ಕನ್ನಡ ವಾರ್ತೆಗಳು

ಆಟವಾಡುತ್ತಿದ್ದಾಗ ಕುಸಿದು ಬಿದ್ದ ಗೇಟ್‌ನಡಿಗೆ ಸಿಲುಕಿ ಐದರ ಬಾಲೆ ಸಾವು

Pinterest LinkedIn Tumblr

ಮಂಗಳೂರು, ಮಾ.4: ಆಟವಾಡುತ್ತಿದ್ದಾಗ ಮನೆಯ ಗೇಟ್ ಪಿಲ್ಲರ್ ಸಹಿತ ಕುಸಿದು ಬಿದ್ದ ಪರಿಣಾಮ ಐದರ ಹರೆಯದ ಎಳೆಯ ಬಾಲಕಿಯೋರ್ವಳು ಸಾವನ್ನಪ್ಪಿದ ದುರಂತ ಘಟನೆ ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶಭವನದಲ್ಲಿ ನಿನ್ನೆ ಸಂಭವಿಸಿದೆ.

ಜಾರ್ಖಂಡ್ ಮೂಲದವರಾಗಿದ್ದು, ಇತ್ತೀಚೆಗಷ್ಟೇ ಆಕಾಶಭವನದಲ್ಲಿ ಆನಂದ ನಗರದ ಎರಡನೇ ಅಡ್ಡರಸ್ತೆಯ ಬಾಡಿಗೆಮನೆಯೊಂದರಲ್ಲಿ ಸಂಸಾರ ಹೂಡಿದ್ದು, ಮಹಮ್ಮದ್ ಮನ್ಸೂರ್-ಅಮೀನಾ ಪರ್ವಿನ್ ದಂಪತಿಯ ಪುತ್ರಿ ಆಯಿಷಾ ಪರ್ವಿನ್ (5) ಮೃತ ಬಾಲಕಿಯಾಗಿದ್ದಾಳೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗ ಹಿರಿಯವನಾಗಿದ್ದು, ಆಯಿಷಾ ಕಿರಿಯವಳಾಗಿದ್ದಳು.

ನಿನ್ನೆ ಸಂಜೆ ಮೂವರು ಮಕ್ಕಳು ಮನೆಯ ಗೇಟನ್ನು ಹಿಡಿದುಕೊಂಡು ಆಟವಾಡುತ್ತಿದ್ದ ಸಂದರ್ಭ ಕಾಂಪೌಂಡ್‌ನ ಪಿಲ್ಲರ್ ಸಹಿತ ಗೇಟ್ ಕುಸಿದು ಬಿದ್ದಿತ್ತು. ಅದರಡಿಯಲ್ಲಿ ಸಿಲುಕಿದ ಆಯಿಷಾಳ ತಲೆಗೆ ತೀವ್ರ ಏಟು ಬಿದ್ದಿತ್ತು. ನೆರೆಕರೆಯವರು ಸೇರಿಕೊಂಡು ಮಗುವನ್ನು ಅವಶೇಷಗಳಡಿಯಿಂದ ಎತ್ತಿ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಕೊನೆಯುಸಿರೆಳೆದಿತ್ತು. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment