನದಲ್ಲಿ ಸಮಸ್ಯೆ ನಿವಾರಣೆಯಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ಜತೆ ಶಾಸಕಿ ಮಾತುಕತೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಬಹುದಿತ್ತು. ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಶಕುಂತಳಾ ಶೆಟ್ಟಿ ಬೇಕಾಬಿಟ್ಟಿ ಹೇಳಿಕೆ ನೀಡಿ ಸಮಸ್ಯೆ ಉಲ್ಬಣಿಸುವಂತೆ ಮಾಡಿದ್ದಾರೆ. ಹಾಗೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೆಸರು ಹಾಕಿರುವುದು ಸರಿ ಎಂಬ ವಾದ ನಮ್ಮದಲ್ಲ. ಹೆಸರು ಮುದ್ರಣದ ಹಿಂದೆ ಜಿಲ್ಲಾಧಿಕಾರಿ ಕೈವಾಡ ಇಲ್ಲ. ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಜಾತ್ರೋತ್ಸವದಲ್ಲೂ ಎ.ಬಿ.ಇಬ್ರಾಹಿಂ ಹೆಸರು ಹಾಕಲಾಗಿತ್ತು. ಅಲ್ಲಿ ಜಾತ್ರೆ ಸುಸೂತ್ರವಾಗಿ ನಡೆದಿದೆ. ಪುತ್ತೂರು ಜಾತ್ರೆಗೂ ಯಾವುದೇ ಅಡ್ಡಿ ಬರುವುದಿಲ್ಲ. ಶಾಸಕಿಯ ಬೇಕಾಬಿಟ್ಟಿ ಹೇಳಿಕೆ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರಿಗೆ ದೂರು ನೀಡಲಿದ್ದೇವೆ ಎಂದು ಹೇಮನಾಥ ಶೆಟ್ಟಿ ಹೇಳಿದ್ದಾರೆ. ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಲೋಕೇಶ್ ಹೆಗ್ಡೆ, ನಗರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಪಕ್ಷದ ಮುಖಂಡರಾದ ರವಿಪ್ರಸಾದ್ ಶೆಟ್ಟಿ, ಕಿಟ್ಟಣ್ಣ ಗೌಡ ಉಪಸ್ಥಿತರಿದ್ದರು.

ಇಲಾಖೆ ತೀರ್ಮಾನ ಕೈಗೊಳ್ಳಲಿ: ಜಿಲ್ಲಾಧಿಕಾರಿ

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಯಾದ ತನ್ನ ಹೆಸರು ಮುದ್ರಿಸಿರುವುದರಿಂದ ಶಿಷ್ಟಾಚಾರ, ಮುಜರಾಯಿ ಕಾಯ್ದೆ, ಧಾರ್ಮಿಕ ವಿಧಿವಿಧಾನಕ್ಕೆ ಲೋಪವಾಗುವುದಿಲ್ಲ. ಆಮಂತ್ರಣದಲ್ಲಿ ಹೆಸರು ಹಾಕಿದ ಮಾತ್ರಕ್ಕೆ ತಪ್ಪಾಗಿದೆ ಎಂದಾದರೆ ಮುಜರಾಯಿ ಇಲಾಖೆಗೆ ಲಿಖಿತ ದೂರು ನೀಡಬಹುದು. ಈ ಬಗ್ಗೆ ಇಲಾಖೆಯೇ ತೀರ್ಮಾನ ಕೈಗೊಳ್ಳಲಿದೆ. ಈ ವಿಚಾರದಲ್ಲಿ ತಾನಾಗಿ ಅಂತಿಮ ತೀರ್ಮಾನ ಕೈಗೊಳ್ಳಲು ಇಚ್ಛಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದರು.

ಪುತ್ತೂರಿನ ಮಿನಿವಿಧಾನಸೌಧಕ್ಕೆ ಗುರುವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಜಿಲ್ಲಾಧಿಕಾರಿಯವರು ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು. ಪುತ್ತೂರಿನ ಮಹಾಲಿಂಗೇಶ್ವರ ದೇವರ ಬಗ್ಗೆ ತನಗೆ ಅಪಾರವಾದ ಗೌರವವಿದ್ದು, ಆಮಂತ್ರಣ ವಿಚಾರದಲ್ಲಿ ರಸ್ತೆಯಲ್ಲಿ ಚರ್ಚೆ ಮಾಡುತ್ತಾ, ರಾಸ್ತಾ ರೋಕೋ, ಧರಣಿ, ಬಂದ್ ಮಾಡಿ ಭಕ್ತರ ಭಾವನೆಗಳಿಗೆ ಚ್ಯುತಿ ತರುವುದು ಸರಿಯಲ್ಲ ಎಂದರು. ಮೈಸೂರು ಚಾಮುಂಡೇಶ್ವರಿ ಉತ್ಸವ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಜಾತ್ರೋತ್ಸವದಲ್ಲಿಯೂ ನನ್ನ ಹೆಸರು ಮುದ್ರಿಸಲಾಗಿತ್ತು. ಆದರೆ ಎಲ್ಲಿಯೂ ಲೋಪ ಆಗಿಲ್ಲ. ಧಾರ್ಮಿಕ ವಿಧಿವಿಧಾನಗಳಿಗೂ ಲೋಪವಾಗಿಲ್ಲ, ಜಿಲ್ಲಾಧಿಕಾರಿಗೆ ಸಮಾಜದಲ್ಲಿ ಗೌರವವಿದ್ದು, ಕ್ಷುಲ್ಲಕ ವಿಚಾರಗಳನ್ನು ಎಳೆದು ತರುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ವರದಿ ಕೃಪೆ : ಸಂಜೆವಾಣಿ

Write A Comment