
__ಸತೀಶ್ ಕಾಪಿಕಾಡ್
ಮಂಗಳೂರು, ಮಾ.11: ಮಹಾನಗರಪಾಲಿಕೆಯ 18ನೆ ಅವಧಿಯ ಮೇಯರ್ ಆಗಿ ಪಾಲಿಕೆಯ ಹಿರಿಯ ಸದಸ್ಯ ಮರಕಡ 14ನೇ ವಾರ್ಡಿನ (ಕಾಂಗ್ರೆಸ್ ಪಕ್ಷದ) ಹರಿನಾಥ್ ಹಾಗೂ ಉಪಮೇಯರ್ ಆಗಿ ಬಿಜೆಪಿಯ ಸುಮಿತ್ರಾ ಕರಿಯಾ ಅವರು ಅಯ್ಕೆಯಾಗಿದ್ದಾರೆ.ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮನಪಾ ಮಂಗಳಾ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಚುನಾವಣಾ ಪ್ರಕ್ರಿಯೆ ಬಳಿಕ ಮೇಯರ್ ಹಾಗೂ ಉಪಮೇಯರ್ ಹೆಸರನ್ನು ಘೋಷಣೆ ಮಾಡಲಾಯಿತು.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಹರಿನಾಥ್ ಹಾಗೂ ಬಿಜೆಪಿಯ ರೂಪಾ.ಡಿ ಬಂಗೇರಾ ನಡುವೆ ನಡೆದ ಸ್ಫರ್ಧೆ ನಡೆಯಿತು. ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 65 ಸದಸ್ಯರಲ್ಲಿ 62 ಸದಸ್ಯರು ಮಾತ್ರ ಇಂದಿನ ಮೇಯರ್ ಅಯ್ಕೆ ಚುನಾವಣೆಯಲ್ಲಿ ಪಾಲ್ಗೊಂಡಿದ್ದು, ಕಾಂಗ್ರೆಸ್‌ನ ಹರಿನಾಥ್ ಅವರಿಗೆ 36 ಮತಗಳು ಲಭಿಸಿದರೆ ರೂಪಾ.ಡಿ ಬಂಗೇರಾ ಅವರಿಗೆ 20 ಮತಗಳು ಲಭಿಸಿವೆ. ಉಳಿದ ಸದಸ್ಯರು ತಟಸ್ಥರಾಗಿ ಉಳಿದರು.
ಉಪಮೇಯರ್ ಆಗಿ ಬಿಜೆಪಿಯ ( ಸುರತ್ಕಲ್ ವಾರ್ಡಿನ) ಸುಮಿತ್ರಾ ಕರಿಯಾ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಉಪ ಮೇಯರ್ ಸ್ಥಾನವು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದುದ್ದರಿಂದ, ಕಾಂಗ್ರೆಸ್‌ನಲ್ಲಿ ಈ ಮೀಸಲಾತಿಯಡಿ ಅರ್ಹ ಅಭ್ಯರ್ಥಿಗಳು ಇಲ್ಲವಾದ ಕಾರಣ ಬಿಜೆಪಿಯ ಪರಿಶಿಷ್ಟ ಪಂಗಡದ ಏಕೈಕ ಮಹಿಳೆ ಸುಮಿತ್ರಾ ಕರಿಯಾ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಮನಪಾ ಅಯುಕ್ತ ಗೋಪಾಲಕೃಷ್ಣ, ನಿರ್ಗಮನ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ನಿರ್ಗಮನ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ಮೊದಲಾದವರು ಈ ಸಂದರ್ಭದಲ್ಲಿ ನೂತನ ಮೇಯರ್ ಹಾಗೂ ಉಪಮೇಯರ್‌ಗಳಿಗೆ ಅಭಿನಂಧನೆ ಸಲ್ಲಿಸಿದರು.
60 ಸದಸ್ಯರಿರುವ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2, ಸಿಪಿಎಂ, ಎಸ್‌ಡಿಪಿಐ ಹಾಗೂ ಪಕ್ಷೇತರ ತಲಾ ಒಬ್ಬರು ಸದಸ್ಯರನ್ನು ಹೊಂದಿದೆ. ಪ್ರಸಕ್ತ ಸಾಲಿನ ಮೇಯರ್ ಗಾದಿಯು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ,ಉಪ ಮೇಯರ್ ಪ.ಪಂ. ಮಹಿಳೆಗೆ ಮೀಸಲಾಗಿತ್ತು.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರೊಳಗೆ ತೀವ್ರ ಸ್ಪರ್ಧೆ.
ಪ್ರಸಕ್ತ ಸಾಲಿನ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್ ಸದಸ್ಯರೊಳಗೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಮೇಯರ್ ಸ್ಥಾನದ ಆಕಾಂಕ್ಷಿಗಳ ಪಟ್ಟಿಯು ದೊಡ್ಡದಾಗಿದ್ದ ಕಾರಣ ನಗರದ ಸರ್ಕಿಟ್ ಹೌಸ್‌ನಲ್ಲಿ ಗುರುವಾರ ರಾತ್ರಿಯವರೆಗೂ ಪಕ್ಷದ ಪಾಳಯದಲ್ಲಿ ಬಿರುಸಿನ ಚರ್ಚೆ ನಡೆದಿದ್ದು, ಅಂತಿಮವಾಗಿ ಪಾಲಿಕೆಯ ಹಿರಿಯ ಸದಸ್ಯ ಮರಕಡ 14ನೇ ವಾರ್ಡಿನ ಹರಿನಾಥ್ ಅವರ ಹೆಸರನ್ನು ಮೇಯರ್ ಸ್ಥಾನಕ್ಕೆ ಪಕ್ಷ ಅಯ್ಕೆ ಮಾಡಿದೆ.
ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಮೇಯರ್ ಸ್ಥಾನ ನೀಡಬೇಕೆಂದು ಕಾಂಗ್ರೆಸ್‌ನ ಒಂದು ಗುಂಪಿನಿಂದ ತೀವ್ರವಾದ ಒತ್ತಡ ಬಂದ ಹಿನ್ನೆಲೆಯಲ್ಲಿ ಮೊದಲಿಗೆ ಮೇಯರ್ ಸ್ಥಾನಕ್ಕೆ ಕುಂಜತ್‌ಬೈಲ್ ವಾರ್ಡಿನ ಮಹಮ್ಮದ್ ಅವರ ಹೆಸರು ಬಲವಾಗಿ ಕೇಳಿ ಬಂದಿತ್ತು. ಜೊತೆಗೆ ಪಾಲಿಕೆಯ ಹಿರಿಯ ಸದಸ್ಯರಾಗಿರುವ ಭಾಸ್ಕರ್ ಮೊಯ್ಲಿ, ಯುವ ಸದಸ್ಯರಾದ ನವೀನ್ ಡಿಸೋಜಾ, ದೀಪಕ್ ಪೂಜಾರಿ, ಅಬ್ದುಲ್ ರವೂಫ್ ಹೆಸರು ಮೇಯರ್ ರೆಸ್‌ನಲ್ಲಿತ್ತು. ಆದರೆ ಮೇಯರ್ ಆಯ್ಕೆ ಸಂಬಂಧ ಮಾ.10ರಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ನೇತ್ರತ್ವದಲ್ಲಿ ನಡೆದ ಶಾಸಕರು, ಸಚಿವರು, ಸದಸ್ಯರನ್ನೊಳಗೊಂಡ ಪಕ್ಷದ ಮುಖಂಡರ ಸಭೆಯಲ್ಲಿ ಹರಿನಾಥ್ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.
ಈ ಬಾರಿ ಮೇಯರ್ ಸ್ಥಾನವನ್ನು ಮುಸ್ಲಿಮ್ ಅಲ್ಪಸಂಖ್ಯಾತ ಅಭ್ಯರ್ಥಿಗೆ ಕೊಡಬೇಕೆಂಬ ಆಗ್ರಹ ಕೇಳಿ ಬಂದಿರುವುದು ನಿಜ. ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.

ಉಪ ಮೇಯರ್ ಬಿಜೆಪಿಗೆ : ಮೀಸಲಾತಿ ಪ್ರಭಾವದಿಂದ ಬಿಜೆಪಿಗೆ ಒಲಿದ ಅದೃಷ್ಟ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಾಬಲ್ಯವನ್ನು ಹೊಂದಿದ್ದರೂ ಮೀಸಲಾತಿಯ ಹಿನ್ನೆಲೆಯಲ್ಲಿ ಈ ಬಾರಿ ಉಪ ಮೇಯರ್ ಸ್ಥಾನ ಬಿಜೆಪಿ ಅಭ್ಯರ್ಥಿ ಪಾಲಾಗಿದೆ. ಉಪ ಮೇಯರ್ ಸ್ಥಾನವು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿರುವುದರಿಂದ ಕಾಂಗ್ರೆಸ್‌ನಲ್ಲಿ ಈ ಮೀಸಲಾತಿಯಡಿ ಅರ್ಹ ಅಭ್ಯರ್ಥಿಗಳು ಇಲ್ಲವಾದ ಕಾರಣ ಬಿಜೆಪಿಯ ಪರಿಶಿಷ್ಟ ಪಂಗಡದ ಏಕೈಕ ಮಹಿಳೆ ಸುಮಿತ್ರಾ ಕರಿಯಾ ಅವರಿಗೆ ಅನಾಯಾಸವಾಗಿ ಯಾವೂದೇ ಪೈಪೋಟಿ ಇಲ್ಲದೇ ಉಪ ಮೇಯರ್ ಸ್ಥಾನ ಲಭಿಸಿದೆ.
