ಕನ್ನಡ ವಾರ್ತೆಗಳು

ಉದ್ಯೋಗ ಮತ್ತು ಕೌಶಲ್ಯ ತರಬೇತಿ ಶಿಬಿರ : 124 ಮಂದಿಗೆ ಸ್ಥಳದಲ್ಲೇ ಉದ್ಯೋಗ ಪತ್ರ

Pinterest LinkedIn Tumblr

sahyadri_udyoga_mela_1

ಮಂಗಳೂರು, ಫೆ. 28: ಕೇಂದ್ರ ಸರಕಾರದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ಉದ್ಯೋಗ ಮತ್ತು ಕೌಶಲ್ಯ ತರಬೇತಿ ಶಿಬಿರದಲ್ಲಿ 3000 ಮಂದಿ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದು, 124 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ಪತ್ರ ನೀಡಿ ಉದ್ಯೋಗಕ್ಕೆ ಆಯ್ಕೆ ಮಾಡಲಾಗಿದೆ.

900 ಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ಆಯ್ಕೆ ಮಾಡಲಾಗಿದ್ದು, ಮುಂದಿನ 15 ದಿನಗಳಲ್ಲಿ ಮತ್ತೊಂದು ಸುತ್ತಿನ ಆಯ್ಕೆ ಪ್ರಕ್ರಿಯೆ ಮೂಲಕ ಆಯ್ಕೆ ಪತ್ರ ನೀಡಲಾಗುವುದು. ಉದ್ಯೋಗ ದೊರಕದ, ಶಿಬಿರದಲ್ಲಿ ನೋಂದಣಿ ಮಾಡಿಕೊಂಡಿರುವ 500 ಮಂದಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ತರಬೇತಿಗೆ ಆಸಕ್ತಿ ವ್ಯಕ್ತಪಡಿಸಿದ್ದು, ಅವರಿಗೆ ಒಂದರಿಂದ ಒಂದೂವರೆ ತಿಂಗಳ ಕೌಶಲ್ಯ ತರಬೇತಿಯ ಮೂಲಕ ಉದ್ಯೋಗಕ್ಕೆ ಸಿದ್ಧಗೊಳಿಸಲಾಗುವುದು ಎಂದು ಶಿಬಿರಕ್ಕೆ ಸಹಕಾರ ನೀಡಿರುವ ರೂಮನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನಿಷ್ ಕುಮಾರ್ ತಿಳಿಸಿದರು.

sahyadri_udyoga_mela_2 sahyadri_udyoga_mela_3 sahyadri_udyoga_mela_4 sahyadri_udyoga_mela_5 sahyadri_udyoga_mela_6

ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಈ ವಿಷಯ ತಿಳಿಸಿದ ಅವರು, ಶಿಬಿರದಲ್ಲಿ 64 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, ಅದರಲ್ಲಿ 20 ಕಂಪನಿಗಳು ಮಂಗಳೂರು ಮೂಲದ್ದಾಗಿವೆ ಎಂದರು. ಸಮಾರೋಪ ಸಮಾರಂಭದಲ್ಲಿ ಸ್ಥಳದಲ್ಲೇ ಉದ್ಯೋಗ ಪಡೆದ 8 ಮಂದಿ ಅಭ್ಯರ್ಥಿಗಳಿಗೆ ವೇದಿಕೆಯಲ್ಲಿ ಉದ್ಯೋಗ ಪತ್ರ ಹಸ್ತಾಂತರಿಸಲಾಯಿತು.

ಈ ಸಂದರ್ಭ ಅನುಭವ ಹಂಚಿಕೊಂಡ ಅಭ್ಯರ್ಥಿ ಸೂಕ್ತ ರಾವ್, ಉದ್ಯೋಗ ಶಿಬಿರದ ಮೂಲಕ ಉದ್ಯೋಗಾಕಾಂಕ್ಷಿಗಳ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂತಹ ಉದ್ಯೋಗ ಶಿಬಿರಗಳು ಇನ್ನಷ್ಟು ನಡೆಯಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಮನಪಾ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಭಂಡಾರಿ ಫೌಂಡೇಶನ್‌ನ ಅಧ್ಯಕ್ಷ ಮಂಜುನಾಥ ಭಂಡಾರಿ, ರೂಮನ್ ಟೆಕ್ನಾಜಿಯ ಪ್ರಕಾಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದ ಮುಖ್ಯ ಸಂಯೋಜಕ ರಾಜೇಶ್ ನಾಯ್ಕಿ ಉಳಿಪಾಡಿ ವಂದಿಸಿದರು.

ಎಂಆರ್‌ಪಿಎಲ್ ಹಂತ- 4, ಐಟಿ ಪಾರ್ಕ್ ವಿಸ್ತರಣೆಯಿಂದ ಉದ್ಯೋಗಾವಕಾಶ:

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಯುವಕರಿಗೆ ಉದ್ಯೋಗ ಕಲ್ಪಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದ ಹಿನ್ನೆಲೆಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಯಶಸ್ವಿಯಾಗಿ ನೆರವೇರಿದೆ ಎಂದರು.

ಶೀಘ್ರದಲ್ಲೇ ಎಂಆರ್‌ಪಿಎಲ್‌ನ ನಾಲ್ಕನೆ ಹಂತ ಆರಂಭಗೊಳ್ಳಲಿದ್ದು ಐಟಿ ಪಾರ್ಕ್ ವಿಸ್ತರಣೆಯಾಗುವ ಮೂಲಕ ಜಿಲ್ಲೆಯಲ್ಲಿ ಇನ್ನಷ್ಟು ಉದ್ಯೋಗಾಕವಾಶಗಳು ಸೃಷ್ಟಿಯಾಗಲಿವೆ. ಯುವಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವಲ್ಲಿ ಈ ಶಿಬಿರ ಪ್ರೇರಣೆ ನೀಡಿದೆ ಎಂದು ಸಂಸದ ನಳಿನ್ ತಿಳಿಸಿದರು

Write A Comment