ವಿಟ್ಲ, ಮಾ.18: ಖಚಿತ ಮಾಹಿತಿ ಮೇರೆಗೆ ದ ಕ ಜಿಲ್ಲೆಯಲ್ಲಿ12 ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾದ ಮೂರು ಮಂದಿ ಅಂತರಾಜ್ಯ ದರೋಡೆಕೋರರನ್ನು ಬಂಟ್ವಾಳ ವೃತ್ತ ನಿರೀಕ್ಷಕರ ನೇತೃತ್ವದ ವಿಟ್ಲ ಪೊಲೀಸರ ತಂಡ ಬಂಧಿಸಿದ ಘಟನೆ ಗುರುವಾರ ಬೆಳಗ್ಗಿನ ಜಾವ ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಸಾರಡ್ಕ ಚೆಕ್ಪೋಸ್ಟ್ ಬಳಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಚಂದ್ಕೂರು ನಿವಾಸಿ ಕೆಂಪಯ್ಯ ಯಾನೆ ಹರೀಶ್ ಶೆಟ್ಟಿ ಯಾನೆ ರವಿ (45), ಮಂಜೇಶ್ವರ ಬೇಕೂರು ಅಗರ್ತಮೂಲೆ ನಿವಾಸಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ (30), ಮಂಗಳೂರು ಕಲ್ಲಬೆಟ್ಟು ಸುವರ್ಣನಗರ ನಿವಾಸಿ ಸತೀಶ್ ಭಂಡಾರಿ ಯಾನೆ ಸತೀಶ್ (52) ಬಂಧಿತ ಆರೋಪಿಗಳಾಗಿದ್ದಾರೆ. ಮೀಯಪದವು ನಿವಾಸಿ ಆಶ್ರಫ್ ಯಾನೆ ಚಿಲ್ಲಿ ಅಶ್ರಫ್ ಪ್ರಕರಣದ ಇನ್ನೊಬ್ಬ ಆರೋಪಿಯಾಗಿದ್ದು ವಿದೇಶಕ್ಕೆ ಪಲಾಯನ ಮಾಡಿದ್ದಾನೆ. ಇವರಿಂದ ಕಳವುಗೈದ ಒಟ್ಟು ಮೂರು ಕಾರು, ಎರಡು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಹಲವು ಪ್ರಕರಣದ ಆರೋಪಿಗಳು:
ವಿಟ್ಲ ಠಾಣಾ ವ್ಯಾಪ್ತಿಯ ಅನಂತೇಶ್ವರ ದೇವಸ್ಥಾನ ಸಮೀಪ ಅಡಿಕೆ ವ್ಯಾಪಾರಿಗೆ ಮೆಣಸಿನ ಪುಡಿ ಎರಚಿ ನಾಲ್ಕೂವರೆ ಲಕ್ಷ ದರೋಡೆ ಯತ್ನ, ಸಾಲೆತ್ತೂರು ವೈನ್ ಶಾಪ್ ಬಾಗಿಲು ಮುರಿದು ನಗದು ಕಳುವು, ಕನ್ಯಾನ ಕುಡ್ಪಲ್ತಡ್ಕ ಬೈಕ್ ಕಳ್ಳತನ ಪ್ರಕರಣ, ಮೂಡಬಿದ್ರೆ ಠಾಣಾ ಸರಹದ್ದಿನಲ್ಲಿ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹಣ ದರೋಡೆ, ಕ್ಯಾಂಟೀನ್ ವ್ಯಾಪಾರಿಯ ಚಿನ್ನದ ಸರ ಹಾಗೂ ಹಣ ದರೋಡೆ, ಎರಡು 800 ಕಾರು ಹಾಗೂ ಬೈಕ್ ಕಳವು ಮಾಡಿದ ಪ್ರಕರಣ, ಉಳ್ಳಾಲ ಠಾಣೆಯ ನಾಟೆಕಲ್ಲು ಸಮಿಪ ವಾಹನ ನಿಲ್ಲಿಸಿ ನಾಲ್ಕೂವರೆ ಲಕ್ಷ ದರೋಡೆ, ತೊಕ್ಕೊಟ್ಟು ಬಳಿ ವಾಹನ ತಡೆದು ಹಲ್ಲೆ ನಡೆಸಿ ಒಂದುವರೆ ಲಕ್ಷ ದರೋಡೆ, ಮಾರುತಿ 800 ಕಳವು ಪ್ರಕರಣ, ಮಂಗಳೂರು ಗ್ರಾಮಾಂತರ ಠಾಣೆಯ ಕುಲಶೇಖರದಲ್ಲಿ 800 ಕಾರು ಕಳವು ಮಾಡಿದ ಪ್ರಕರಣದಲ್ಲಿ ಈ ತಂಡ ಭಾಗಿಯಾಗಿತ್ತು.
ರವಿ ಪೂಜಾರಿ ಸಹಚರ:
ಕೆಂಪಯ್ಯ ಯಾನೆ ಹರೀಶ್ ಶೆಟ್ಟಿಯ ಮೇಲೆ ಹೈದರಬಾದ್ ರಾಜಲಕ್ಷ್ಮೀ ಜುವೆಲ್ಲರ್ಸ್ 25 ಕೆಜಿ ಬಂಗಾರ ಕಳವು, ಬೆಂಗಳೂರು ಬಣಸವಾಡಿ ಚೆಮ್ಮನ್ನೂರು ಜುವೆಲ್ಲರ್ಸ್ ೨೧ಕೆಜಿ ಬಂಗಾರ ಕಳವು, ಆರ್ ಟಿ ನಗರ ಕಾರ್ಪೊರೇಷನ್ ಬ್ಯಾಂಕ್ಕೋ1.91ಟಿ ದರೋಡೆ, ಮುಂಬೈಯಲ್ಲಿ 5 ದರೋಡೆ ಪ್ರಕರಣಗಳಿದೆ. 8ವರ್ಷಗಳ ಕಾಲ ಜೈಲಿನಲ್ಲಿದ್ದ ಆರೋಪಿಯಾಗಿರುತ್ತಾನೆ. ಅಲ್ಲದೇ ದರೋಡೆ ಪ್ರಕರಣದಲ್ಲಿ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡವನಾಗಿರುತ್ತಾನೆ. ಈತ ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದಾನೆ.
ಸತೀಶ್ ಭಂಡಾರಿ ಮುಂಬೈಯಲ್ಲಿ ದರೋಡೆ, ಕೊಲೆ ಪ್ರಕರಣದ ಆರೋಪಿಯಾಗಿದ್ದು, ಪಣಂಬೂರು ಕೂಳೂರುನಲ್ಲಿ ಸುಮಾರು 6 ವರ್ಷಗಳ ಹಿಂದೆ ನಡೆದ ಶೂಟೌಟ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉಮ್ಮರ್ ಫಾರೂಕ್ ಕೇರಳದ ಕುಂಬಳೆ ಮತ್ತು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ದರೋಡೆ ಹಾಗು ಕೊಲೆ ಪ್ರಕರಣದ ಆರೋಪಿಯಾಗಿರುತ್ತಾನೆ. ಈ ತಂಡವನ್ನು ಬಂಧಿಸುವ ಮೂಲಕ ದಕ್ಷಿಣ ಕನ್ನಡ, ಬೆಂಗಳೂರು, ಕಾಸರಗೋಡು, ಹೈದರಾಬಾದ್, ಮುಂಬಯಿ ಮೂಲದ ಸುಮಾರು 24 ಪ್ರಕರಣಗಳನ್ನು ವಿಟ್ಲ ಪೊಲೀಸರು ಬೇಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶರಣಪ್ಪ ಎಸ್. ಡಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸಂಟ್ ಶಾಂತಕುಮಾರ್, ಬಂಟ್ವಾಳ ಡಿವೈಎಸ್ಪಿ ಭಾಸ್ಕರ ರೈ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಕೆ. ಯು. ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಹಾಯಕ ಉಪನಿರೀಕ್ಷಕರಾದ ಕಿಟ್ಟುಮೂಲ್ಯ, ರುಕ್ಮಯ, ಸಿಬ್ಬಂದಿಗಳಾದ ಬಾಲಕೃಷ್ಣ, ಪ್ರವೀಣ್ ರೈ, ರಕ್ಷಿತ್ ರೈ, ಭವಿತ್ ರೈ, ಲೋಕೇಶ್, ಪ್ರವೀಣ್ ಕುಮಾರ್, ರಮೇಶ್, ಬಂಟ್ವಾಳ ಪೊಲೀಸು ವೃತ್ತ ನಿರೀಕ್ಷಕರ ತಂಡದ ಗಿರೀಶ್, ಜನಾರ್ಧನ, ನರೇಶ್ ಶೆಟ್ಟಿ, ಇಲಾಖಾ ಚಾಲಕ ನಾರಾಯಣ, ಕಂಪ್ಯೂಟರ್ ವಿಭಾಗದ ಪ್ರಶಾಂತ, ಸಂಪತ್ ಭಾಗವಹಿಸಿದ್ದರು.