2012-13ನೇ ಅವಧಿಯಲ್ಲಿ ಕಾಂಗ್ರೆಸ್‌ಗೆ ಒಲಿದಿತ್ತು ಅದೃಷ್ಟ :
2012-13ನೇ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿತ್ತಾದರೂ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿಯ ನಾಮಪತ್ರದಲ್ಲಿ ಆದ ಕಣ್ತಪ್ಪಿನಿಂದಾಗಿ ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಒಲಿದಿತ್ತು. ಆದರೆ ಈ ಬಾರಿ ಉಪ ಮೇಯರ್ ಸ್ಥಾನ ಬಿಜೆಪಿಗೆ ಮೀಸಲಾತಿ ಕಾರಣದಿಂದ ಲಭ್ಯವಾಗಿದೆ.
ಸ್ಥಾಯಿ ಸಮಿತಿ ಚುನಾವಣೆ :ಇದೇ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಕೂಡ ನಡೆಯಿತು.
ಮೇಯರ್ ಆಯ್ಕೆಯಲ್ಲಿ ಮುಸ್ಲಿಮ್ ಕಾರ್ಪೊರೇಟರ್‌ಗಳ ನಿರ್ಲಕ್ಷ : ಆರೋಪ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈವರೆಗೆ 28 ಮಂದಿ ಮೇಯರ್ ಹುದ್ದೆಯನ್ನು ಅಲಂಕರಿಸಿದ್ದು, ಈ ಪೈಕಿ ಮೂರು ಬಾರಿ ಮಾತ್ರ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ನಿಂದ ಅವಕಾಶ ನೀಡಲಾಗಿತ್ತು. 1985ರಲ್ಲಿ ಖಾದರ್ ಹಾಜಿ, 2001ರಲ್ಲಿ ಅಬ್ದುಲ್ ಅಝೀಝ್ ಮತ್ತು 2006ರಲ್ಲಿ ಕೆ. ಅಶ್ರಫ್ ಮೇಯರ್ ಸ್ಥಾನವನ್ನು ಅಲಂಕರಿಸಿದ್ದರು. ಅನಂತರ ಬಿಜೆಪಿ ಮಾಡಿದ ಎಡವಟ್ಟಿನಿಂದ ವಿಪಕ್ಷದಲ್ಲಿದ್ದ ಕಾಂಗ್ರೆಸ್‌ನ ಗುಲ್ಝಾರ್ ಬಾನುರಿಗೆ ಮೇಯರ್ ಸ್ಥಾನ ಅನಾಯಾಸವಾಗಿ ಸಿಕ್ಕಿತ್ತು.
3.75 ಲಕ್ಷ ಮುಸ್ಲಿಮ್ ಜನಸಂಖ್ಯೆ ಹೊಂದಿರುವ ದ.ಕ. ಜಿಲ್ಲೆಯಲ್ಲಿ ಮುಸ್ಲಿಮರು ಪ್ರತಿ ಚುನಾವಣೆಯಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿದ್ದು, ಬಹುತೇಕ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದು ಗಮನಾರ್ಹ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಕಾಂಗ್ರೆಸ್ ಪಕ್ಷದ ಶಾಸಕರ ಗೆಲುವಿನಲ್ಲೂ ಮುಸ್ಲಿಮರ ಮತಗಳು ನಿರ್ಣಾಯಕವಾಗಿದ್ದವು. ಆದರೂ ಜಿಲ್ಲೆಯಲ್ಲಿ ಅಧಿಕಾರದ ವಿಷಯದಲ್ಲಿ ಮುಸ್ಲಿಮರನ್ನು ದೂರ ಇಡಲಾಗುತ್ತಿವೆ ಎನ್ನುವ ಅಸಮಾಧಾನದ ಮಾತುಗಳು ಕಾಂಗ್ರೆಸ್‌ನ ಮುಸ್ಲಿಮ್ ಅಲ್ಪಸಂಖ್ಯಾತ ಮುಖಂಡರಿಂದ ಕೇಳಿಬಂದಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಚುನಾವಣೆ ಸಂದರ್ಭ ಹಲವು ವಾರ್ಡ್‌ಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಾಲಿಗೆ ಮುಸ್ಲಿಮ್ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಆದರೆ ಮೇಯರ್ ಆಕಾಂಕ್ಷಿಗಳ ಆಯ್ಕೆ ಸಂದರ್ಭ ಇತರ ಸಮುದಾಯದ ಅಭ್ಯರ್ಥಿಗಳಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತದೆ. ಸುಮಾರು 30 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿರುವ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಮನ್ನಣೆ ನೀಡಿಲ್ಲ. ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.